Site icon Vistara News

CM Siddaramaiah: ಅಧಿಕಾರ ದುರುಪಯೋಗ ಆರೋಪ; ಸಿಎಂ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಸಿಎಂ ಸಿದ್ದರಾಮಯ್ಯನವರು (CM Siddaramaiah) ಕಾನೂನಿನ ಎಲ್ಲಾ ನಿಯಮ ಗಾಳಿಗೆ ತೂರಿ ಪತ್ನಿ ಹೆಸರಿಗೆ ಮೂಡ ನಿವೇಶನ ನೋಂದಣಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ಸಲ್ಲಿಸಿದ್ದಾರೆ.

ಜೆ.ಎಚ್. ಪಟೇಲ್ ಸರ್ಕಾರ ಹಾಗೂ ಧರ್ಮಸಿಂಗ್ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಆಗಿದ್ದಾಗ ಹಾಗೂ 2017-18ರಲ್ಲಿ ಸಿಎಂ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ವಿಜಯನಗರ ಬಡಾವಣೆಯಲ್ಲಿ ಮುಡಾ ನಿಯಮಗಳ ವಿರುದ್ಧ ನಿವೇಶನಗಳನ್ನು ಪತ್ನಿ ಹೆಸರಿಗೆ ಮಾಡಿಸಿಕೊಂಡಿದ್ದಾರೆ. 39 ಚದರ ಅಡಿಯ 14 ನಿವೇಶನಗಳನ್ನು ನೊಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಸಿಎಂ ಹಾಗೂ ಮುಡಾ ಅಧಿಕಾರಿಗಳ ವಿರುದ್ಧ ದೂರು ಕೊಟ್ಟಿದ್ದೇನೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ತಿಳಿಸಿದ್ದಾರೆ.

ಇದನ್ನೂ ಓದಿ | DK Shivakumar: ನಮ್ಮ ಅಧಿಕಾರಿಗಳು ಬಹಳ ಖದೀಮರಿದ್ದಾರೆ, ಡಿ ಗ್ರೇಡ್ ಕ್ಲರ್ಕ್‌ಗಳೆಲ್ಲಾ ಅಧೀಕ್ಷಕ, ಎಂಡಿಗಳಾಗಿದ್ದಾರೆ ಎಂದ ಡಿಕೆಶಿ

ವಾರದಲ್ಲಿ 4 ದಿನ ಶಾಲೆಗಳಿಗೆ ಮೊಟ್ಟೆ ಪೂರೈಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್ ಜತೆ ಒಪ್ಪಂದ: ಸಿಎಂ

ಬೆಂಗಳೂರು: ವಾರದಲ್ಲಿ 4 ದಿನಗಳು ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಿಗೆ ಮೊಟ್ಟೆಯನ್ನು ಸರಬರಾಜು ಮಾಡಲು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸರ್ಕಾರಿ ಶಾಲೆಗಳಲ್ಲಿ ವಾರದಲ್ಲಿ 6 ದಿನ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದ ಅವರು, ಮಕ್ಕಳು ಆರೋಗ್ಯವಂತರಾಗಿರಲು ಪೌಷ್ಟಿಕ ಆಹಾರ ಅಗತ್ಯ. ಮಾನಸಿಕ ಆರೋಗ್ಯ ಮತ್ತು ಉತ್ತಮ‌ ಶಿಕ್ಷಣಕ್ಕೆ ಗುಣಮಟ್ಟದ ಆಹಾರ ಮುಖ್ಯ. ಉಪಹಾರ ಇಲ್ಲದೆ ಶಾಲೆಗೆ ಬಂದು, ಊಟ ಇಲ್ಲದೆ ಮಧ್ಯಾಹ್ನದವರೆಗೂ ಶಾಲೆಯಲ್ಲಿರುವ ಮಕ್ಕಳನ್ನು ನಾನು ನೋಡಿದ್ದೇನೆ. ಹೀಗಾಗಿ ವಾರದಲ್ಲಿ ಎರಡು ದಿನ ಊಟ ಮತ್ತು ಮೊಟ್ಟೆ ಕೊಡಲು ಮುಂದಾದೆವು. ಈಗ ಅಜೀಂ ಪ್ರೇಮ್‌ಜಿ ಫೌಂಡೇಷನ್ ಅವರು ವಾರದಲ್ಲಿ ನಾಲ್ಕು ದಿನ ಮಕ್ಕಳಿಗೆ ಮೊಟ್ಟೆ ನೀಡಲು ಮತ್ತು ಪೂರಕ ಪೌಷ್ಠಿಕ ಆಹಾರ ಒದಗಿಸುವ ಪುಣ್ಯದ ಕಾರ್ಯಕ್ಕೆ ಸರ್ಕಾರದ ಜೊತೆಗೆ ಕೈಜೋಡಿಸಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.

ವೈಜ್ಞಾನಿಕವಾಗಿ, ವೈಚಾರಿಕವಾಗಿ ಮಕ್ಕಳು ವಿಕಾಸ ಹೊಂದಬೇಕು. ಆಗ ಮಾತ್ರ ಸಮಾಜಮುಖಿ ಆಗಲು ಸಾಧ್ಯ. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಆಶಯ. ಈ ಕಾರಣಕ್ಕೆ ಸಮವಸ್ತ್ರ, ಶೂ, ಸಾಕ್ಸ್ ಕೊಡುವ ಜೊತೆಗೆ ಹೆಚ್ಚೆಚ್ಚು ವಸತಿ ಶಾಲೆಗಳನ್ನು ತೆರೆಯುತ್ತಿದ್ದೇವೆ ಎಂದರು.

ನಾಳೆ ಅಂಕೋಲಾಕ್ಕೆ ಭೇಟಿ

ಮಳೆಯಿಂದ ರಸ್ತೆ, ಮನೆ ಬಿದ್ದಿರುವುದು ಹಾಗೂ ಬೆಳೆ ಹಾನಿಯಾಗಿರುವುದಕ್ಕೆ ಪರಿಹಾರ ಕಾರ್ಯಗಳನ್ನು ತುರ್ತಾಗಿ ಕೈಬೇಕೆಂದು ಸೂಚಿಸಲಾಗಿದೆ ಎಂದ ಮುಖ್ಯಮಂತ್ರಿಗಳು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸೇತುವೆ ಪರಿಶೀಲಿಸಲು ನಾಳೆ (ಜುಲೈ 21) ತೆರಳುತ್ತಿರುವುದಾಗಿ ತಿಳಿಸಿದರು.

ಇದನ್ನೂ ಓದಿ | Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

ಕಾರ್ಯಕ್ರಮದಲ್ಲಿ ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಪ್ರೋ ಮುಖ್ಯಸ್ಥರಾದ ಅಜೀಂ ಪ್ರೇಮ್ ಜಿ ದಂಪತಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಮೆಹರೂಜ್ ಖಾನ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Exit mobile version