Site icon Vistara News

CM Siddaramaiah: ಗಣಿಗಳ ಹರಾಜು ಪ್ರಕ್ರಿಯೆ ಕೂಡಲೇ ಕೈಗೆತ್ತಿಕೊಳ್ಳಲು ಸಿಎಂ ಸೂಚನೆ

CM Siddaramaiah

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಅಧ್ಯಕ್ಷತೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ನಡೆಯಿತು. ಈ ವೇಳೆ ಹರಾಜಿಗೆ ಲಭ್ಯವಿರುವ ಗಣಿಗಳ ಹರಾಜು ಪ್ರಕ್ರಿಯೆಯನ್ನು ಕೂಡಲೇ ಕೈಗೆತ್ತಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಸಿಎಂ, ರಾಜಸ್ವ ಸಂಗ್ರಹ ಚುರುಕುಗೊಳಿಸಬೇಕು. ಉಪ ಖನಿಜ ರಾಜಸ್ವ ಸಂಗ್ರಹ ಹೆಚ್ಚಿಸಲು ಕ್ರಮ ಕೈಗೊಳ್ಲಬೇಕು, ಇದಕ್ಕಾಗಿ ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆ ಲ್ಯಾಂಡ್‌ ಬ್ಯಾಂಕ್‌ ಸೃಜಿಸಿದಲ್ಲಿ, ಅರಣ್ಯ ಪರಿಹಾರ ಭೂಮಿ (compensatory aforestation) ನೀಡಲು ಅನುಕೂಲವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಡ್ರೋನ್‌ ಸರ್ವೇ ಮತ್ತು AI ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಳ್ಳುವ ಮೂಲಕ ಕ್ರಷರ್‌ಗಳ ರಾಜಸ್ವ ಸಂಗ್ರಹ ಸೋರಿಕೆ ತಡೆಗಟ್ಟಲು ಮುಖ್ಯಮಂತ್ರಿಗಳು ಸೂಚಿಸಿದರು.

ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಸೌಲಭ್ಯ ಹೆಚ್ಚಿಸಲು ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಗತಿ ಪರಿಶೀಲನಾ ನಗರದಲ್ಲಿ ಸಭೆ ಮಂಗಳವಾರ ನಡೆಯಿತು. ಈ ವೇಳೆ ಈ ವರೆಗಿನ ತೆರಿಗೆ ಸಂಗ್ರಹ ನಿಗದಿತ ಗುರಿಗೆ ಶೇ. 110 ರಷ್ಟಿದೆ. ಮಾರ್ಗಸೂಚಿ ದರ ಪರಿಷ್ಕರಣೆ ಹಾಗೂ ಆಡಳಿತ ಸುಧಾರಣಾ ಕ್ರಮಗಳಿಂದ ಹೆಚ್ಚಿನ ತೆರಿಗೆ ಸಂಗ್ರಹದ ನಿರೀಕ್ಷೆ ಇದೆ. 2023-24 ನೇ ಸಾಲಿನಲ್ಲಿ 20,000 ಕೋಟಿ ರೂ. ಗುರಿಗೆ ಎದುರಾಗಿ 20287.30 ಕೋಟಿ ರೂ ರಾಜಸ್ವ ಸಂಗ್ರಹವಾಗಿದೆ. ಜಿ.ಐ.ಎಸ್. ಆಧಾರಿತ ಆಸ್ತಿಗಳ ವಿವರ ಹಾಗೂ ಮಾರ್ಗಸೂಚಿ ದರ ನಿಗದಿಯನ್ನು ಜಾರಿಗೊಳಿಸುವ ಮೂಲಕ ತೆರಿಗೆ ಸೋರಿಕೆ ತಡೆಗಟ್ಟಲು ಸಾಧ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ | CM Siddaramaiah: ಅಬಕಾರಿ ಪರವಾನಗಿ ನವೀಕರಣಕ್ಕೆ ಕಿರುಕುಳ ನೀಡಬೇಡಿ: ಅಧಿಕಾರಿಗಳಿಗೆ ಸಿಎಂ ಖಡಕ್‌ ಸೂಚನೆ

ಈ ವೇಳೆ ಸಿಎಂ ಪ್ರತಿಕ್ರಯಿಸಿ, ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸುವಂತೆ ಸೂಚಿಸಿದರು. ದಸ್ತಾವೇಜುಗಳ ನೋಂದಣಿಯನ್ನು ಡಿಜಿಟಲ್‌ ಆಗಿ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಜಾರಿಗೆ ತರಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

Exit mobile version