ಬೆಂಗಳೂರು: ತುಮಕೂರಿನ ಸಿದ್ಧಗಂಗಾ ಮಠದ (Siddagangaa Mutt) ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಸತಿ ನಿಲಯ ಕಟ್ಟಡ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಂದುವರಿಸಲು ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ ನಂತರ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನೂ ಪ್ರಾರಂಭವಾಗದಿರುವ ಕಾಮಗಾರಿಗಳನ್ನು ಮರುಪರಿಶೀಲನೆಗಾಗಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ಅದರಲ್ಲಿ 9.90 ಕೋಟಿ ರೂ. ವೆಚ್ಚದ ಸಿದ್ಧಗಂಗಾ ಮಠದ ವಸತಿ ನಿಲಯದ ಕಾಮಗಾರಿಯೂ ಸೇರಿತ್ತು. ಈ ಕಾಮಗಾರಿಯ ತಾಂತ್ರಿಕ ಬಿಡ್ ತೆರೆಯಲಾಗಿತ್ತು.
ಇದನ್ನೂ ಓದಿ | New Education Policy: ಕರ್ನಾಟಕಕ್ಕೆ ಪ್ರತ್ಯೇಕ ಶಿಕ್ಷಣ ನೀತಿ: ಎನ್‌ಇಪಿ ತಿರಸ್ಕಾರ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್
ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕಾಮಗಾರಿ ಟೆಂಡರ್ ಪ್ರಕ್ರಿಯೆಯನ್ನು ಮುಂದುವರಿಸುವ ಬಗ್ಗೆ ಇಲಾಖೆಯು ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಂದುವರಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ.
ವಕೀಲ ರಕ್ಷಣಾ ಕಾಯ್ದೆ ಜಾರಿಗೆ ಕ್ರಮ ವಹಿಸಲು ಸಿದ್ಧ: ಸಿದ್ದರಾಮಯ್ಯ ಭರವಸೆ
ಬೆಂಗಳೂರು: ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ನಾವು ಬದ್ಧವಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಬೆಂಗಳೂರು ವಕೀಲರ ಸಂಘ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ವಕೀಲ ಸಮೂಹ ಈ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟಿಸಿತ್ತು. ಈ ಪ್ರತಿಭಟನೆಗೆ ನಾನೂ ಬೆಂಬಲ ಸೂಚಿಸಿ ವಿಧಾನಸಭೆಯಲ್ಲಿ ವಕೀಲ ಸಮೂಹದ ಪರವಾಗಿ ಧ್ವನಿ ಎತ್ತಿದ್ದೆ. ಈಗ ನಾವೇ ಅಧಿಕಾರಕ್ಕೆ ಬಂದಿದ್ದೇವೆ. ಈಗ ಈ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಬದ್ಧವಾಗಿದ್ದೇವೆ ಎಂದರು.
ಇದನ್ನೂ ಓದಿ | Congress Guarantee: ನೀವು ಹೇಳಿದಂತೆ ಗ್ಯಾರಂಟಿ ಯೋಜನೆ ಜಾರಿ ಆಗೋಲ್ಲ: ಸಿಎಂ ಸಿದ್ದರಾಮಯ್ಯಗೆ ಆರ್ಥಿಕ ಇಲಾಖೆ ಖಡಕ್ ಮಾತು
ಇದೇ ಸಂದರ್ಭದಲ್ಲಿ ವಕೀಲರ ಸಂಘ, ವಕೀಲರ ವಿಮೆ ಯೋಜನೆಯನ್ನೂ ಜಾರಿಗೆ ತರುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿತು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಬಗ್ಗೆಯೂ ಸಮಗ್ರವಾಗಿ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.