Site icon Vistara News

CM Siddaramaiah: ವಸತಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಸಿಎಂ ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ಇತರ ಶಾಲೆಗಳಿಗೆ ಹೋಲಿಸಿದರೆ ವಸತಿ ಶಾಲೆಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದರೂ, ವಸತಿ ಶಾಲೆಗಳಿಗೆ ಇನ್ನಷ್ಟು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಶುಕ್ರವಾರ ಎಸ್‌ಸಿಸಿಪಿ, ಟಿಎಸ್‌ಪಿ ರಾಜ್ಯ ಅಭಿವೃದ್ದಿ ಪರಿಷತ್‌ ಸಭೆಯ ಬಳಿಕ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಿಎಂ ಅನಿರೀಕ್ಷಿತ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ 833 ವಸತಿ ಶಾಲೆಗಳಿದ್ದು, ಎಲ್ಲಾ ವಸತಿ ಶಾಲೆಗಳಿಗೆ ಸುಸಜ್ಜಿತವಾದ ಕಟ್ಟಡಗಳನ್ನು ಹಂತಹಂತವಾಗಿ ನಿರ್ಮಿಸಲಾಗುತ್ತಿದೆ. ಎಲ್ಲಾ ಆಶ್ರಮ ಶಾಲೆಗಳನ್ನು ವಸತಿ ಶಾಲೆಗಳಾಗಿ ಪರಿರ್ವತಿಸುತ್ತಿದ್ದೇವೆ. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಾಸ್ತವ್ಯ ವ್ಯವಸ್ಥೆ ಮಾತ್ರವಲ್ಲದೆ ಇಂಗ್ಲಿಷ್‌, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಕೋಚಿಂಗ್‌ ಸಹ ನೀಡುತ್ತಿದ್ದೇವೆ ಎಂದು ಹೇಳಿದರು.

ಚಾಮರಾಜಪೇಟೆಯ ಸರ್ಕಾರಿ ಶಾಲೆಯನ್ನು ಪಡೆದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಾಗಿ ಪರಿವರ್ತಿಸಲಾಗಿದೆ. ಪ್ರಸ್ತುತ ಇಲ್ಲಿ 218 ಮಕ್ಕಳಿದ್ದಾರೆ. ವಿದ್ಯಾರ್ಥಿಗಳ ಜತೆಯಲ್ಲಿ ಮಾಡಿದ ಊಟ, ಸಾಂಬಾರ್ ಚೆನ್ನಾಗಿತ್ತು‌ ಎಂದರು.

CM Siddaramaiah: ಸಿದ್ದರಾಮಯ್ಯ ಈಗ ಕನ್ನಡ ಮೇಷ್ಟ್ರು; ಶಾಲೆಗೆ ಭೇಟಿ ನೀಡಿ ವ್ಯಾಕರಣ ಪಾಠ ಮಾಡಿದ ಸಿಎಂ!

CM Siddaramaiah Visits A School In Bengaluru, Takes A Class Of Grammar

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಲು ಸಾಲು ರ‍್ಯಾಲಿಗಳು, ಚುನಾವಣಾ ಸಮಾವೇಶಗಳು, ಅಬ್ಬರದ ಭಾಷಣಗಳಲ್ಲೇ ನಿರತರಾಗಿದ್ದ, ದಿನ ಬೆಳಗಾದರೆ ಹತ್ತಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಾವಾಗಲೂ ಬ್ಯುಸಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ (ಜುಲೈ 5) ಕನ್ನಡ ಮೇಷ್ಟ್ರಾಗಿ ಮಕ್ಕಳಿಗೆ ಒಂದಷ್ಟು ಪಾಠ ಮಾಡಿದರು. ಹೌದು, ದಿನನಿತ್ಯದ ಬ್ಯುಸಿ ಚಟುವಟಿಕೆಗಳ ಮಧ್ಯೆಯೇ ಅವರು ಬೆಂಗಳೂರಿನ (Bengaluru) ಚಾಮರಾಜಪೇಟೆಯಲ್ಲಿರುವ (Chamarajpet) ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಸಿದ್ದರಾಮಯ್ಯ, ಮಕ್ಕಳಿಗೆ ಕನ್ನಡ ವ್ಯಾಕರಣದ ಪಾಠ ಮಾಡಿದರು.

ಸುಮಾರು 250 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢಿರ್‌ ಭೇಟಿ ನೀಡಿದ ಅವರು ಮೊದಲು 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ, ಪಠ್ಯಪುಸ್ತಕ, ಬಾತ್‌ ರೂಮ್‌ ಕಿಟ್‌ಗಳ ಸಮರ್ಪ ವಿತರಣೆ ಆಗುತ್ತಿದೆ ಎಂದು ಮಕ್ಕಳು ಸಿಎಂಗೆ ತಿಳಿಸಿದರು. ಊಟದ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿ ತಿಳಿದರು. ಮಕ್ಕಳು ಕೂಡ ಉತ್ಸಾಹದಿಂದ, ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ ಚೆನ್ನಾಗಿರುತ್ತದೆ, ಆಗಾಗ ಪಲಾವ್ ಕೂಡ ಕೊಡುತ್ತಾರೆ ಎಂದು ವಿವರಿಸಿದರು.

ಮಕ್ಕಳಿಗೆ ಸಿಎಂ ವ್ಯಾಕರಣ ಪಾಠ…

ಭೇಟಿ ವೇಳೆ ಮಕ್ಕಳಿಗೆ ಸಿಎಂ ವ್ಯಾಕರಣ ಪಾಠ ಮಾಡಿದರು. ಸಂದಿ ಎಂದರೇನು? ಸಂದಿಗಳಲ್ಲಿ ಎಷ್ಟು ವಿಧ? ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಅವುಗಳು ಯೋಗವಾಹಗಳು ಎಷ್ಟು? ಸ್ವರ ಎಂದರೇನು? ವ್ಯಂಜನಗಳು ಎಂದರೇನು? ಎಷ್ಟಿವೆ? ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ? ಅಲ್ಪಪ್ರಾಣ, ಮಹಾಪ್ರಾಣ ಎಂದರೇನು? ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎನ್ನುವ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದ ಸಿಎಂ ಮಕ್ಕಳ ಉತ್ತರಗಳನ್ನು ತಿದ್ದಿ ಹೇಳಿದರು.

ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು , ಯಾವಾಗ ಆರಂಭಿಸಿದರು ಎಂದು ಸಿಎಂ ಪ್ರಶ್ನೆ ಕೇಳಿದರು. ನೀವೇ ಆರಂಭಿಸಿದ್ದು ಎಂದ ವಿದ್ಯಾರ್ಥಿ ಇಸವಿ ಹೇಳಲಿಲ್ಲ. ಬಳಿಕ 94-95ರಲ್ಲಿ ಆರಂಭಿಸಿದ್ದಾಗಿ ಸಿಎಂ ಹೇಳಿದರು. ಆಗ ಮಕ್ಕಳು ಚಪ್ಪಾಳೆ ತಟ್ಟಿದರು.

ಇದನ್ನೂ ಓದಿ: CM Siddaramaiah: ನಮಗೆ ನಿವೇಶನ ಕೊಟ್ಟಿರುವುದು ತಪ್ಪು ಎಂದರೆ ಪರಿಹಾರ ಕೊಡಲಿ; ಸಿದ್ದರಾಮಯ್ಯ ಸವಾಲು

ಶಾಲೆಯ ಸಾಧನೆ ಬಗ್ಗೆಯೂ ಶಿಕ್ಷಕರು ಸಿಎಂ ಗಮನಕ್ಕೆ ತಂದರು. “ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲರೂ ಡಿಸ್ಟಿಂಕ್ಷನ್‌ ಹಾಗು ಒಬ್ಬ ವಿದ್ಯಾರ್ಥಿನಿ ಮಾತ್ರ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾಳೆ” ಎಂದು ವಿವರಿಸಿದರು. ಮಕ್ಕಳು ಶಾಲೆಯ ವ್ಯವಸ್ಥೆ ಬಗ್ಗೆ ತಿಳಿಸುತ್ತ, “ನಮ್ಮ ಆರೋಗ್ಯ ತಪಾಸಣೆಗೆ ನಿಯಮಿತವಾಗಿ ವೈದ್ಯರು ಬರುತ್ತಿದ್ದಾರೆ” ಎಂದು ತಿಳಿಸಿದರು. ಇದೇ ವೇಳೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ, ವಿಧಾನ ಪರಿಷತ್‌ ಸದಸ್ಯ ಪ್ರಕಾಶ್ ರಾಥೋಡ್ ಸೇರಿ ಹಲವರು ಸಿಎಂಗೆ ಸಾಥ್‌ ನೀಡಿದರು.

Exit mobile version