Site icon Vistara News

Captain Pranjal: ಯಾರವರು ಯೋಧ ಎಂದರಾ ಸಿಎಂ; ಸಿದ್ದರಾಮಯ್ಯ ಸ್ಪಷ್ಟೀಕರಣ ಏನು?

Siddaramaiah

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ಯೋಧ ಪ್ರಾಂಜಲ್‌ (Captain Pranjal) ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 50 ಲಕ್ಷ ಪರಿಹಾರ ನೀಡಲಾಗಿದೆ. ಆದರೆ, ಪರಿಹಾರದ ಬಗ್ಗೆ ಮಾಧ್ಯಮಗಳು ಕೇಳಿದಾಗ ಯೋಧ ಯಾರೆಂಬುದೇ ಗೊತ್ತಿಲ್ಲ ಎನ್ನುವ ರೀತಿಯಲ್ಲಿ ಸಿಎಂ ಪ್ರತಿಕ್ರಿಯಿಸಿರುವ ವಿಚಾರ ವಿವಾದದ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಹುತಾತ್ಮ ವೀರಯೋಧ ಪ್ರಾಂಜಲ್ ಯಾರೆಂಬುದೇ ಗೊತ್ತಿಲ್ಲ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ಅವರು ಕ್ಷಮೆ ಕೇಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ರಾಜಕೀಯ ದುರುದ್ದೇಶದಿಂದ ವಿಡಿಯೋವನ್ನು ತಿರುಚಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ ಅವರು ಹುತಾತ್ಮ ಪ್ರಾಂಜಲ್ ಮತ್ತು ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ ಸಮಸ್ತ ಯೋಧ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Elephant Arjuna: ಮಾವುತರಿಗೆ ಪ್ರತಿ ವರ್ಷ ಅರ್ಜುನ ಹೆಸರಲ್ಲಿ ಪ್ರಶಸ್ತಿ ನೀಡಿ: ದಿನೇಶ್‌ ಗೂಳಿಗೌಡ ಒತ್ತಾಯ

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಪ್ಪು ಅರ್ಥ ಬರುವಂತೆ ನನ್ನ ಹೇಳಿಕೆಯನ್ನು ತುಂಡರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿರುವುದು ನನ್ನ ಗಮನಕ್ಕೆ ಬಂತು. ಗದ್ದಲದ ಕಾರಣದಿಂದಾಗಿ ವರದಿಗಾರರ ಪ್ರಶ್ನೆ ಪ್ರಾರಂಭದಲ್ಲಿ ಸರಿಯಾಗಿ ಕೇಳಿರಲಿಲ್ಲ. ಪತ್ರಕರ್ತರ ಪ್ರಶ್ನೆ ಹುತಾತ್ಮರಾದ ವೀರಯೋಧ ಪ್ರಾಂಜಲ್ ಅವರ ಕುರಿತಾಗಿರುವುದು ಎಂದು ಗೊತ್ತಾದ ನಂತರ ರಾಜ್ಯ ಸರ್ಕಾರ ಪರಿಹಾರ ನೀಡಲು ಬದ್ಧವಾಗಿರುವುದನ್ನು ತಿಳಿಸಿದ್ದು ಮಾತ್ರವಲ್ಲ, ಬೇರೆ ಯಾವ ರಾಜ್ಯದಲ್ಲಿಯಾದರೂ ಹುತಾತ್ಮ ಯೋಧರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಿರುವುದು ಗೊತ್ತಾದರೆ ಅಷ್ಟೇ ಮೊತ್ತವನ್ನು ನೀಡಲು ಸಿದ್ಧ ಎಂದೂ ತಿಳಿಸಿದ್ದೇನೆ. ಇಂದು ನಮ್ಮ ಅಧಿಕಾರಿಗಳು ಪರಿಹಾರದ ಚೆಕ್ ಅನ್ನು ಹುತಾತ್ಮ ಪ್ರಾಂಜಲ್‌ ಅವರ ಕುಟುಂಬಕ್ಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ವಿಡಿಯೋವನ್ನು ತಿರುಚುವ ಮೂಲಕ ಹುತಾತ್ಮ ಪ್ರಾಂಜಲ್ ಮತ್ತು ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ ಸಮಸ್ತ ಯೋಧ ಸಮುದಾಯಕ್ಕೆ ತೇಜಸ್ವಿ ಸೂರ್ಯ ಅವಮಾನ ಮಾಡಿದ್ದಾರೆ. ಈ ಸಂಸದನಲ್ಲಿ ಕಿಂಚಿತ್ತು ಮಾನ – ಮರ್ಯಾದೆ ಏನಾದರೂ ಉಳಿದುಕೊಂಡಿದ್ದರೆ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಹುತಾತ್ಮ ವೀರಯೋಧ ಪ್ರಾಂಜಲ್

ದೇಶ, ದೇವರು, ಸೈನಿಕರು ಎಲ್ಲವೂ ಭಾರತೀಯ ಜನತಾ ಪಕ್ಷಕ್ಕೆ ರಾಜಕೀಯ ವ್ಯಾಪಾರದ ಸರಕುಗಳು ಮಾತ್ರ ಎನ್ನುವುದನ್ನು ದೇಶದ ಜನರು ಅರ್ಥಮಾಡಿಕೊಂಡಿದ್ದಾರೆ. ಹುತಾತ್ಮ ಪ್ರಾಂಜಲ್ ಅವರ ಮೃತದೇಹವನ್ನು ಇಲ್ಲಿಗೆ ತಂದಿದ್ದ ದಿನ ಪ್ರಧಾನಿ ನರೇಂದ್ರಮೋದಿ ಅವರು ಬೆಂಗಳೂರಿನಲ್ಲಿಯೇ ಇದ್ದರೂ ಅಂತಿಮ ದರ್ಶನ ಮಾಡಿ ಹೆತ್ತವರಿಗೆ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಇದನ್ನು ನಾವು ವಿವಾದ ಮಾಡಲು ಹೋಗಲಿಲ್ಲ.

ಆದರೆ ಈ ಸಂಸದ ಒಬ್ಬ ವೀರ ಯೋಧನ ಬಲಿದಾನವನ್ನು ಕೂಡಾ ತನ್ನ ಸುಳ್ಳು ಸುದ್ದಿಯ ಫ್ಯಾಕ್ಟರಿಗೆ ಸರಕಾಗಿ ಮಾಡಿ ನನ್ನ ಮಾನ ಹಾನಿಗೆ ಪ್ರಯತ್ನಿಸಿರುವುದು ಅಕ್ಷಮ್ಯ. ಇಂತಹ ಸುಳ್ಳುಕೋರರು ನಮ್ಮ ನಾಡಿಗೆ ಕಳಂಕ. ಇವರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದ್ದಾರೆ.

ಯೋಧನ ಬಗ್ಗೆ ಸಿಎಂ ಹೇಳಿದ್ದೇನು?

ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರವಾಗಿ ಮಾಧ್ಯಮಗಳು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿವೆ. ಆದರೆ, ಯಾರ ಬಗ್ಗೆ ವರದಿಗಾರರು ಪ್ರಶ್ನೆ ಕೇಳುತ್ತಿದ್ದಾರೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿರಲಿಲ್ಲ. ಹೀಗಾಗಿ ಪರಿಹಾರ ಕೊಡುತ್ತೇವೆ ಎಂದು ಮಾತು ಕೊಟ್ಟವರು ಯಾರು, ಯಾವ ಸರ್ಕಾರದಲ್ಲಿ ಹೇಳಿದ್ದರು ಎಂದು ಹೇಳಿ, ನಂತರ ಯಾರಿಗೆ ಕೊಡಬೇಕು ಎಂದು ಕೇಳಿದ್ದಾರೆ. ಆಗ ವರದಿಗಾರರು ಕ್ಯಾಪ್ಟನ್‌ ಪ್ರಾಂಜಲ್‌ ಎಂದು ತಿಳಿಸಿದಾಗ, ಓಹ್‌.. ಅವರಿಗೆ 50 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದೀವಲ್ಲಾ, ಬೆಂಗಳೂರಿನ ಪ್ರಾಂಜಲ್‌ ಅವರ ತಂದೆ ನಮ್ಮ ಮೈಸೂರಿನವರು, ಅವರಿಗೆ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ | Captain Pranjal: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ 50 ಲಕ್ಷ ಪರಿಹಾರದ ಚೆಕ್‌ ಹಸ್ತಾಂತರ

ನಂತರ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಉತ್ತರ ಪ್ರದೇಶದಲ್ಲಿ ಒಂದು ಕೋಟಿ ಪರಿಹಾರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಆದೇಶದ ಪ್ರತಿ ತೋರಿಸಿದರೆ, ನಾವು ಹೆಚ್ಚಳ ಮಾಡಿ ಕೊಡೋಣ ಎಂದು ಹೇಳಿರುವುದಾಗಿ ಸಿಎಂ ತಿಳಿಸಿದ್ದರು.

ಸಂಸದ ತೇಜಸ್ವಿ ಸೂರ್ಯ ಏನು ಹೇಳಿದರು?

ಸಿದ್ದರಾಮಯ್ಯ ಅವರು ಹುತಾತ್ಮ ಯೋಧ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಅದರೆ, ಕ್ಯಾಪ್ಟನ್ ಪ್ರಾಂಜಲ್ ಯಾರೆಂದೇ ಗೊತ್ತಿಲ್ಲವೆಂಬ ರೀತಿಯಲ್ಲಿ ಅವರು ಮಾಧ್ಯಮಗಳ ಮುಂದೆ ಮಾತನಾಡಿದ್ದು ಬಹಳ ಬೇಸರ ತರಿಸಿದೆ. ಪರಿಹಾರದ ಹಣ ಬಿಡುಗಡೆ ಮಾಡುವಂತೆ ಸಿಎಂ, ಉಪ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಆದರೆ, ಪರಿಹಾರದ ಹಣ ಬಿಡುಗಡೆ ವಿಚಾರವಾಗಿ ಮಾಧ್ಯಮದವರು ಬಳಿ ಪ್ರಶ್ನೆ ಕೇಳಿದರೆ, “ಯಾರು ಪ್ರಾಂಜಲ್ ಅಂದ್ರೆ, ನಾವೆಲ್ಲಿ ಪರಿಹಾರ ಕೊಡ್ತೀವಿ ಅಂತ ಹೇಳಿದ್ವಿ’ ಎಂದು ಸಿಎಂ ಬೇಜವಾಬ್ದಾರಿಯುತವಾಗಿ ಮಾತನಾಡಿದ್ದಾರೆ. ಓರ್ವ ಯೋಧನ ಬಗ್ಗೆ ಹೀಗೆ ಮುಖ್ಯಮಂತ್ರಿಗಳು ಮಾತನಾಡಿದ್ದು ನೋಡಿ ಬಹಳ ಬೇಸರವಾಗಿದೆ, ಅವರು ಜನರ ಕ್ಷಮೆ ಕೇಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version