Site icon Vistara News

Vishwakarma Jayanti: ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆಗೆ ಕ್ರಮ: ಸಿಎಂ ಸಿದ್ದರಾಮಯ್ಯ ಭರವಸೆ

CM Siddaramaiah pays floral tributes to Vishwakarmas portrait

ಬೆಂಗಳೂರು: ಹಿಂದುಳಿದವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಇರಬೇಕು. ಕರಕುಶಲಕರ್ಮಿಗಳಿಗೆ ಇಲಾಖೆ ರಚಿಸಬೇಕು ಎಂಬ ಬೇಡಿಕೆಯ ಬಗ್ಗೆ ಪರಿಶೀಲನೆ ಮಾಡಲಾಗುವುದು. ನೇಕಾರರಿಗೆ ಇರುವ ಸೌಲಭ್ಯಗಳ ಮಾದರಿಯಲ್ಲಿ ವಿಶ್ವಕರ್ಮ ನಿಗಮಕ್ಕೆ ಸೌಲಭ್ಯಗಳು ಹಾಗೂ ಹೆಚ್ಚಿನ ಅನುದಾನ ನೀಡಲಾಗುವುದು. ಅಷ್ಟೇ ಅಲ್ಲದೆ ರಾಜ್ಯದಲ್ಲಿ ವಿಶ್ವಕರ್ಮ ಅಧ್ಯಯನ ಕೇಂದ್ರ (Vishwakarma Jayanti) ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಅವರು ಮಾತನಾಡಿ, ನಾವು ಸಮಾಜದಲ್ಲಿ ಹುಟ್ಟಿದ ಮೇಲೆ ಸಮಾಜದ ಋಣ ತೀರಿಸಬೇಕು. ಹಾಗೆ ಮಾಡುವುದೇ ನಮ್ಮೆಲ್ಲರ ಕರ್ತವ್ಯ. ನಾವು ಎಷ್ಟು ದಿನ ಬದುಕಿರುತ್ತೇವೆ ಎನ್ನುವುದು ಮುಖ್ಯ ಅಲ್ಲ. ರಾಷ್ಟ್ರ ಕವಿ ಕುವೆಂಪು ಹೇಳುವಂತೆ ಎಲ್ಲರೂ ವಿಶ್ವಮಾನವರಾಗಿಯೇ ಹುಟ್ಟಿದರೂ, ಬೆಳೆಯುವಾಗ ಅಲ್ಪ ಮಾನವರಾಗುತ್ತಾರೆ. ನಾವು ವಿಶ್ವಮಾನವರಾಗಲು ಪ್ರಯತ್ನ ಮಾಡುವುದೇ ಸಮಾಜಕ್ಕೆ ಕೊಡುವ ಕೊಡುಗೆ ಎಂದು ತಿಳಿಸಿದರು.

ನಾವು ಮನುಷ್ಯರಾಗಿ ಬಾಳುವ ಪ್ರಯತ್ನ ಮಾಡಬೇಕು. ಆದರೆ, ಕೆಲವರು ಧರ್ಮ, ಧರ್ಮಗಳ ನಡುವೆ ಸಂಘರ್ಷ, ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುತ್ತಿದ್ದಾರೆ. ಧರ್ಮ ಬದುಕಿನ ಮಾರ್ಗ. ಮನುಷ್ಯನ ಬದುಕಿಗಾಗಿ ಧರ್ಮವಿದೆ. ಯಾವ ಧರ್ಮ ಮನುಷ್ಯನನ್ನು ದ್ವೇಷಿಸುತ್ತದೆಯೋ ಅದನ್ನು ಧರ್ಮ ಎಂದು ಕರೆಯಲಾಗುವುದಿಲ್ಲ. ಬಸವಣ್ಣ ಹೇಳಿದಂತೆ ದಯೆಯೇ ಧರ್ಮದ ಮೂಲ. ಎಲ್ಲ ಧರ್ಮಗಳಿಗಿಂತ ಮನುಷ್ಯ ಧರ್ಮ ಮಿಗಿಲು. ಮನುಷ್ಯರಾಗಲು ಪ್ರಯತ್ನಿಸೋಣ. ನಾವು ಸಮಾಜದ ಋಣ ತೀರುಸುವ ಕೆಲಸ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ | Kalyana Karnataka : ಕಲ್ಯಾಣ ಕರ್ನಾಟಕದ ಶಿಕ್ಷಣಕ್ಕಾಗಿ 750 ಕೋಟಿ ರೂ.: ಸಿಎಂ ಸಿದ್ದರಾಮಯ್ಯ

ವಿಶ್ವಕರ್ಮ ನಿಗಮಕ್ಕೆ ಹೆಚ್ಚುವರಿ ಅನುದಾನ

ವಿಶ್ವಕರ್ಮ ಸಮುದಾಯದ ಮಕ್ಕಳಿಗೆ ಶಾಲೆ, ಹಾಸ್ಟೆಲ್‌ಗಳನ್ನು ನಿರ್ಮಿಸುವ ಕಾರಣಕ್ಕೆ ಸರ್ಕಾರದಿಂದ ಜಾಗ ಕೇಳಿದ್ದೀರಿ. ಎಲ್ಲಾ ಸಮುದಾಯಗಳೂ ಜಾಗ ಪಡೆದುಕೊಂಡಿವೆ. ನೀವೂ ಪಡೆದುಕೊಳ್ಳಿ. ನಮ್ಮ ಸರ್ಕಾರ ನಿಮಗೂ ಜಾಗ ಒದಗಿಸುತ್ತದೆ ಮಕ್ಕಳನ್ನು ಹೆಚ್ಚೆಚ್ಚು ಶಿಕ್ಷಿತರನ್ನಾಗಿ ಮಾಡಿ ಎಂದು ಹಾರೈಸಿದ ಅವರು, ವಿಶ್ವಕರ್ಮ ನಿಗಮಕ್ಕೆ ಮೊದಲಿನಿಂದಲೂ ಹೆಚ್ಚು ಅನುದಾನ ಕೊಡುತ್ತಾ ಬಂದಿರುವವರು ನಾವೇ. ಈಗ ಇನ್ನಷ್ಟು ಹೆಚ್ಚಿಸಬೇಕು ಎನ್ನುವ ಬೇಡಿಕೆ ಇದೆ. ಆ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಹಿಂದುಳಿದ ಸಮಾಜಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬದೇ ಹೋದರೆ ಅವು ಮುಖ್ಯ ವಾಹಿನಿಗೆ ಬರುವುದು ಕಷ್ಟ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅನೇಕ ಹಿಂದುಳಿದ ಜಾತಿಗಳ ಜಯಂತಿ ಹಾಗೂ ನಿಗಮಗಳನ್ನೂ ರಚನೆ ಮಾಡಲು ತೀರ್ಮಾನ ಮಾಡಿ ಹಣವನ್ನೂ ಒದಗಿಸಿದ್ದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮಾಜಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬದೇ ಹೋದರೆ ಅವು ಮುಖ್ಯ ವಾಹಿನಿಗೆ ಬರುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಗಳಿಸಿ 76 ವರ್ಷಗಳಾಗಿದ್ದರೂ ಸಾಮಾಜಿಕ, ಆರ್ಥಿಕ ಅಸಮಾನತೆ ಇದೆ. ಸಂವಿಧಾನದಲ್ಲಿ ಎಲ್ಲರೂ ಸಮಾನರು. ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿ ಮಾಡುವ ಬದ್ಧತೆ ಇರುವವರ ಬಳಿ ಅಧಿಕಾರ ಇದ್ದರೆ ಸಮಾನತೆ ತರಲು ಸಾಧ್ಯ. ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡಬೇಕು. ಬಹುತ್ವದ ಸಮಾಜ ಉಳ್ಳ ನಾವು ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡಬೇಕು. ವೈವಿಧ್ಯತೆಯಲ್ಲಿ ಏಕತೆ ಕಾಣಬೇಕು. ಒಂದು ಧರ್ಮ ಆಧಾರಿತ ದೇಶವಲ್ಲ ಇದು. ಒಂದು ಜಾತಿ, ಭಾಷೆ ಆಧಾರಿತ ದೇಶವಲ್ಲ. ಸಹಿಷ್ಣುತೆ, ಸಹಬಾಳ್ವೆ ಎಂದು ಸಂವಿಧಾನ ಹೇಳುತ್ತದೆ ಎಂದು ನುಡಿದರು.

ಇದನ್ನೂ ಓದಿ | Power Point with HPK : ಸಿದ್ದರಾಮಯ್ಯ ಬಗ್ಗೆ ಬಿ.ಕೆ. ಹರಿಪ್ರಸಾದ್‌ ಮಾತನಾಡಿದ್ದು ತಪ್ಪು ಎಂದ ಚಲುವರಾಯಸ್ವಾಮಿ

ಜಯಂತಿಗಳಿಗೆ ಬರಲು ಹಿಂದೇಟು ಹಾಕುವುದಿಲ್ಲ

ಸರ್ಕಾರ ಆಚರಿಸುವ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾನು ಹಿಂದೇಟು ಹಾಕುವುದಿಲ್ಲ. ಸರ್ಕಾರದ ವತಿಯಿಂದ ಜನಾಂಗದ ಕಾರ್ಯಕ್ರಮ ಆಚರಿಸಿದರೆ ಹೆಚ್ಚು ಮಹತ್ವ ಇರುತ್ತದೆ. ಹಾಗಾಗಿ ಸರ್ಕಾರವೇ ಅನೇಕ ಹಿಂದುಳಿದ ಜಯಂತ್ಯೋತ್ಸವವನ್ನು ಆಚರಣೆ ಮಾಡುತ್ತಿದೆ ಎಂದು ಸಿಎಂ ತಿಳಿಸಿದರು.

ಮಧುಗಿರಿ ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮಿ ಸಂಸ್ಥಾನ ಮತ್ತು ವಿಶ್ವಕರ್ಮ ಸಂಪನ್ಮೂಲ ಮಠದ ಶ್ರೀ ಡಾ.ನೀಲಕಂಠಚಾರ್ಯ ಮಹಾಸ್ವಾಮಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯದ ಮುಖಂಡರು ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version