ಬೆಳಗಾವಿ: ಕಾಂತರಾಜು ನೇತೃತ್ವದ ಸಮಿತಿಯಿಂದ (Committee headed by Kantharaju) 2018ರಲ್ಲಿ ಸಿದ್ಧವಾಗಿರುವ ಜಾತಿಗಣತಿ ವರದಿಯನ್ನು (Caste Census Report) ಅಂಗೀಕಾರ ಮಾಡಲು ಮೊದಲು ಅದು ನನಗೆ ಸಲ್ಲಿಕೆಯಾಗಬೇಕಲ್ಲವೇ? ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ಕೊಡಿ ಎಂದು ನಾನು ಕೇಳಿದ್ದೇನೆ. ಆದರೆ, ಅವರೇ ಇನ್ನೂ ಸಲ್ಲಿಸಿಲ್ಲ ಎಂದು ಪ್ರತಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಮಂಗಳವಾರ (ಅಕ್ಟೋಬರ್ 3) ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮಗೆ ಮೊದಲು ವರದಿಯನ್ನು ಕೊಡಬೇಕಲ್ವಾ? ಶಾಶ್ವತ ಹಿಂದುಳಿದ ಆಯೋಗವು ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸಿಎಂ ಇದ್ದಾಗ ವರದಿಯನ್ನು ತಯಾರು ಮಾಡಿದ್ದರು. ಆದರೆ, ಅವರು ವರದಿಯನ್ನು ಸ್ವೀಕಾರ ಮಾಡಿರಲಿಲ್ಲ. ಈಗ ಅಧ್ಯಕ್ಷರ ಬದಲಾವಣೆ ಆಗಿದೆ. ಈಗ ಅಧ್ಯಕ್ಷರ ಬದಲಾವಣೆ ಆಗಿದೆ. ಇದರಲ್ಲಿ ಒಂದು ಡಿಫೆಕ್ಟ್ ಇದೆ. ಆಗ ಸೆಕ್ರೆಟರಿ ಸಹಿ ಮಾಡಲಿಲ್ಲ. ಈಗಿದ್ದ ಸೆಕ್ರೆಟರಿ ಬಳಿ ಸಹಿ ಮಾಡಿಸಿ ಕೊಡಬೇಕು. ಈಗ ಇರುವ ಅಧ್ಯಕ್ಷರು ಅದನ್ನು ತಂದು ಕೊಡಬೇಕು. ಅವರು ಬಿಜೆಪಿ ನೇಮಕ ಮಾಡಿರುವ ಅಧ್ಯಕ್ಷರು, ಈಸ್ ದಿಸ್ ಪಾಸಿಬಲ್? ಎಂದು ಪ್ರಶ್ನೆ ಮಾಡಿದ್ದಾರೆ.
ವರದಿ ಕೊಟ್ಟರೆ ಪರಿಶೀಲಿಸುವೆ
ಜಾತಿಗಣತಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಈಗಾಗಲೇ ತಿಳಿಸಲಾಗಿದ್ದು, ವರದಿ ನೀಡಿದರೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಾತಿ ಗಣತಿ ಹಾಗೂ ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಬೇಕೆಂದು ನಾನೇ ಹಿಂದೆ ಆದೇಶ ಮಾಡಿದ್ದು. ಆಗ ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದರು. ನಮ್ಮ ಸರ್ಕಾರದ ಅವಧಿಯಲ್ಲಿ ವರದಿ ಪೂರ್ಣವಾಗಿರಲಿಲ್ಲ. ನಂತರ ಸಮ್ಮಿಶ್ರ ಸರ್ಕಾರ ಇರುವಾಗ ಅಂದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಪುಟ್ಟರಂಗಶೆಟ್ಟಿ ಇದ್ದರು. ಆಗ ವರದಿಯನ್ನು ಪಡೆಯಲಿಲ್ಲ. ನಂತರ ಆಯೋಗಕ್ಕೆ ಜಯಪ್ರಕಾಶ್ ಹೆಗ್ಡೆಯವರನ್ನು ಬಿಜೆಪಿ ಸರ್ಕಾರ ನೇಮಿಸಿತ್ತು. ಅವರಿಗೆ ವರದಿ ವರದಿಯನ್ನು ಸಲ್ಲಿಸುವಂತೆ ತಿಳಿಸಿಲಾಗಿದೆ, ಆದರೆ ಕೊಟ್ಟಿಲ್ಲ ಎಂದು ಜಾತಿ ಗಣತಿ ವರದಿ ಬಗ್ಗೆ ವಿವರಿಸಿದರು.
ಇದನ್ನೂ ಓದಿ: PM Narendra Modi: ಜಾತಿ ಗಣತಿಯಿಂದ ಹಿಂದೂಗಳಲ್ಲಿ ಒಡಕು ಮೂಡಿಸುತ್ತಿರುವ ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ
ಶಿವಮೊಗ್ಗದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳು ಸೇರಿದಂತೆ ಪೋಲಿಸರ ಮೇಲೆ ಕಲ್ಲು ತೂರಾಟವಾಗಿರುವ ಬಗ್ಗೆ ಮಾತನಾಡಿ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.