Site icon Vistara News

Mining Lease: ಗಣಿ ಗುತ್ತಿಗೆ ಸಮಸ್ಯೆ ಪರಿಹಾರಕ್ಕೆ ಏಕಗವಾಕ್ಷಿ ವ್ಯವಸ್ಥೆಗೆ ಸಿಎಂ ಸೂಚನೆ

CM Siddaramaiah

ಬೆಂಗಳೂರು: ಅರಣ್ಯ ಇಲಾಖೆಯ ಗಣಿ ಗುತ್ತಿಗೆ (Mining Lease) ಸಮಸ್ಯೆಗಳನ್ನು ಬಗೆಹರಿಸಲು ಏಕಗವಾಕ್ಷಿ ಮಾದರಿ ವ್ಯವಸ್ಥೆ ರೂಪಿಸಿ ಕ್ರಮ ವಹಿಸಬೇಕು. ರಾಜ್ಯದಲ್ಲಿ ಗಣಿ ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ಅರಣ್ಯ ಇಲಾಖೆ ತೀರುವಳಿ ಮತ್ತಿತರ ಅನುಮತಿ ಪತ್ರಗಳನ್ನು ನೀಡಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹಾಗೂ ಅರಣ್ಯ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಪ್ರತ್ಯೇಕ ಸಭೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಅರಣ್ಯ ಇಲಾಖೆ ತೀರುವಳಿ ಪಡೆಯಲು ಬಹಳಷ್ಟು ಪ್ರಕರಣಗಳು ಬಾಕಿ ಇರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕೆ ಗಣಿ ಗುತ್ತಿಗೆ ಪಡೆದ ಸಂಸ್ಥೆಗಳು ಅರಣ್ಯೀಕರಣಕ್ಕೆ ಪರ್ಯಾಯ ಭೂಮಿ ನೀಡಿಲ್ಲ. ಆನೆಗಳು ಮತ್ತಿತರ ವನ್ಯಜೀವಿಗಳ ಉಪಟಳದಿಂದಾಗಿ ಕೃಷಿ ಭೂಮಿ ಮಾರಲು ಸಿದ್ಧರಿರುವ ರೈತರು ಹಾಸನ ಮತ್ತು ರಾಜ್ಯದ ಇತರ ಕೆಲವು ಭಾಗಗಳಲ್ಲಿದ್ದಾರೆ. ಇಂತಹ ರೈತರಿಗೆ ಈ ಸಂಸ್ಥೆಗಳು ಸೂಕ್ತ ಬೆಲೆ ನೀಡಿ ಜಮೀನು ಖರೀದಿಸಬಹುದು ಎಂದು ಅಧಿಕಾರಿಗಳಿಂದ ಅಭಿಪ್ರಾಯ ವ್ಯಕ್ತವಾಯಿತು.

ಇದನ್ನೂ ಓದಿ | MLA Muniratna : ನನ್ನ ಕ್ಷೇತ್ರದ ಅನುದಾನ ವಾಪಸ್‌ಗಾಗಿ ಡಿಕೆಶಿ ಕಾಲು ಹಿಡಿಯುತ್ತೇನೆ: ಮುನಿರತ್ನ

ಭಾರತ ಸರ್ಕಾರ ಸ್ವಾಮ್ಯದ ಕೆಐಒಸಿಎಲ್ ಕುದುರೆಮುಖದ ಭೂಮಿಯನ್ನು ಅರಣ್ಯ ಇಲಾಖೆಗೆ ವಹಿಸಿಕೊಡುವ ಬಗ್ಗೆ ಚರ್ಚಿಸಿ ಬಗೆಹರಿಸಲು ಸೂಚಿಸಲಾಯಿತು. ಅನಗತ್ಯವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರಣ್ಯ ಇಲಾಖೆ ತೊಂದರೆ ನೀಡಬಾರದು. ಅನಗತ್ಯ ವಿಳಂಬ ಮಾಡಬಾರದು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಅರಣ್ಯ ಇಲಾಖೆಯ 25 ಮಿಲಿಯನ್ ಟನ್ ಅದಿರನ್ನು ಹರಾಜು ಹಾಕುವ ಸಂಬಂಧ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಮುಂದುವರಿಯುವಂತೆ ಸೂಚಿಸಿದರು. 2023- 24 ನೇ ಸಾಲಿಗೆ ಮುಖ್ಯ ಖನಿಜ ಹಾಗೂ ಉಪ ಖನಿಜಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ ಅಂತ್ಯದವರೆಗೆ 3,276 ಕೋಟಿ ರೂ.ಗಳ ರಾಜಧನ ಸಂಗ್ರಹಣೆಯಾಗಿದೆ ಎಂದು ಸಭೆಗೆ ಮಾಹಿತಿ ಒದಗಿಸಲಾಯಿತು.

ಸರ್ಕಾರಕ್ಕೆ ಸಲ್ಲಿಕೆಯಾಗಬೇಕಾದ ರಾಜಧನ ಅನಗತ್ಯವಾಗಿ ಸೋರಿಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಜಾಗೃತ ದಳ ಕಾಲಕಾಲಕ್ಕೆ ಪರಿಶೀಲಿಸುವಂತೆ ಕ್ರಮವಹಿಸಲು ಸೂಚಿಸಿದರು.

ಸಿ ವರ್ಗದ ಅದಿರಿನ ಬ್ಲಾಕ್‌ಗಳಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಅರಣ್ಯ ಅನುಮತಿಗಳನ್ನು ವರ್ಗಾಯಿಸುವ ಬಗ್ಗೆ ಕಾನೂನು ಅಭಿಪ್ರಾಯ ಪಡೆಯುವಂತೆ ಸೂಚಿಸಿದರು. ಈಗಾಗಲೇ ಗಣಿಗಾರಿಕೆ ನಡೆಸಿದ ಅರಣ್ಯ ಪ್ರದೇಶದಲ್ಲಿ ಮತ್ತು ಅರಣ್ಯೇತರ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ಕುರಿತು ಚರ್ಚಿಸಲಾಯಿತು.

ಇದನ್ನೂ ಓದಿ | CM Siddaramaiah : ದೀಪಾವಳಿಗೂ ಪಟಾಕಿ ಹೊಡೀಬಾರದಾ? ಸಿದ್ದರಾಮಯ್ಯ ಹೇಳಿದ್ದೇನು?

ಅರಣ್ಯ ಸಚಿವ ಈಶ್ವರ ಖಂಡ್ರೆ, ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ , ಮುಖ್ಯ ಮಂತ್ರಿಗಳ ರಾಜಕೀಯ್ ಕಾರ್ಯದರ್ಶಿ ಗೋವಿಂದರಾಜು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಗಿರೀಶ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆದಿವಾಸಿ ಬುಡಕಟ್ಟುಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ

ಬೆಂಗಳೂರು: ಕಾಡು, ಕಾಡಂಚಿನ ಅರಣ್ಯಾಧಾರಿತ ಆದಿವಾಸಿ ಬುಡಕಟ್ಟುಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೊಡಗು, ಚಾಮರಾಜನಗರ, ಮೈಸೂರು, ಹಾಸನ, ಚಿಕ್ಕಮಗಳೂರು, ದಕ್ಶಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಹಾಗೂ ಬುಡಕಟ್ಟು ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ರಾಜ್ಯದ, ಕಾಡು, ಕಾಡಂಚಿನ ಅರಣ್ಯಾಧಾರಿತ ಆದಿವಾಸಿ ಬುಡಕಟ್ಟುಗಳ ಒಕ್ಕೂಟದ ನಿಯೋಗವು ಭೇಟಿ ಮಾಡಿದ ಸಂದರ್ಭದಲ್ಲಿ ಸಿಎಂ ಮಾತನಾಡಿದರು. ರಾಜ್ಯದಲ್ಲಿ 51 ಆದಿವಾಸಿ ಜನಾಂಗಗಳಿದ್ದು, ಸೋಲಿಗ , ಜೇನುಕುರುಬ ಸೇರಿ 12 ಬುಡಕಟ್ಟು ಜನಾಂಗಗಳು ಸೌಲಭ್ಯ ವಂಚಿತವಾಗಿವೆ. ಅವರಲ್ಲಿ ಹಲವರಿಗೆ ಯೋಜನೆಗಳ ಸೌಲಭ್ಯ ಪಡೆಯಲು ಅಗತ್ಯವಿರುವ ದಾಖಲೆಗಳು ಕೂಡ ಇಲ್ಲದ ಪರಿಸ್ಥಿತಿ ಇದೆ. ಶಿಬಿರಗಳನ್ನು ಆಯೋಜಿಸಿ ಆಧಾರ್ ಮುಂತಾದ ದಾಖಲೆಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ನಿಯೋಗವು ಮನವಿ ಮಾಡಿತು.

ಎಎನ್ಎಮ್, ನರ್ಸಿಂಗ್ ಮುಂತಾದ ಶಿಕ್ಷಣ ಪಡೆದಿರುವ ಬುಡಕಟ್ಟು ಜನಾಂಗಗಳ ಮೊದಲ ಪೀಳಿಗೆಗೆ ಆರೋಗ್ಯ ಇಲಾಖೆಯಲ್ಲಿ ಕೆಲಸ ನೀಡುವ ಬಗ್ಗೆ ಹಾಗೂ ಪ್ರಸ್ತುತ ಅರಣ್ಯ ಇಲಾಖೆಯ ಅರಣ್ಯ ಹುದ್ದೆಗಳಿಗೆ ಅರಣ್ಯವಾಸಿಗಳಿಗೆ ನೀಡಲು ಮರುಆದೇಶ ಹೊರಡಿಸುವ ಬಗ್ಗೆ ಮನವಿ ಮಾಡಲಾಯಿತು.

ಇದನ್ನೂ ಓದಿ | Waste Disposal Unit: ಜನರಹಿತ ಪ್ರದೇಶಗಳಿಗೆ ಕಸ ವಿಲೇವಾರಿ ಘಟಕಗಳ ಸ್ಥಳಾಂತರ: ಡಿಕೆಶಿ

ರಾಜ್ಯದಲ್ಲಿನ 115 ಆಶ್ರಮ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲ. ಆದಿವಾಸಿ ಸಮುದಾಯಕ್ಕೆ ಸೇರಿದ ಬಿಎಡ್ ಶಿಕ್ಷಣ ಪಡೆದಿರುವವರನ್ನೇ ಈ ಶಾಲೆಗಳಿಗೆ ನೇಮಕ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಯಿತು.

ಆದಿವಾಸಿ ಬುಡಕಟ್ಟುಗಳ ಒಕ್ಕೂಟದ ಡಾ. ರತ್ನಮ್ಮ ಮತ್ತು ತಂಡ, ಅರಣ್ಯ ಸಚಿವ ಈಶ್ವರ ಖಂಡ್ರೆ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಹಾಗೂ ಬುಡಕಟ್ಟು ಜನಾಂಗಗಳ ಪ್ರತಿನಿಧಿಗಳು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Exit mobile version