Site icon Vistara News

CM Siddaramaiah : ಯೋಗೇಶನಂತೆ ನಾನೂ ಶಿಕ್ಷಣದಿಂದ ವಂಚಿತನಾಗಿದ್ದೆ ಎಂದ ಸಿದ್ದರಾಮಯ್ಯ; ಹಾಗಿದ್ದರೆ ಯೋಗೇಶ ಯಾರು?

Yogesha and siddaramaiah

ಬೆಂಗಳೂರು: ಬಾಲ್ಯದಲ್ಲಿ ನಾನು ಕೂಡ ಯೋಗೇಶ್‌ ನಂತೆ ಶಾಲೆಯಿಂದ ವಂಚಿತನಾಗಿದ್ದೆ, (Siddaramaiah remembers childhood) ರಾಜಪ್ಪ ಮೇಸ್ಟ್ರು ನನ್ನನ್ನು ನೇರವಾಗಿ 5ನೇ ತರಗತಿಗೆ ದಾಖಲಾತಿ ಮಾಡಿ ಶಿಕ್ಷಣ ಸಿಗುವಂತೆ ಮಾಡಿದ್ದರಿಂದ ಇಂದು ಮುಖ್ಯಮಂತ್ರಿಯಾಗಲು (I am CM because of Rajappa Mestru) ಸಾಧ್ಯವಾಗಿದೆ- ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಬದುಕಿನ ಪುಟಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಹಾಗಿದ್ದರೆ ಅವರನ್ನು ಈ ನೆನಪಿಗೆ ಜಾರುವಂತೆ, ರಾಜಪ್ಪ ಮಾಸ್ಟ್ರನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ ಆ ಯೋಗೇಶ ಯಾರು? ಇದನ್ನು ತಿಳಿದುಕೊಳ್ಳಬೇಕಾದರೆ ನೀವು ಒಂದು ಕಥೆಯನ್ನು ಕೇಳಬೇಕು. ಅದನ್ನು ಕೇಳಲು ಚಿತ್ರದುರ್ಗ ಜಿಲ್ಲೆಗೆ ಹೋಗಬೇಕು. ಇದರ ಹಿಂದೆ ಶಾಲೆ ಬಿಟ್ಟು ಕುರಿ ಕಾಯುತ್ತಿದ್ದ ಹುಡುಗನನ್ನು ಶಾಲೆಗೆ ಸೇರಿಸಿದ ಕಥೆ ಇದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ಮಂಜಣ್ಣ ಎಂಬವರಿದ್ದಾರೆ. ಅವರ ಪುತ್ರ ಯೋಗೇಶ್‌. ವಯಸ್ಸು 11. ಶಾಲೆಗೆ ಹೋಗಿ ಪಾಠ ಕಲಿಯಬೇಕಾಗಿದ್ದ ಹುಡುಗ ಯಾವುದೋ ಕಾರಣಕ್ಕೆ ಕಳೆದ 2 ವರ್ಷದಿಂದ ಶಾಲೆ ಬಿಟ್ಟು ಕುರಿ ಕಾಯುತ್ತಿದ್ದ.

ಮಕ್ಕಳು ಶಿಕ್ಷಣ ಕಲಿತು ನಾಗರಿಕರಾಗಿ ಬೆಳೆಯಬೇಕು ಎಂದು ಆಸೆಪಡುವ ಕಾಲ ಇದು. ಆದರೆ, ಮಂಜಣ್ಣ ಮಾತ್ರ ತನ್ನ ಸ್ವಂತ ಮಗನನ್ನೇ ವಿದ್ಯೆ ಇಲ್ಲದವನಂತೆ, ಅನಾಗರಿಕನಾಗಿ ಮಾಡಲು ಹೊರಟಿದ್ದಾನಲ್ಲಾ ಎಂದು ಆದೇ ಊರಿನ ಮಹೇಂದ್ರ ಎಂಬವರಿಗೆ ಅನಿಸಿತು. ಅವರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹುಡುಗನ ಫೋಟೊ ಸಹಿತ ಹಾಕಿದರು. ಜತೆಗೆ ಮುಖ್ಯಮಂತ್ರಿಗಳ ಕಚೇರಿಯ ಗಮನಕ್ಕೂ ತಂದರು.

ತಕ್ಷಣವೇ ಕಾರ್ಯಾಚರಣೆಗೆ ಇಳಿದ ಸಿಎಂ ಕಚೇರಿ

ಮಹೇಂದ್ರ ಅವರು ಗಮನ ಸೆಳೆದ ವಿಚಾರದ ಬಗ್ಗೆ ತಕ್ಷಣವೇ ಗಮನ ಹರಿಸಿತು ಸಿಎಂ ಅವರ ಕಾರ್ಯಾಲಯ. ಕೂಡಲೇ ಬಸಾಪುರದ ಆ ಹುಡುಗನ ಪ್ರದೇಶಕ್ಕೆ ಸಂಬಂಧಿಸಿದ ಬಿಇಒ ಮತ್ತು ಅವರ ಮೂಲಕ ಶಾಲೆಯ ಶಿಕ್ಷಕರಿಗೆ ವಿಷಯ ತಲುಪಿಸಿತು. ಆ ಕೂಡಲೇ ಶಿಕ್ಷಕರು ಯೋಗೇಶ್‌ನ ಮನೆಗೆ ಹೋದರು. ತಂದೆಗೆ ವಿಚಾರವನ್ನು ತಿಳಿಸಿದರು. ಮತ್ತು ಆತನನ್ನು ಶಾಲೆಗೆ ಮರಳಿ ಕರೆತರುವಲ್ಲಿ ಯಶಸ್ವಿಯಾದರು. ಇಷ್ಟೆಲ್ಲ ಆಗಿದ್ದು ಕೇವಲ 23 ಗಂಟೆಗಳ ಅವಧಿಯಲ್ಲಿ. ಅದನ್ನು ಕೂಡಾ ಮಹೇಂದ್ರ ಅವರೇ ಖುಷಿಯಿಂದ ಹೇಳಿಕೊಂಡಿದ್ದಾರೆ. ಯೋಗೇಶ್‌ ಈಗ ಆ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ. ಸಿಎಂ ಸಿದ್ದರಾಮಯ್ಯ ಮತ್ತು ಅವರ ಕಚೇರಿ ಸಿಬ್ಬಂದಿ ಆಶೀರ್ವಾದದಿಂದ ಯೋಗೇಶ ಶಾಲೆಗೆ ಹೋಗುವಂತಾಗಿದೆ ಎಂದಿದ್ದಾರೆ ಮಹೇಂದ್ರ.

ಖುಷಿ ಹಂಚಿಕೊಂಡ ಸಿದ್ದರಾಮಯ್ಯ

ಈ ಎಲ್ಲ ಕಾರ್ಯಾಚರಣೆಗಳು ಕೇವಲ ಅಧಿಕಾರಿಗಳ ಮಟ್ಟದಲ್ಲಿ ಮುಗಿದು ಹೋಗಿಲ್ಲ. ಸ್ವತಃ ಸಿಎಂ ಅವರೇ ಮುತುವರ್ಜಿವಹಿಸಿ ಶಿಕ್ಷಣಕ್ಕೆ ಅವನನ್ನು ಎಳೆದುತಂದಿದ್ದಾರೆ. ಈ ವಿಚಾರವನ್ನು ಸ್ವತಃ ಸಿಎಂ ಅವರೇ ಹೇಳಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲೂರು ತಾಲೂಕು ಬಸಾಪುರದ ಯೋಗೇಶ್ ಎಂಬ 11 ವರ್ಷದ ಬಾಲಕ ತಂದೆ ತಾಯಿಯ ಒತ್ತಾಯಕ್ಕೆ ಮಣಿದು ಕಳೆದ 2 ವರ್ಷದಿಂದ ಶಾಲೆ ತ್ಯಜಿಸಿ ಕುರಿ ಕಾಯುವ ಕಾರ್ಯದಲ್ಲಿ ತೊಡಗಿದ್ದ. ಶಿಕ್ಷಣ ಪಡೆದು ಚಂದದ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಬಾಲಕನನ್ನು ಪೋಷಕರು ಶಾಲೆಯಿಂದ ಹೊರಗುಳಿಯುವಂತೆ ಮಾಡಿರುವ ವಿಚಾರವನ್ನು ಸ್ಥಳೀಯರಾದ ಮಹೇ೦ದ್ರ ಎಂಬುವರು ನಮ್ಮ ಕಚೇರಿ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ, ಕೂಡಲೇ ಕಾರ್ಯಪ್ರವೃತ್ತರಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಬಾಲಕನ ಮನೆಗೆ ಕಳುಹಿಸಿ, ಆತನ ತಂದೆ ತಾಯಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಹುಡುಗನನ್ನು ಶಾಲೆಗೆ ಸೇರ್ಪಡೆ ಮಾಡಿಸಲಾಗಿದೆ. ಯೋಗೇಶ್ ಈಗ ಇತರೆ ಮಕ್ಕಳಂತೆ ನಲಿಯುತ್ತಾ, ಕಲಿಯುತ್ತಾ ಹೊಸ ಬದುಕಿನೆಡೆಗೆ ಹೆಜ್ಜೆ ಹಾಕಲು ಆರಂಭಿಸಿದ್ದಾನೆ. ದೂರು ಕೇಳಿಬಂದ 24 ಗಂಟೆಗಳ ಒಳಗೆ ಯೋಗೇಶ್ ನನ್ನು ಶಾಲೆಗೆ ದಾಖಲಾತಿ ಮಾಡಿ, ತಾನೂ ಎಲ್ಲರಂತೆ ಶಿಕ್ಷಣ ಪಡೆಯಬೇಕು ಎಂಬ ಅವನ ಕನಸನ್ನು ನನಸು ಮಾಡಿದ್ದೇವೆ. ಪ್ರಾಥಮಿಕ ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು. ಮಗುವನ್ನು ಶಿಕ್ಷಣ ವಂಚಿತನಾಗಿಸುವುದು ಕಾನೂನು ರೀತ್ಯಾ ಅಪರಾಧವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಮಾತುಗಳ ಜತೆಗೆ ಹುಡುಗ ಹಿಂದೆ ಹೇಗಿದ್ದ, ಈಗ ಹೇಗಿದ್ದಾನೆ ಎಂಬ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

ರಾಜಪ್ಪ ಮೇಸ್ಟ್ರನ್ನು ನೆನಪು ಮಾಡಿಕೊಂಡ ಸಿದ್ದರಾಮಯ್ಯ

ಯೋಗೇಶ್‌ ಎಂಬ ಹುಡುಗನನ್ನು ಮರಳಿ ಶಾಲೆಗೆ ಸೇರಿಸಿದ ಸಾರ್ಥಕ ಭಾವವನ್ನು ಪ್ರಕಟಿಸುತ್ತಲೇ ಸಿದ್ದರಾಮಯ್ಯ ಮತ್ತೊಂದು ವಿಚಾರವನ್ನೂ ನೆನಪು ಮಾಡಿಕೊಂಡಿದ್ದಾರೆ. ಅದುವೇ ಅವರ ಬಾಲ್ಯ.

ʻʻಬಾಲ್ಯದಲ್ಲಿ ನಾನು ಕೂಡ ಯೋಗೇಶ್‌ ನಂತೆ ಶಾಲೆಯಿಂದ ವಂಚಿತನಾಗಿದ್ದೆ, ರಾಜಪ್ಪ ಮೇಸ್ಟ್ರು ನನ್ನನ್ನು ನೇರವಾಗಿ 5ನೇ ತರಗತಿಗೆ ದಾಖಲಾತಿ ಮಾಡಿ ಶಿಕ್ಷಣ ಸಿಗುವಂತೆ ಮಾಡಿದ್ದರಿಂದ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆʼʼ ಎಂದಿದ್ದಾರೆ.

ಇದನ್ನೂ ಓದಿ: CM Siddaramaiah : ನಂಗೂ ಡಾಕ್ಟರ್‌ ಆಗೋ ಆಸೆ ಇತ್ತು, ಮೆಡಿಕಲ್‌ ಸೀಟ್‌ ಸಿಕ್ಕಿದ್ದಿದ್ರೆ ಸಿಎಂ ಆಗ್ತಾನೇ ಇರ್ಲಿಲ್ಲ!

ನಿಮಗೇನಾದರೂ ಸಮಸ್ಯೆಯಾದರೂ ನಮ್ಮನ್ನು ಸಂಪರ್ಕಿಸಿ ಎಂದ ಸಿಎಂ

ಮರಳಿ ಶಿಕ್ಷಣದತ್ತ ಮುಖಮಾಡಿರುವ ಈ ಬಾಲಕನ ಭವಿಷ್ಯವೂ ಉಜ್ವಲವಾಗಲಿ ಎಂಬ ಹಾರೈಕೆ ನನ್ನದು. ಇಂತಹ ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ನಿಮಗೂ ಕಂಡು ಬಂದರೆ ನಮ್ಮ ಕಚೇರಿಯ@osd_cmkarnataka ಟ್ವಿಟರ್ ಖಾತೆಯನ್ನು ಸಂಪರ್ಕಿಸಿ.

Exit mobile version