Site icon Vistara News

CM Siddaramaiah: 4 ದಶಕದಿಂದ ರಾಜಕೀಯದಲ್ಲಿರುವ ನನ್ನ ಬದುಕು ತೆರೆದ ಪುಸ್ತಕ: ಸಿಎಂ ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ನಾಲ್ಕು ದಶಕಗಳಿಂದ ರಾಜಕೀಯದಲ್ಲಿರುವ ನನ್ನ ಬದುಕು ತೆರೆದ ಪುಸ್ತಕ. ಈ ಪುಸ್ತಕದ ಪುಟಪುಟಗಳು ರಾಜ್ಯದ ಜನರಿಗೆ ತಿಳಿದಿದೆ. ಜನರ ವಿಶ್ವಾಸ ನನ್ನ ಮೇಲಿರುವವರೆಗೆ ವಿರೋಧಿಗಳ ಯಾವ ಷಡ್ಯಂತ್ರ, ಹೋರಾಟ, ಪಾದಯಾತ್ರೆಗಳು ನನ್ನನ್ನು ಒಂದಿಂಚು ಅಲುಗಾಡಿಸಲೂ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ, ಅಧಿಕಾರ ದುರುಪಯೋಗ ಮತ್ತು ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನಾಯಕರ ದುರುದ್ದೇಶದ ಪಾದಯಾತ್ರೆಯ ವಿರುದ್ಧವಾಗಿ ಇಂದು ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಜನಾಂದೋಲನ ಸಭೆ ಅತ್ಯಂತ ಯಶಸ್ವಿಯಾಗಿದೆ. ಸತ್ಯ, ನ್ಯಾಯ, ಪ್ರಾಮಾಣಿಕತೆಗೆ ಸಹೃದಯಿ ಕನ್ನಡಿಗರು ಸದಾ ಜೊತೆ ನಿಲ್ಲುತ್ತಾರೆ ಎಂಬುದಕ್ಕೆ ಇಂದು ಸೇರಿದ್ದ ಲಕ್ಷಾಂತರ ಜನರು ಸಾಕ್ಷಿಯಾದರು.

ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿ, ಬಿಜೆಪಿ – ಜೆಡಿಎಸ್ ವಿರುದ್ಧದ ನಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಂತ ತಮ್ಮೆಲ್ಲರಿಗೂ ನಾನು ಸದಾ ಋಣಿ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಮ್ಮ ಹಿರಿಯ-ಕಿರಿಯ ನಾಯಕರು ಪ್ರಮುಖವಾಗಿ ಪಕ್ಷದ ಸಾವಿರಾರು ಕಾರ್ಯಕರ್ತರು ಶ್ರಮಿಸಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Congress Meeting: ಮೈಸೂರಲ್ಲಿ ಸಿಎಂ ಶಕ್ತಿ ಪ್ರದರ್ಶನ; ಈ ಬಂಡೆ ಸಿದ್ದರಾಮಯ್ಯ ಜತೆ ಇದೆ ಎಂದ ಡಿಕೆಶಿ

ವಿಪಕ್ಷಗಳು ಏನನ್ನೂ ಮಾಡಲು ಹೇಸದವರು, ತಮ್ಮ ದುರುದ್ದೇಶವನ್ನು ಈಡೇರಿಸಲು ಯಾವ ಮಟ್ಟಕ್ಕೂ ಹೋಗಬಲ್ಲರು. ಇಂತಹ ಬೆದರಿಕೆ, ಬ್ಲ್ಯಾಕ್ ಮೇಲ್ ತಂತ್ರಕ್ಕೆ ಬಗ್ಗುವ, ಕುಗ್ಗುವ, ಅಂಜುವ ವ್ಯಕ್ತಿ ನಾನಲ್ಲ. ಪ್ರಾಣಕ್ಕಿಂತ ಮಾನ ಮುಖ್ಯ ಎಂದು ತಿಳಿದುಕೊಂಡವನು ನಾನು. ನಾಲ್ಕು ದಶಕಗಳಿಂದ ರಾಜಕೀಯದಲ್ಲಿರುವ ನನ್ನ ಬದುಕು ತೆರೆದ ಪುಸ್ತಕ. ಈ ಪುಸ್ತಕದ ಪುಟಪುಟಗಳು ರಾಜ್ಯದ ಜನರಿಗೆ ತಿಳಿದಿದೆ.

ನಿಮ್ಮೆಲ್ಲರ ಪ್ರೀತಿ – ವಿಶ್ವಾಸ ನನ್ನ ಮೇಲಿರುವವರೆಗೆ ವಿರೋಧಿಗಳ ಯಾವ ಷಡ್ಯಂತ್ರ, ಹೋರಾಟ, ಪಾದಯಾತ್ರೆಗಳು ನನ್ನನ್ನು ಒಂದಿಂಚು ಅಲುಗಾಡಿಸಲು ಸಾಧ್ಯವಿಲ್ಲ. ನಿಜವಾಗಿ ಇವರು ದ್ವೇಷಿಸುವುದು ನನ್ನನ್ನಲ್ಲ,
ನಾನು ಅನುಷ್ಠಾನಕ್ಕೆ ತಂದ ಜನಪರವಾದ ಯೋಜನೆಗಳನ್ನು. ಇವರು ದ್ವೇಷಿಸುವುದು ನಾನು ನಂಬಿರುವ ಸಾಮಾಜಿಕ ನ್ಯಾಯದ ಸಿದ್ದಾಂತವನ್ನು, ನನ್ನ ಜಾತ್ಯತೀತ ನಿಲುವನ್ನು. ನನ್ನ ಪ್ರಾಮಾಣಿಕತೆ ಮತ್ತು ಪಾರದರ್ಶಕ ನಡವಳಿಕೆಯನ್ನು ಎಂದು ಹೇಳಿದ್ದಾರೆ.

ಇವರು ನನ್ನ ಮೇಲೆ ನೂರು ಕೇಸ್ ಹಾಕಿದರೂ, ಸಾವಿರಾರು ಆರೋಪ ಮಾಡಿದರೂ ಸೈದ್ಧಾಂತಿಕವಾಗಿ ನನ್ನನ್ನು ಬಗ್ಗಿಸಲು, ಬದಲಾಯಿಸಲು ಇವರಿಗೆ ಸಾಧ್ಯವಿಲ್ಲ. ನನ್ನ ಕೊನೆಯ ಉಸಿರು ಇರುವ ವರೆಗೆ ನಾನು ನಂಬಿರುವ ಸಾಮಾಜಿಕ ನ್ಯಾಯದ ಸಿದ್ಧಾಂತ, ಜಾತ್ಯತೀತ ಧೋರಣೆ ಮತ್ತು ಪ್ರಾಮಾಣಿಕ ಹಾಗೂ ಪಾರದರ್ಶಕ ನಡವಳಿಕೆಗೆ ಬದ್ಧನಾಗಿರುತ್ತೇನೆ.

ನಾಡಿನ ಪ್ರತಿ ಅವಕಾಶ ವಂಚಿತ, ಶೋಷಿತ, ಬಡ ವ್ಯಕ್ತಿಯೂ ನನ್ನ ಕುಟುಂಬವೇ ಆಗಿದ್ದಾರೆ. ನನ್ನ ಉಸಿರಿರುವವರೆಗೆ ಜನರಿಗಾಗಿ ನನ್ನ ಹೋರಾಟ ಮುಂದುವರಿಯಲಿದೆ. ನಿಮ್ಮೆಲ್ಲರ ಪ್ರೀತಿಯ ಶ್ರೀರಕ್ಷೆ ನನ್ನನ್ನು ಕಾಯಲಿದೆ ಎಂಬ ವಿಶ್ವಾಸ ನನಗಿದೆ. ಅಸತ್ಯ, ಅನ್ಯಾಯ, ಅಪಪ್ರಚಾರದ ವಿರುದ್ಧದ ಹೋರಾಟದಲ್ಲಿ ಅಂತಿಮ ಗೆಲುವು ನನ್ನದೇ. ಸತ್ಯಮೇವ ಜಯತೆ ಎಂದು ತಿಳಿಸಿದ್ದಾರೆ.

ನಾನು ಬಿಜೆಪಿ-ಜೆಡಿಎಸ್‌ ಷಡ್ಯಂತ್ರಕ್ಕೆ ಬಲಿಯಾಗುವವನಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು: ನಾನು ಈ ನೆಲದ ಶೋಷಿತರು, ಶ್ರಮಿಕರು, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಇದ್ದೀನಿ. ಇವರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎನ್ನುವ ಕಾರಣಕ್ಕೆ ನನ್ನನ್ನು ಕೆಳಗಿಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಈ ನಾಡಿನ‌ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ | Congress Meeting: ನನ್ನದು ಹೋರಾಟದ ಬದುಕು, ಬಿಜೆಪಿ-ಜೆಡಿಎಸ್‌ ಎಷ್ಟೇ ಪಾದಯಾತ್ರೆ ಮಾಡಿದ್ರೂ ಜಗ್ಗಲ್ಲ ಎಂದ ಸಿಎಂ

ಮೈಸೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಎಷ್ಟೇ ಕಪಟ ಉದ್ದೇಶದ ಪಾದಯಾತ್ರೆ ನಡೆಸಿದರೂ ನಾನು ಹೆದರುವುದಿಲ್ಲ. ರಾಜಭವನ ಮತ್ತು ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ನಡೆಸಿದರೂ ನಾನು ಹೆದರುವುದಿಲ್ಲ. ನಾನು ಇವರ ಷಡ್ಯಂತ್ರಕ್ಕೆ ಬಲಿಯಾಗಿ ಮನೆಯಲ್ಲಿ ಕೂರುವವನಲ್ಲ ಎಂದು ಇದೇ ಸಂದರ್ಭದಲ್ಲಿ ಸಿಎಂ ಎಚ್ಚರಿಸಿದರು.

Exit mobile version