Site icon Vistara News

CM Siddaramaiah: ಪ್ರತಿ ಠಾಣೆಗೂ ತೆರಳಿ ಪರಿಶೀಲಿಸಬೇಕು: ಪೊಲೀಸ್‌ ಮೇಲಧಿಕಾರಿಗಳಿಗೆ ಸಿಎಂ ಖಡಕ್‌ ಸೂಚನೆ

CM Siddaramaiah

ಬೆಂಗಳೂರು: ಎಸ್‌ಪಿ, ಡಿಸಿಪಿ, ಐಜಿಗಳು ತಮ್ಮ ವ್ಯಾಪ್ತಿಯ ಪ್ರತಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ. ನಿಮ್ಮ ವ್ಯಾಪ್ತಿಯಲ್ಲಿ ಕ್ಲಬ್‌ಗಳು, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್‌ ದಂಧೆ ನಿಲ್ಲಿಸದಿದ್ದರೆ ಎಸ್‌ಪಿ ಮತ್ತು‌ ಐಜಿ ಮಟ್ಟದ ಅಧಿಕಾರಿಗಳನ್ನೂ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಎಸ್‌ಪಿ, ಐಜಿಗಳು ಪ್ರತಿ ಠಾಣೆಗೆ ಹೋಗಿ ಪರಿಶೀಲನೆ ನಡೆಸಿದರೆ ಇವನ್ನೆಲ್ಲಾ ತಪ್ಪಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಾಳೆಯಿಂದಲೇ ಎಸ್‌ಪಿ, ಐಜಿಗಳು ಠಾಣೆಗಳಿಗೆ ಭೇಟಿ ನೀಡಬೇಕು. ಭೇಟಿ ನೀಡಿ ಅರ್ಧಗಂಟೆಯಲ್ಲಿ ಶಾಸ್ತ್ರ ಮುಗಿಸಬಾರದು. ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು ಎಂದು ಎಚ್ಚರಿಸಿದರು.

ಫೇಕ್ ನ್ಯೂಸ್ ಪ್ರಸಾರ ತಡೆಗಟ್ಟಿ: ಇಲ್ಲಾಂದ್ರೆ ಕ್ರಮ ಎದುರಿಸಿ

ಫೇಕ್ ನ್ಯೂಸ್‌ಗಳು ಸಮಾಜದ ನೆಮ್ಮದಿಗೆ ಕಂಟಕವಾಗಿವೆ. ಇವು ವಿಪರೀತ ಹೆಚ್ಚಾಗುತ್ತಿವೆ. ಇವುಗಳ ತಡೆಗೆ fact check ಘಟಕಗಳನ್ನು ಮಾಡಿದ್ದೇವೆ. ಆದರೂ ಫೇಕ್ ನ್ಯೂಸ್‌ಗಳು ಹೆಚ್ಚಾಗುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸದ್ಯ ಫೇಕ್ ನ್ಯೂಸ್ ತಡೆಯಲು ಆಗುತ್ತಿರುವ ಕೆಲಸ ಸಾಲುತ್ತಿಲ್ಲ. ಹೀಗಾಗಿ ಕೃತಕ ಬುದ್ದಿಮತ್ತೆ ಬಳಸಿ. ಸ್ವಯಂ ಪ್ರೇರಿತ ದೂರುಗಳನ್ನು ಹೆಚ್ಚೆಚ್ಚು ದಾಖಲಿಸಿ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ಡ್ರಗ್ಸ್ ಪೂರ್ತಿ ನಿಂತಿಲ್ಲ ಏಕೆ?

ಡ್ರಗ್ಸ್ ಮಾರೋರು ಯಾರು? ರೌಡಿಗಳು ಯಾರು?, ರಿಯಲ್ ಎಸ್ಟೇಟ್ ಮಾಡೋರು ಯಾರು ಎನ್ನುವುದು ಆಯಾ ಠಾಣಾಧಿಕಾರಿಗಳಿಗೆ ಗೊತ್ತಿರುತ್ತೆ. ಆದರೂ ಯಾಕೆ ನಿಲ್ಲುತ್ತಿಲ್ಲ‌ ಎಂದು ಪ್ರಶ್ನಿಸಿದ ಸಿಎಂ, ನಿಮಗೆ ಗನ್‌ ಕೊಟ್ಟಿರುವುದು ಏಕೆ? ಈ ಬಗ್ಗೆ ರೌಡಿಗಳಿಗೆ ಏಕೆ ಭಯವಿಲ್ಲ. ರೌಡಿಗಳಿಗೆ ಪೊಲೀಸ್ ಭಯ ಇರಬೇಕು ಎಂದರು.

ಕೆಲವು ಪೊಲೀಸರಿಗೆ ಇ-ಬೀಟ್ ವ್ಯವಸ್ಥೆ ಜಾರಿಯಲ್ಲಿರುವುದೇ ಗೊತ್ತಿಲ್ಲ ಎಂದರೆ ನಾಚಿಕೆಗೇಡು. ಇದನ್ನು ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಹಿರಿಯ ಪೊಲೀಸ್ ಅಧಿಕಾರಿಗಳು ನಿಮ್ಮ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ನಿಮ್ಮ ಕೆಳಗಿನ‌ ಅಧಿಕಾರಿಗಳು‌ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಬೀಟ್ ವ್ಯವಸ್ಥೆ, ಸಂಚಾರ ವ್ಯವಸ್ಥೆ, ಹೈವೇ ಪ್ಯಾಟ್ರೋಲಿಂಗ್ ವ್ಯವಸ್ಥೆಯನ್ನು ತೀವ್ರ ಪರಿಣಾಮಕಾರಿಯಾಗಿ ನಿರ್ವಹಿಸಲು ಸಿಎಂ ಸೂಚನೆ ನೀಡಿದರು.

ಹುಬ್ಬಳ್ಳಿಯಲ್ಲಿ ಒಂದರ ಹಿಂದೆ ಮತ್ತೊಂದು ಕೊಲೆಗಳು ನಡೆದವು. ಇಂಟೆಲಿಜೆಂಟ್ ಪೊಲೀಸರು ಎಚ್ಚರ ಇದ್ದಿದ್ದರೆ ಎರಡನೇ ಕೊಲೆ ತಪ್ಪಿಸಬಹುದಿತ್ತು. ಅದಕ್ಕೇ ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಾಯಿತು.‌ ಇವರ ನಿರ್ಲಕ್ಷ್ಯದಿಂದ ಕೊಲೆ ಆಗಿದೆ. ಈ ಕೊಲೆ ತಪ್ಪಿಸಬಹುದಿತ್ತು. ಜನರಿಗೆ ಪೊಲೀಸ್ ಬಳಿ ಹೋದರೆ ನ್ಯಾಯ ಸಿಗುತ್ತದೆ ಎನ್ನುವ ಆತ್ಮ ವಿಶ್ವಾಸ ಹೆಚ್ಚಾಗಬೇಕು. ಶಾಂತಿ ಸಭೆಗಳನ್ನು ಚಾಚೂ ತಪ್ಪದೆ ಕಡ್ಡಾಯವಾಗಿ ನಿಯಮಿತವಾಗಿ ನಡೆಸಲೇಬೇಕು ಎಂದು ಸೂಚಿಸಿದರು.

ಕಾನೂನು ಪ್ರಕಾರ ಕೆಲಸ ಮಾಡದಿದ್ದರೆ ಸಹಿಸಲ್ಲ

ವರ್ಗಾವಣೆಗೆ ಪ್ರಭಾವ ಬೀರುವವರ ವಿರುದ್ಧ, ಹಣ ಕೊಟ್ಟು ಟ್ರಾನ್ಸ್‌ಫರ್‌ಗೆ ಪ್ರಯತ್ನಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ನಿಮಗೆ ಸಮಸ್ಯೆಗಳಿದ್ದರೆ ಗೃಹ ಸಚಿವರು, ಪೊಲೀಸ್ ಮಹಾ ನಿರ್ದೇಶಕರಿಗೆ ತಿಳಿಸಿ ಸರಿಪಡಿಸಿಕೊಳ್ಳಿ. ಕಾನೂನು ಮೀರಿ ಕೆಲಸ ಮಾಡಿ ಎಂದು ಸರ್ಕಾರ ಯಾವತ್ತೂ ಬಯಸಲ್ಲ. ಕಾನೂನು ಪ್ರಕಾರ ಕೆಲಸ ಮಾಡದಿದ್ದರೆ ಸರ್ಕಾರ ಸಹಿಸಲ್ಲ ಎಂದರು.

ಗೃಹ ಸಚಿವರಿಗೆ, ಕರ್ನಾಟಕ‌ ಪೊಲೀಸ್‌ಗೆ ಅಭಿನಂದನೆ

ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಕೋಮುಗಲಭೆ ಇಲ್ಲದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದಕ್ಕೆ ಗೃಹ ಸಚಿವರಿಗೆ, ಕರ್ನಾಟಕ ಪೊಲೀಸ್‌ ಇಲಾಖೆಗೆ ಮುಖ್ಯಮಂತ್ರಿಗಳು ಅಭಿನಂಧಿಸಿದರು.‌

ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಡಿಜಿ-ಐಜಿ ಡಾ.ಅಲೋಕ್ ಮೋಹನ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕ್ ಚಂದ್ರ ಉಪಸ್ಥಿತರಿದ್ದರು.

ನ್ಯಾಯ ನೀಡಿಕೆಯಲ್ಲಿ ಕರ್ನಾಟಕ ಪೊಲೀಸ್‌ಗೆ ದೇಶದಲ್ಲಿ ಪ್ರಥಮ ಸ್ಥಾನ

ದೇಶದ ಪ್ರತಿಷ್ಠಿತ India justice Report ನವರು ನಡೆಸಿದ ಸಮೀಕ್ಷೆ ಮತ್ತು ವರದಿಯಲ್ಲಿ ಕರ್ನಾಟಕ ಪೊಲೀಸ್ ಇಡೀ ದೇಶದಲ್ಲೇ ನ್ಯಾಯ ನೀಡಿಕೆ (Justice delivery) ಯಲ್ಲಿ ಪ್ರಥಮ‌ ಸ್ಥಾನ‌ ಪಡೆದಿದೆ. ಒಟ್ಟು 10 ಅಂಕಗಳನ್ನು ಇಟ್ಟು ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಕರ್ನಾಟಕ ಪೊಲೀಸ್ 6.38 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ‌ ಸ್ಥಾನ ಗಳಿಸಿದೆ ಎಂದು India justice Report ಅನ್ನು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯ ಪ್ರಾಸ್ತಾವಿಕ ಮಾತುಗಳಲ್ಲಿ ಪ್ರಸ್ತಾಪಿಸಿ, ಈ ಗುಣಮಟ್ಟ ಕಾಯ್ದುಕೊಳ್ಳುವಂತೆ ಕಿವಿ ಮಾತು ಹೇಳಿದರು.

ಇದನ್ನೂ ಓದಿ | Channapatna By Election: ಚನ್ನಪಟ್ಟಣದಲ್ಲಿ ನನ್ನ ಪತ್ನಿ ಸ್ಪರ್ಧಿಸಲ್ಲ: ಸಂಸದ ಡಾ.ಸಿ.ಎನ್. ಮಂಜುನಾಥ್‌ ಸ್ಪಷ್ಟನೆ

ತಂತ್ರಾಂಶ ಮತ್ತು ಕೈಪಿಡಿ ಬಿಡುಗಡೆ

Exit mobile version