ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಎಂದಿದ್ದ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಅಧಿಕಾರಿಗೆ ಶಾಸಕ ಸುರೇಶ್ ಕುಮಾರ್ ನೇತೃತ್ವದ ಬಿಜೆಪಿ ನಿಯೋಗ ದೂರು ನೀಡಿದೆ.
ಬಳಿಕ ಶಾಸಕ ಸುರೇಶ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರದ ನೇತೃತ್ವ ವಹಿಸಿರುವವರಿಗೆ ಯಾವುದೇ ನೀತಿ ಇಲ್ಲ. ಈಗ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಕೊಳ್ಳೇಗಾಲದಲ್ಲಿ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ಹಿಟ್ಲರ್ ಎಂದು ಕರೆದಿದ್ದಾರೆ. ಇದೊಂದು ಅವಹೇಳನಕಾರಿ ಪದ, ಈ ರೀತಿ ಅವರು ಮಾತನಾಡಬಾರದು ಎಂದು ಕಿಡಿಕಾರಿದ್ದಾರೆ.
ಬಿಜೆಪಿ 400 ಸೀಟು ಗೆದ್ದರೆ ಸಂವಿಧಾನ ಬದಲಿಸುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣೆ ಸೋಲಿನ ಹತಾಶೆಯಿಂದ ಮಾತನಾಡಿದ್ದಾರೆ. ನಿಜವಾಗಿಯೂ ಚಾಮರಾಜನಗರ ಜನರು, ರಾಜ್ಯದ ಜನರು ಸಿದ್ದರಾಮಯ್ಯ ಮಾತನ್ನು ತಿರಸ್ಕಾರ ಮಾಡುತ್ತಾರೆ. ಅದಕ್ಕಾಗಿ ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ಕೊಟ್ಟಿದ್ದೇವೆ. ತಕ್ಷಣವೇ ಅವರನ್ನು ಸ್ಟಾರ್ ಕ್ಯಾಂಪೇನರ್ ಪಟ್ಟಿಯಿಂದ ಹೆಸರು ಕೈ ಬಿಡಬೇಕು ಎಂದಿದ್ದೇವೆ. ಅವರು ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Pradeep Eshwar: ಸುಧಾಕರ್‌ಗೆ ಒಂದು ವೋಟ್ ಲೀಡ್ ಸಿಕ್ಕರೆ ನಿವೃತ್ತಿ; ಪ್ರದೀಪ್ ಈಶ್ವರ್ ಸವಾಲು!
ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದರು?
ಕೊಳ್ಳೇಗಾಲದಲ್ಲಿ ನಡೆದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ಮತ್ತು ಬಿಜೆಪಿಯವರು ಹಿಟ್ಲರ್, ಮುಸೊಲಿನಿ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟವರು. ಮೋದಿ ಅವರ ಕೈಯಲ್ಲಿ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಸುರಕ್ಷಿತವಾಗಿಲ್ಲ ಎಂದಿದ್ದರು. ಅಲ್ಲದೇ ಮೋದಿ ಅವರನ್ನು ಯುರೋಪಿಯನ್ ಸರ್ವಾಧಿಕಾರಿಗಳಾದ ಬೆನಿಟೊ ಮುಸೊಲಿನಿ ಮತ್ತು ಹಿಟ್ಲರ್‌ಗೆ ಹೋಲಿಸಿ ವಾಗ್ದಾಳಿ ನಡೆಸಿದ್ದರು.
ಮೋದಿಯನ್ನು ಹಿಟ್ಲರ್, ಸದ್ದಾಂ ಹುಸೇನ್‌ಗೆ ಹೋಲಿಸಿದ ವೀರಪ್ಪ ಮೊಯ್ಲಿ!
ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಭರಾಟೆ ಜೋರಾಗುತ್ತಲೇ ರಾಜಕೀಯ ನಾಯಕರ ಹೇಳಿಕೆಗಳೂ ಅಬ್ಬರ, ವಿವಾದ, ಅವಹೇಳನಕಾರಿಯ ಸ್ವರೂಪ ಪಡೆದುಕೊಳ್ಳುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ (Veerappa Moily) ಅವರು ನರೇಂದ್ರ ಮೋದಿ (Narendra Modi) ಅವರನ್ನು ಸರ್ವಾಧಿಕಾರಿಗಳಾದ ಅಡಾಲ್ಫ್ ಹಿಟ್ಲರ್ (Adolf Hitler) ಹಾಗೂ ಸದ್ದಾಂ ಹುಸೇನ್ (Saddam Hussein) ಅವರಿಗೆ ಹೋಲಿಕೆ ಮಾಡಿದ್ದಾರೆ.
“ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸದ್ದಾಂ ಹುಸೇನ್, ಅಡಾಲ್ಫ್ ಹಿಟ್ಲರ್ ಕೂಡ ಮೈನಾರಿಟಿ ಕಮ್ಯುನಿಟಿ ಮೇಲೆ ದೌರ್ಜನ್ಯ ಎಸಗಿದ್ದರು. ಆದರೂ, ಸದ್ದಾಂ ಹುಸೇನ್ ದೈವ ಭಕ್ತನಾಗಿದ್ದ. ದೊಡ್ಡ ದೊಡ್ಡ ಮಸೀದಿಗಳನ್ನು ಕಟ್ಟುತ್ತಿದ್ದ. ಜನರನ್ನು ತಮ್ಮ ಹತ್ತಿರ ಹಿಡಿದುಕೊಳ್ಳುವ ಆಯುಧ ಎಂದರೆ ಅದು ಧಾರ್ಮಿಕ ವಿಚಾರಗಳಿಗೆ ಪ್ರಚೋದನೆ ಕೊಡುವುದು. ಹಾಗಾಗಿ, ನರೇಂದ್ರ ಮೋದಿ ಕೂಡ ಭಾರತದಲ್ಲಿ ಇದನ್ನೇ ಮಾಡುತ್ತಿದ್ದಾರೆ. ಇದರ ಭಾಗವಾಗಿಯೇ ರಾಮಮಂದಿರ ನಿರ್ಮಿಸಿದರು. ಆದರೆ, ಅದನ್ನು ಪೂರ್ಣಗೊಳಿಸಿಲ್ಲ. ರಾಮಮಂದಿರವನ್ನು ಮಾತ್ರ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ” ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಾಲ ಹೆಚ್ಚಿಸಿದ್ದೇ ಮೋದಿ ಸಾಧನೆ
“ದೇಶದಲ್ಲಿ ದೊಡ್ಡವರ ಅಪರಾಧ, ಅತ್ಯಾಚಾರಗಳು ಹೊರಗೆ ಬರಲ್ಲ. ಅಪರಾಧಗಳ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ. ಅಷ್ಟೇ ಅಲ್ಲ, ಕಳೆದ 10 ವರ್ಷದಲ್ಲಿ ಹೆಚ್ಚು ಸಾಲ ಮಾಡಿದ್ದೇ ಮೋದಿ ಅವರ ಸಾಧನೆಯಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ದೇಶದ ಸಾಲ 25 ಲಕ್ಷ ಕೋಟಿ ರೂ. ಇತ್ತು. ಮೋದಿ ಅವಧಿಯಲ್ಲಿ ಅದು ಗಣನೀಯವಾಗಿ ಜಾಸ್ತಿಯಾಗಿದೆ. ಮೋದಿ ಅವಧಿಯಲ್ಲಿ ಸಾಲದ ಪ್ರಮಾಣವು ಶೇ.2.5ರಷ್ಟು ಹೆಚ್ಚಾಗಿದೆ. ಇದು ಮೋದಿ ಅವರ ಸಾಧನೆಯಾಗಿದೆ” ಎಂದು ಕುಟುಕಿದರು.
ಮೋದಿ ಇವೆಂಟ್ ಮ್ಯಾನೇಜರ್
“ನರೇಂದ್ರ ಮೋದಿ ಅವರು ಒಬ್ಬ ಇವೆಂಟ್ ಮ್ಯಾನೇಜರ್. ನಮ್ಮಂತಹ ಪ್ರಜಾಪ್ರಭುತ್ವ ದೇಶಕ್ಕೆ ಜನಾನುರಾಗಿ ನಾಯಕ ಬೇಕೇ ಹೊರತು, ಇವೆಂಟ್ ಮ್ಯಾನೇಜರ್ ಅಲ್ಲ. ರೈತರು, ಕಾರ್ಮಿಕರು ಹಾಗೂ ಕೈಗಾರಿಕೆಗಳ ಸ್ಥಿತಿ ಶೋಚನೀಯವಾಗಿದೆ. ಆದರೆ, ಕಾಂಗ್ರೆಸ್ ಜನರ ಪರವಾಗಿ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಗ್ಯಾರಂಟಿ ಘೋಷಣೆ ಮಾಡಲಾಯಿತು. ಇದಕ್ಕೆ ಹಣ ತರುವುದು ಹೇಗೆ ಎಂಬ ಅನುಮಾನ ನನಗೂ ಇತ್ತು. ಆದರೆ, ಅಧಿಕಾರಕ್ಕೆ ಬಂದ 10 ತಿಂಗಳಲ್ಲಿಯೇ ಎಲ್ಲ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಸಿದ್ದರಾಮಯ್ಯ ಅವರು ಅನುಷ್ಠಾನಕ್ಕೆ ತಂದು ಸಾಧನೆ ಮಾಡಿದ್ದಾರೆ” ಎಂಬುದಾಗಿ ಬಣ್ಣಿಸಿದರು.
ಇದನ್ನೂ ಓದಿ: Siddaramaiah: ಯಾವ ಮುಖ ಇಟ್ಕೊಂಡು ಮೋದಿ ಮತ ಕೇಳ್ತಾರೆ? ಸಿದ್ದರಾಮಯ್ಯ ವಾಗ್ದಾಳಿ
ರಾಮಮಂದಿರ ಕಟ್ಟಿದ್ದೇವೆ
“ನಾವು ಕೂಡ ರಾಮನ ಭಕ್ತರು. ನಮ್ಮ ಊರಿನಲ್ಲಿ ರಾಮಮಂದಿರ ಕಟ್ಟಿದ್ದೇವೆ. ರಾಮಾಯಣ ಮಹಾನ್ವೇಷಣಂ ಕೃತಿ ಕೂಡ ಬರೆದವನು ನಾನು. ರಾಮನ ಬಗ್ಗೆ ಇತಿಹಾಸವಿದೆ. ಆದರೆ, ನಮ್ಮದು ಜಾತ್ಯತೀತ ರಾಷ್ಟ್ರ. ರಾಮಮಂದಿರ ನಿರ್ಮಿಸಿದ್ದೇವೆ ಎಂದು ಅದರ ಹೆಸರಲ್ಲಿ ರಾಜಕಾರಣ ಮಾಡಬಾರದು” ಎಂದರು.