ಚಿತ್ರದುರ್ಗ: ಈಗಿನ ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗುತ್ತದೆ. ಆದರೆ, ಬಿಜೆಪಿಯವರು ತಮ್ಮ ಕಾಲದಲ್ಲಿ ನಡೆದ ಹಗರಣಗಳನ್ನು ಮುಚ್ಚಿಹಾಕಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರದ ಹಿಂದಿನ ಹಗರಣಗಳನ್ನು ಬೆಳಕಿಗೆ ತರುತ್ತಿದೆ ಎಂಬ ವಿರೋಧ ಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಾಗಾದರೆ ಅವುಗಳು ಹಗರಣಗಳಲ್ಲವೇ? ಹಗರಣಗಳು ಎಂದು ಅವರು ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಈಗಿನ ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಅವರ ಕಾಲದ ಅಕ್ರಮಗಳನ್ನು ಉಲ್ಲೇಖ ಮಾಡಿದ್ದು ಏಕೆಂದರೆ, ಅವರ ಕಾಲದಲ್ಲಿ ಜಾರಿ ನಿರ್ದೇಶನಾಲಯ ಮಧ್ಯ ಪ್ರವೇಶ ಮಾಡಲಿಲ್ಲ. ಭೋವಿ ಅಭಿವೃದ್ಧಿ ನಿಗಮದಲ್ಲಿ 60 ಕೋಟಿ ರೂ.ಗಳನ್ನು ನುಂಗಿಹಾಕಿದ್ದಾರೆ. ದೇವರಾಜ ಅರಸ್ ಟ್ರಕ್ ಟರ್ಮಿನಲ್‌ನಲ್ಲಿ 47 ಕೋಟಿ ರೂ.ಗಳಿಗೂ ಹೆಚ್ಚು ಹಣ ತಿಂದು ಜೈಲಿಗೆ ಹೋದವರು ಯಾವ ಪಕ್ಷವರು? ಇದನ್ನೆಲ್ಲಾ ಹೇಳಬಾರದೆ? ಎಂದರು. ಈಗಿನ ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗುತ್ತದೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ | LKG UKG in Anganwadis: ದೇಶದಲ್ಲೇ ಮೊದಲ ಬಾರಿ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ; ಜು.22ಕ್ಕೆ ಉದ್ಘಾಟನೆ
ಬೆದರಿಸುತ್ತಿಲ್ಲ, ವಸ್ತುಸ್ಥಿತಿಯನ್ನು ಮುಂದಿಟ್ಟಿದ್ದೇನೆ
ಮುಖ್ಯಮಂತ್ರಿಗಳು ಬೆದರಿಸುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಉತ್ತರಿಸಿದ ಸಿಎಂ ಬೆದರಿಸುತ್ತಿಲ್ಲ, ವಸ್ತುಸ್ಥಿತಿಯನ್ನು ಮುಂದಿಟ್ಟಿದ್ದೇನೆ ಎಂದರು.
ದೇವರಾಜ ಟ್ರಕ್ ಟರ್ಮಿನಲ್ ಅಧ್ಯಕ್ಷರಾಗಿದ್ದ ಡಿ.ಎಸ್.ವೀರಯ್ಯ ಹಾಗೂ ಎಂ.ಡಿ ಶಂಕರಪ್ಪ ಜೈಲಿಗೆ ಹೋಗಿದ್ದಾರೆ. ಅದನ್ನು ಯಾಕೆ ಪ್ರಸ್ತಾಪಿಸಿಲ್ಲ ? ಅದು ಕೂಡ ತೆರಿಗೆ ಹಣವಲ್ಲವೇ? ವಿರೋಧ ಪಕ್ಷವಾಗಿ ಅದನ್ನು ಯಾಕೆ ಪ್ರಶ್ನಿಸಲಿಲ್ಲ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಜಾತಿ ವ್ಯವಸ್ಥೆ ದೇವರ ಸೃಷ್ಟಿಯಲ್ಲ, ಸ್ವಾರ್ಥಿ ಮನುಷ್ಯರ ಸೃಷ್ಟಿ: ಸಿಎಂ
ಚಿತ್ರದುರ್ಗ: ಜಾತಿ ವ್ಯವಸ್ಥೆ ದೇವರ ಸೃಷ್ಟಿಯಲ್ಲ. ಸ್ವಾರ್ಥಿ ಮನುಷ್ಯರ ಸೃಷ್ಟಿ. ಅಸಮಾನತೆ ಹೋಗಲಾಡಿಸದೆ ಶೋಷಿತ ಸಮುದಾಯಗಳ ಏಳಿಗೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.
ಭೋವಿ ಗುರುಪೀಠದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆ ಕಲಿಯಲು ಅವಕಾಶ ಸಿಕ್ಕ ಕೆಲವರು ಮಾತ್ರ ಆರ್ಥಿಕವಾಗಿ ಮೇಲೆ ಬಂದರು. ಅವಕಾಶ ಇಲ್ಲದವರು ಕುಲ ಕಸುಬನ್ನಷ್ಟೆ ಮಾಡಿಕೊಂಡು ಹಿಂದುಳಿದರು. ಶೋಷಿತ ಸಮುದಾಯಗಳ ವಿಮೋಚನೆಗೆ ಹೋರಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣದಿಂದಲೇ ಮೇಧಾವಿಯಾದರು ಎಂದು ವಿವರಿಸಿದರು.
ಶತಮಾನಗಳ ಕಾಲ ಗುಲಾಮಗಿರಿ ಇದ್ದುದರಿಂದ ತಳಸಮುದಾಯಗಳು ಹಿಂದೆ ಉಳಿದವು. ಈಗಲೂ ಶಿಕ್ಷಣದ ಕೊರತೆಯಿಂದ ಆ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಸ್ವಾಭಿಮಾನ ಬೆಳೆಸಿಕೊಂಡು ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಬೇಕು ಎಂದರು.
ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದರು.
ಎಸ್‌ಸಿ/ಎಸ್‌ಟಿ ಸಮುದಾಯಗಳ ಜನಸಂಖ್ಯೆ ರಾಜ್ಯದಲ್ಲಿ ಶೇ.24 ಇದ್ದಾರೆ. ಈ ಜನಸಂಖ್ಯೆಗೆ ಸಮವಾಗಿ ಅಭಿವೃದ್ಧಿ ಆಯವ್ಯಯದ ಶೇ.24 ರಷ್ಟು ಹಣವನ್ನು ಈ ಸಮುದಾಯಗಳ ಏಳಿಗೆಗಾಗಿ ಮೀಸಲಿಟ್ಟಿದ್ದು ನಮ್ಮ ಸರ್ಕಾರ. ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು ನಮ್ಮ ಸರ್ಕಾರ. ಭೋವಿ ಸಮುದಾಯದ ಪ್ರತಿನಿಧಿಯನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡಿದ್ದು ನಮ್ಮ ಸರ್ಕಾರ ಎಂದರು.
ಇದನ್ನೂ ಓದಿ | CM Siddaramaiah: ಅಧಿಕಾರ ದುರುಪಯೋಗ ಆರೋಪ; ಸಿಎಂ ವಿರುದ್ಧ ಲೋಕಾಯುಕ್ತಕ್ಕೆ ದೂರು
ಭೋವಿ ಅಭಿವೃದ್ಧಿ ನಿಗಮವನ್ನು ಭೋವಿ-ವಡ್ಡರ ಅಭಿವೃದ್ಧಿ ನಿಗಮವಾಗಿ ಮರುನಾಮಕರಣ ಮಾಡುಬೇಕು ಎನ್ನುವ ಬೇಡಿಕೆ ಇದೆ. ಈ ಬೇಡಿಕೆಯನ್ನು ಈಡೇರಿಸಲಾಗುವುದು. ಇನ್ನು ಸಿದ್ಧರಾಮೇಶ್ವರ ಅಧ್ಯಯನಪೀಠಕ್ಕಾಗಿ ಬೇಡಿಕೆ ಇದೆ. ಈ ಬೇಡಿಕೆಯನ್ನೂ ಈಡೇರಿಸಲಾಗುವುದು ಎಂದರು.