ಬೆಂಗಳೂರು: 76ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲಾಲ್ಬಾಗ್ನಲ್ಲಿ ಆಯೋಜಿಸಿರುವ 214ನೇ ಫಲ ಪುಷ್ಪ ಪ್ರದರ್ಶನಕ್ಕೆ (Lalbagh Flower Show 2023) ಶುಕ್ರವಾರ ಸಂಜೆ ಚಾಲನೆ ದೊರೆತಿದೆ. ವಿಧಾನಸೌಧ ನಿರ್ಮಾತೃ, ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ಶ್ರೀಪಾದ್, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ಎಂಎಲ್ಸಿಗಳಾದ ಶರವಣ, ಯುಬಿ ವೆಂಕಟೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಜಗದೀಶ್, ಲಾಲ್ಬಾಗ್ ಉಪ ನಿರ್ದೇಶಕಿ ಕುಸುಮ ಸೇರಿ ಹಲವರು ಉಪಸ್ಥಿತರಿದ್ದರು.
ಸಸ್ಯಕಾಶಿ ಲಾಲ್ಬಾಗ್ನಲ್ಲಿ ಸುಮಾರು 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲವರ್ ಶೋ-2023 ಆಯೋಜಿಸಲಾಗಿದೆ. ಪ್ರತಿವರ್ಷ ಸ್ವಾತಂತ್ರ್ಯ ದಿನೋತ್ಸವ ಅಂಗವಾಗಿ ಆಗಸ್ಟ್ ತಿಂಗಳಲ್ಲಿ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಈ ಬಾರಿಯ ಫ್ಲವರ್ ಶೋಗೆ ವಿಧಾನಸೌಧ ಹಾಗೂ ಅದರ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಥೀಮ್ ಆಯ್ದುಕೊಳ್ಳಲಾಗಿದೆ. ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಹೂವಿನ ವಿಧಾನಸೌಧ ತಲೆ ಎತ್ತಿ ನಿಂತಿದೆ. ಕೆಂಗಲ್ ಹನುಮಂತಯ್ಯ ಅವರ ಬದುಕು, ಸಾಧನೆ ಹಾಗೂ ಅವರ ಕನಸುಗಳ ಬಗೆಗಿನ ಸಂಪೂರ್ಣ ಮಾಹಿತಿ ನೀಡುವ ಫಲಕಗಳನ್ನು ಹಾಕಲಾಗಿದೆ.
ಇದನ್ನೂ ಓದಿ | Lalbagh Tour : ಸಸ್ಯಕಾಶಿ ಲಾಲ್ಬಾಗ್ನೊಳಗೆ ಏನೇನಿದೆ? ಮರೆಯದೆ ನೋಡಿ…
ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಹೂವಿನ ವಿಧಾನಸೌಧ ಆಕರ್ಷಣೆಯ ಕೇಂದ್ರವಾಗಲಿದೆ. ಒಟ್ಟು 3.5 ಲಕ್ಷ ಬಗೆಬಗೆಯ ಹೂವುಗಳಿಂದ ಈ ವಿಧಾನಸೌಧ ನಿರ್ಮಿಸಲಾಗಿದೆ. ಇದರ ಜತೆಗೆ ಕೆಂಗಲ್ ಹನುಮಂತಯ್ಯವನವರ ಹೂವಿನ ಪ್ರತಿಮೆಯೂ ಇದೆ. ಈ ಬಾರಿ ಸ್ಕಾಟ್ಲೆಂಟ್, ಇಂಡೋನೇಷಿಯಾದ ಹೂವುಗಳ ಬದಲಾಗಿ ಕೋಲ್ಕತ್ತಾ, ಪುಣೆ, ಆಂಧ್ರ, ಊಟಿ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಹೂವುಗಳನ್ನು ತರಿಸಲಾಗಿದೆ. ಒಟ್ಟಾರೆ ಈ ಬಾರಿ 25 ಲಕ್ಷ ಹೂವುಗಳು ಫಲಪುಷ್ಪ ಪ್ರದರ್ಶನದಲ್ಲಿ ಜನರ ಮನ ಸೆಳೆಯಲು ಸಿದ್ಧವಾಗಿವೆ.
ಟಿಕೆಟ್ ದರ ಎಷ್ಟು?
ಫಲಪುಷ್ಪ ಪ್ರದರ್ಶನಕ್ಕೆ ಟಿಕೆಟ್ ನಿಗದಿ ಮಾಡಲಾಗಿದ್ದು, ವಯಸ್ಕರಿಗೆ ವಾರದ ದಿನಗಳಲ್ಲಿ 70 ರೂ. ಹಾಗೂ ವಾರದ ಕೊನೆಯಲ್ಲಿ 80 ರೂಪಾಯಿ ಹಾಗೂ ಮಕ್ಕಳಿಗೆ 30 ರೂಪಾಯಿ ಇದೆ. ಜತೆಗೆ ಶಾಲಾ ಮಕ್ಕಳು ಶಾಲೆಯ ಯೂನಿಫಾರ್ಮ್ ಹಾಗೂ ಐಡಿ ಕಾರ್ಡ್ ಜತೆಗೆ ಬಂದರೆ ಉಚಿತವಾಗಿ ಹೂವಿನ ಲೋಕವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಭದ್ರತೆ ದೃಷ್ಟಿಯಿಂದ 200 ಸಿಸಿಟಿವಿ ಅಳವಡಿಕೆ ಮಾಡುವುದರ ಜತೆಗೆ 400ಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಸಾರ್ವಜನಿಕ ಸಾರಿಗೆ ಬಳಸಿದರೆ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಬಗೆಹರಿಯಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಫ್ಲವರ್ ಶೋ ವೀಕ್ಷಣೆಗೆ ಲಕ್ಷಾಂತರ ಜನರ ಆಗಮನದ ಹಿನ್ನೆಲೆಯಲ್ಲಿ ಲಾಲ್ಬಾಗ್ ಬಳಿ ಸಂಚಾರ ದಟ್ಟಣೆ ಆಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪರ್ಯಾಯ ಮಾರ್ಗ ಜತೆಗೆ ನಿಗದಿತ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಲು ಸೂಚಿಸಲಾಗಿದೆ. ಡಾ.ಮರೀಗೌಡ ರಸ್ತೆ, ಲಾಲ್ಬಾಗ್ ರಸ್ತೆ, ಕೆ.ಎಚ್. ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಧ್ಯವಾದಷ್ಟು ಸಮೂಹ ಸಾರಿಗೆ ವ್ಯವಸ್ಥೆ ಬಳಸಲು ಮನವಿ ಮಾಡಲಾಗಿದೆ. ಬಿಎಂಟಿಸಿ ಬಸ್, ಮೆಟ್ರೋ, ಕ್ಯಾಬ್ಗಳನ್ನು ಬಳಸಲು ಸೂಚಿಸಲಾಗಿದೆ.
ಇದನ್ನೂ ಓದಿ | Bangalore Tourist Places : ಬೆಂಗಳೂರಿಗೆ ಬಂದಾಗ ನೀವು ನೋಡಲೇಬೇಕಾದ ಟಾಪ್ 11 ಪ್ರವಾಸಿ ಸ್ಥಳಗಳಿವು
ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು:
- ಡಾ.ಮರಿಗೌಡ ರಸ್ತೆ, ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆ.
- ಕೆ.ಹೆಚ್.ರಸ್ತೆ, ಶಾಂತಿನಗರ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನ ನಿಲುಗಡೆ
- ಡಾ.ಮರಿಗೌಡ ರಸ್ತೆ- ಹಾಪ್ ಕಾಮ್ಸ್ ನಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ
- ಜೆ.ಸಿ. ರಸ್ತೆ ಕಾರ್ಪೊರೇಷನ್ ಪಾರ್ಕಿಂಗ್ ಸ್ಥಳದಲ್ಲಿ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನ ನಿಲುಗಡೆ
ವಾಹನಗಳ ನಿಲುಗಡೆ ನಿಷೇಧಿಸಿರುವ ರಸ್ತೆಗಳು:
- ಡಾ. ಮರಿಗೌಡ ರಸ್ತೆ, ಲಾಲ್ ಬಾಗ್ ಮುಖ್ಯ ದ್ವಾರದಿಂದ ನಿಮ್ಹಾನ್ಸ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ
- ಕೆ.ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ
- ಲಾಲ್ ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್ ಬಾಗ್ ಮುಖ್ಯದ್ವಾರದ ವರೆಗೆ
- ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್ ವರೆಗೆ
- ಬಿ.ಎಂ.ಟಿ.ಸಿ ರಸ್ತೆಯಲ್ಲಿ, ರಸ್ತೆಯ ಎರಡೂ ಬದಿಗಳಲ್ಲಿ
- ಲಾಲ್ ಬಾಗ್ ವೆಸ್ಟಿಗೇಟ್ನಿಂದ ಆರ್.ವಿ. ಟೀಚರ್ ಕಾಲೇಜ್ವರೆಗೆ
- ಆರ್ ವಿ ಟೀಚರ್ ಕಾಲೇಜ್ನಿಂದ ಆಶೋಕ ಪಿಲ್ಲರ್ ವರೆಗೆ
- ಅಶೋಕ ಪಿಲ್ಲರ್ನಿಂದ ಸಿದ್ದಾಪುರ ಜಂಕ್ಷನ್ ವರೆಗೆ