Site icon Vistara News

HD Kumaraswamy : ಸಮ್ಮಿಶ್ರ ಸರ್ಕಾರದಲ್ಲಿ ಪ್ರತ್ಯೇಕ ಕಚೇರಿ ಕೇಳಿದ್ದ ಸಿದ್ದರಾಮಯ್ಯ: ಎಚ್.ಡಿ. ಕುಮಾರಸ್ವಾಮಿ

HD Kumaraswamy attack on CM Siddaramaiah

ಬೆಂಗಳೂರು: ಈಗ ರಾಜ್ಯ ರಾಜಕೀಯದಲ್ಲಿ ಶಿಷ್ಟಾಚಾರ (Political etiquette), ಅಧಿಕಾರ ವ್ಯಾಪ್ತಿ, ದಲಿತರ ಕಡೆಗಣನೆ ಸೇರಿದಂತೆ ಹಲವು ವಿಚಾರಗಳು ಮುನ್ನೆಲೆಗೆ ಬರುತ್ತಿದೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ತಮಗೆ ಪ್ರತ್ಯೇಕ ಕಚೇರಿಯನ್ನು ನೀಡಬೇಕು. ಜತೆಗೆ ತಮ್ಮ ಕೆಲಸಕ್ಕೆ ಅಧಿಕಾರಿಯೊಬ್ಬರನ್ನು ನಿಯೋಜನೆ ಮಾಡಬೇಕು ಎಂಬುದಾಗಿ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದ್ದಾರೆ.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್‌.ಡಿ‌. ಕುಮಾರಸ್ವಾಮಿ, ನನ್ನ ಕೆಲಸಕ್ಕೆ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದು ಇದೇ ಸಿದ್ದರಾಮಯ್ಯ. ಸಮ್ಮಿಶ್ರ ಸರ್ಕಾರದ ಕಾಲದಲ್ಲಿ ನನಗೆ ಪ್ರತ್ಯೇಕ ಕಚೇರಿ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಆ ರೀತಿಯಾಗಿ ಅವರು ನನಗೆ ಒತ್ತಡ ಹಾಕಿದ್ದರು. ನಾನು ಸಿಎಂ ಆದಾಗ, ಆಗದಿದ್ದಾಗಲೂ ಶಿಷ್ಟಾಚಾರಕ್ಕೆ ಗೌರವ ಕೊಟ್ಟಿದ್ದೇನೆ. ಆದರೆ, ಈಗ ಏನೇನೋ ಹೇಳಿ ಘನತೆಗೆ ಚ್ಯುತಿ ತರಲು ಹೊರಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: Speaker UT Khader : ಬಿಜೆಪಿ ದೂರಿಗೆ ಮುನ್ನವೇ ಖಾದರ್‌ ಅಲರ್ಟ್:‌ ರಾಜ್ಯಪಾಲರಿಗೆ ಅಮಾನತು ವರದಿ ಸಲ್ಲಿಕೆ

ಬುಧವಾರ (ಜುಲೈ 19) ನಡೆದಿರುವುದು ಅತ್ಯಂತ ಕರಾಳವಾದ ದಿನ. ನಾವು ಮಾಡಿದ್ದೇ ಸರಿ ಎನ್ನುವ ಹಠಮಾರಿತನವನ್ನು ಕಾಂಗ್ರೆಸ್ಸಿಗರು (Congress Party members) ಬಿಡಬೇಕು. ಉದ್ದಟತನದ ಅಧಿಕಾರ ಶಾಶ್ವತವಲ್ಲ. ದೆಹಲಿಯಲ್ಲಿ 54ರ ಸಂಖ್ಯೆಯಲ್ಲಿರುವ ನೀವು ಈಗ ನಮ್ಮನ್ನು ಟೀಕೆ ಮಾಡುತ್ತಿದ್ದೀರ. ನೋಡುತ್ತಲಿರಿ, ನೀವು 54ಕ್ಕಿಂತ ಕಡಿಮೆ ಆಗುತ್ತೀರ ಎಂದು ಆಕ್ರೋಶ ಹೊರಹಾಕಿದ ಎಚ್.ಡಿ. ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಅವರೇ, ನೀವೇ ಸನ್ನೆ ಮಾಡಿ ಬಿಜೆಪಿ ಸದಸ್ಯರ ಅಮಾನತು ಮಾಡುವಂತೆ ಮಾಡಿದ್ದೀರ. ಹೀಗೆ ಮಾಡುವ ಮೂಲಕ ಸ್ಪೀಕರ್ (Karnataka Speaker) ಘನತೆಯನ್ನು ಯಾಕೆ‌ ಹಾಳು ಮಾಡುತ್ತೀರ? ಸದನದ ಬಾವಿಗಿಳಿದವರೇ ಹೇಳುತ್ತಾರೆ ಯಾರು ಸನ್ನೆ ಮಾಡಿದರು ಎಂಬುದನ್ನು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಒಪ್ಪಿಕೊಂಡಿದ್ದರೆ ಮುಗಿದು ಹೋಗುತ್ತಿತ್ತು

ಮಹಾಘಟಬಂಧನ್‌ ನಾಯಕರ ಕರೆತರಲು ಡಿಪಿಆರ್‌ನಿಂದ ಆದೇಶ ಹೋಗಿದೆ. ಬಿಜೆಪಿ ಈ ವಿಚಾರ ಪ್ರಸ್ತಾಪಿಸಿದಾಗ ಗೊಂದಲ ಆಯ್ತು. ಬಳಿಕ ಸಂಧಾನ ಸಭೆಯಲ್ಲಿ ಆಡಳಿತ ಪಕ್ಷದ ನಾಯಕರು ನಾನೇನು ತಪ್ಪು ಮಾಡಿಲ್ಲ ಎಂದು ಪ್ರತಿಷ್ಠೆ ವ್ಯಕ್ತಪಡಿಸಿದರು. ನನ್ನ ಪ್ರಕಾರ ಅದನ್ನು ಎರಡು ನಿಮಿಷದಲ್ಲಿ ಬಗೆಹರಿಸಬಹುದಿತ್ತು. ರಾಜ್ಯಕ್ಕೆ ಬಂದ ಗಣ್ಯರಿಗೆ ಸ್ವಾಗತ ಮಾಡಲು ಕಳಿಸಿದ್ದೀವಿ ಅಂತ ಹೇಳಿದ್ದರೆ ಆಗುತ್ತಿತ್ತು. ವಿಷಾದ ವ್ಯಕ್ತಪಡಿಸೋದು ಸಹ ಬೇಕಾಗಿರಲಿಲ್ಲ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರೂ ಆಗುತ್ತಿತ್ತು. ಆದರೆ ಇವರು ಮಾಡಿದ್ದೇ ಬೇರೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ನಾನ್ಯಾರಿಗೂ ಹೆದರಲ್ಲ ಎಂದು ಸಿಎಂ ಸಿದ್ದರಾಮಯ್ಯ ರೋಷಾವೇಶದಲ್ಲಿ ಹೇಳುತ್ತಾರೆ. ಇತ್ತ ಸ್ಪೀಕರ್ ನೀವ್ಯಾರೂ ದೇಶ ಪ್ರೇಮಿಗಳಲ್ಲ ಎಂದು ಹೇಳುತ್ತಾರೆ. ನಾವೆಲ್ಲ ದೇಶ ವಿರೋಧಿಗಳಾ? ದೇಶ ವಿರೋಧಿ ಆಗಲು ಏನ್ ಮಾಡಿದ್ದೇವೆ? ಈ ರೀತಿ ಶಿಕ್ಷೆ ಕೊಡಲಿಕ್ಕೆ ಶಾಸಕರು ಶಾಲೆ ಮಕ್ಕಳಾ? ಹೀಗೆ ಬಾವಿಗಿಳಿದು ಎಷ್ಟು ಬಾರಿ ಪ್ರತಿಭಟನೆ ನಡೆದಿಲ್ಲ? ಆಡಳಿತ ಪಕ್ಷದವವರು ಸಭಾಧ್ಯಕ್ಷರನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಎಷ್ಟು ಬಾರಿ ಪೇಪರ್ ಹರಿದು ಹಾಕಿಲ್ಲ? ಮೈಕ್ ಅನ್ನೇ ಕಿತ್ತು ಹಾಕಿದ ಘಟನೆ ನಡೆದಿದೆ. ಪುಟ್ಟರಂಗಶೆಟ್ಟಿ ಅವರು ಒಪ್ಪಲಿಲ್ಲ ಅನ್ನುವ ಕಾರಣಕ್ಕೆ ರುದ್ರಪ್ಪ ಲಮಾಣಿಗೆ ಡೆಪ್ಯುಟಿ ಸ್ಪೀಕರ್ ಮಾಡಿದ್ದೀರಿ. ರಾಜಕೀಯ ಲಾಭಕ್ಕೆ ದಲಿತರು ಅಂತ ಈಗ ಬಳಸಲು ಮುಂದಾಗಿದ್ದೀರಾ? ಪ್ರಿಯಾಂಕ್ ಖರ್ಗೆ ನೀವೇ ಸ್ಪೀಕರ್ ಆಗಿ ಬಂಜಾರ ಸಮುದಾಯ ಲಮಾಣಿಗೆ ಸಚಿವ ಸ್ಥಾನ ಕೊಡಬಹುದಿತ್ತಲ್ಲವೇ? ಅಷ್ಟೊಂದು ಅಭಿಮಾನ ಇದ್ದರೆ ಆ ಪೀಠದಲ್ಲಿ ನೀವೇ ಕೂರಬೇಕಿತ್ತು ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Arecanut Issue : ಅಡಿಕೆ ಸಮಸ್ಯೆ ಎದುರಿಸಲು ಒಟ್ಟಾಗಿ ನಿಲ್ಲುವ ಸಂಕಲ್ಪ: ಟಾಸ್ಕ್‌ಫೋರ್ಸ್‌ನಲ್ಲಿ ಮಹತ್ವದ ಚರ್ಚೆ

ನಾನು ಪ್ರಮಾಣವಚನ ಸ್ವೀಕಾರ ಮಾಡಿದಾಗಿನಿಂದ ಯಾವ ಐಎಎಸ್ ಅಧಿಕಾರಿಯನ್ನು (IAS Officers) ಯಾರಿಗೂ ನಿಯೋಜನೆ ಮಾಡಿಲ್ಲ. ಯಾವುದೇ ಸಂದರ್ಭದಲ್ಲಿ ದಾನಿಶ್ ಅಲಿಯವರಿಗೆ ಸರ್ಕಾರದ ಆತಿಥ್ಯ ಕೊಟ್ಟಿಲ್ಲ. ಅವರು ಬಂದಾಗ ಸರ್ಕಾರದ ಕಾರು ಕೊಟ್ಟಿಲ್ಲ. ನನ್ನ ಮೇಲೆ ಕಪ್ಪು ಚುಕ್ಕೆ ಇಡಲು ಹೊರಟಿದ್ದೀರಾ? ನಾಚಿಕೆ, ಮಾನ, ಮರ್ಯಾದೆ ಇದ್ದರೆ ನನ್ನ ಕಾಲದಲ್ಲಿ ಏನಾಗಿದೆ ಎಂಬ ಸತ್ಯವನ್ನು ಹೊರಗಿಡಿ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Exit mobile version