ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಜಯನಗರದ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಗುರಯವಾರ ಸಿಎಂ ಸಿದ್ದರಾಮಯ್ಯ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸಿಎಂ ಜತೆಗೆ ಸಚಿವ ಚಲುವರಾಯಸ್ವಾಮಿ ಅವರು ಕೂಡ ತೆರಳಿ ಎಚ್‌ಡಿಕೆ (HD Kumaraswamy) ಯೋಗಕ್ಷೇಮ ವಿಚಾರಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. @hd_kumaraswamy
— Siddaramaiah (@siddaramaiah) August 30, 2023
ಎಚ್‌ಡಿಕೆ ಆರೋಗ್ಯದಲ್ಲಿ ಚೇತರಿಕೆ
ಬುಧವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಾದ ವೇಳೆ ಕುಮಾರಸ್ವಾಮಿ ಅವರ ಬಲಕೈ ಶಕ್ತಿಯನ್ನು ಕಳೆದುಕೊಂಡಿತ್ತು. ಮಾತು ತೊದಲುತ್ತಿತ್ತು. ಇದಕ್ಕೆ ಮಿದುಳಿನ ಎಡಭಾಗದಲ್ಲಿ ಸಂಭವಿಸಿದ ಸಣ್ಣ ಸ್ಟ್ರೋಕ್ ಕಾರಣ ಎಂದು ವೈದ್ಯರು ಹೇಳಿದ್ದರು. ಕೂಡಲೇ ಆರೋಗ್ಯ ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಿರುವ ಕಾರಣ ಅವರು ಮೊದಲಿನಂತೆಯೇ ಆರೋಗ್ಯವಾಗಿ ತಮ್ಮ ಎಲ್ಲ ಕೆಲಸ ಕಾರ್ಯಗಳನ್ನು ತಾವೇ ನಿರ್ವಹಿಸುತ್ತಿದ್ದಾರೆ ಎಂದು ಡಾ.ಸತೀಶ್ ಚಂದ್ರ ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಂದಿದ್ದರಿಂದ ಸಮಸ್ಯೆ ಉಲ್ಬಣಿಸಲಿಲ್ಲ ಎನ್ನಲಾಗಿದೆ. ಇದೀಗ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಶುಕ್ರವಾರ ಡಿಚ್ಚಾರ್ಜ್ ಮಾಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಅವರು ಭೇಟಿ ನೀಡುವುದಕ್ಕೂ ಮೊದಲು ಎಚ್‌ಡಿಕೆ ಅವರ ಸಹೋದರ ಎಚ್.ಡಿ.ರೇವಣ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಇನ್ನು ವಿದೇಶಕ್ಕೆ ತೆರಳಿದ್ದ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಗುರುವಾರ ಬೆಳಗ್ಗೆ 9ಕ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಬಂದು ತಂದೆಯ ಜತೆ ಮಾತನಾಡಿದರು. ಅದೇ ರೀತಿ ಮಧ್ಯಾಹ್ನ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ ಬಳಿಕ ಪ್ರಸಾದದೊಂದಿಗೆ ಎಚ್‌ಡಿಕೆ ಅವರ ತಾಯಿ ಚೆನ್ನಮ್ಮ ಅವರು ಕೂಡ ಆಸ್ಪತ್ರೆಗೆ ಆಗಮಿಸಿ ಮಗನ ಆರೋಗ್ಯ ವಿಚಾರಿಸಿದರು.
ಎಚ್.ಡಿ. ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ವಿವಿಧೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಎಚ್‌ಡಿಕೆ ಗುಣಮುಖರಾಗಲಿ ಎಂದು ಧರ್ಮಸ್ಥಳದಲ್ಲಿ ಉರುಳುಸೇವೆ ಮಾಡಿದ ಅಭಿಮಾನಿ
ಬೀದರ್: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಅವರ ಅಭಿಮಾನಿಯೊಬ್ಬರು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಸಾನ್ನಿಧ್ಯದಲ್ಲಿ ಉರುಳು ಸೇವೆ ಮಾಡಿ ಗಮನ ಸೆಳೆದಿದ್ದಾರೆ. ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಜೆಡಿಎಸ್ ಪಕ್ಷದ ಉಪಾಧ್ಯಕ್ಷ ಶರಣಪ್ಪ ಪರೇಪ್ಪ ಧರ್ಮಸ್ಥಳದಲ್ಲಿ ಉರುಳು ಸೇವೆ ಮಾಡಿದ ಅಭಿಮಾನಿಯಾಗಿದ್ದಾರೆ.