ಹಾವೇರಿ: ಮಳೆಯಿಂದ ಜಿಲ್ಲಾಸ್ಪತ್ರೆ ಕಟ್ಟಡ ಸೋರುತ್ತಿದ್ದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಗಿತ್ತು. ಅವ್ಯವಸ್ಥೆ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ಜಿಲ್ಲಾಸ್ಪತ್ರೆಗೆ (Vistara Impact) ಭೇಟಿ ನೀಡಿ ಪರಿಶೀಲನೆ ನಡೆಸಿ, ರೋಗಿಗಳ ಸಮಸ್ಯೆಗಳನ್ನು ಆಲಿಸಿದರು.
ನಗರಕ್ಕೆ ಮಂಗಳವಾರ ಪ್ರಗತಿ ಪರಿಶೀಲನೆ ಸಭೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಗೂ ಮುನ್ನವೇ ನೇರವಾಗಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದರು. ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್, ತಾಯಂದಿರ ವಾರ್ಡ್ ಸೇರಿ ಬಹುತೇಕ ವಾರ್ಡ್‌ಗಳು ಮಳೆಯಿಂದ ಸೋರುತ್ತಿದ್ದು, ರೋಗಿಗಳಿಗೆ ತೀವ್ರ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಎಇಇ ಮಂಜುನಾಥ್ ಅವರನ್ನು ಅಮಾನತುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದರು.
ಮಕ್ಕಳ ವಾರ್ಡ್, ತುರ್ತು ಚಿಕಿತ್ಸಾ ವಾರ್ಡ್, ತಾಯಂದಿರ ವಾರ್ಡ್ ಸೇರಿ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಮಳೆಯಿಂದ ಸೋರುತ್ತಿರುವ ಗೋಡೆ, ಚಾವಣಿ ಕಂಡು ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸ್ಥಳದಿಂದಲೇ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಅವರಿಗೆ ಕರೆ ಮಾಡಿ, ಮುಖ್ಯ ಎಂಜಿನಿಯರ್ ಅನ್ನು ತಕ್ಷಣ ಅಮಾನತುಗೊಳಿಸುವಂತೆ ಸೂಚಿಸಿದರು.
ಇದನ್ನೂ ಓದಿ | HD Devegowda : ಬಿಜೆಪಿಗೆ ಯತ್ನಾಳ್ ವಿಪಕ್ಷ ನಾಯಕ, ಸಿ.ಟಿ. ರವಿ ರಾಜ್ಯಾಧ್ಯಕ್ಷ; ಘೋಷಣೆ ಮಾಡಿದವರು ಎಚ್.ಡಿ ದೇವೇಗೌಡ!
ರೋಗಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡದೆ, ಅವರ ವಾರ್ಡಿನ ಮೇಲ್ಭಾಗ ಹೇಗೆ ಕಟ್ಟಡ ಕಾಮಗಾರಿ ನಡೆಸಿತ್ತಿದ್ದೀರಿ? ನಿಮಗೆ ತಲೆಯಲ್ಲಿ ಬುದ್ಧಿ ಇಲ್ವಾ? ಎಂದು ಸ್ಥಳದಲ್ಲೇ ಇದ್ದ ಜಿಲ್ಲಾ ಶಸ್ತ್ರಚಿಕಿತ್ಸಕ, ಎಂಜಿನಿಯರ್ ಅನ್ನು ತರಾಟೆಗೆ ತೆಗೆದುಕೊಂಡರು.
ನಿಮಗೆ ಮನುಷ್ಯತ್ವ ಇಲ್ವಾ, ಕತ್ತೆ ಕಾಯ್ತಿದ್ದೀರಾ, ಸಂಬಳ ಕೊಟ್ಟಿಲ್ವಾ ಎಂದು ಆಸ್ಪತ್ರೆ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದರು. ಇನ್ನು ನಾಲ್ಕು ದಿನಗಳಲ್ಲಿ ಮಳೆ ಸೋರಿಕೆ ತಡೆಗಟ್ಟಬೇಕು ಎಂದು ಸಿಎಂ ಖಡಕ್ ಸೂಚನೆ ನೀಡಿದರು.
ಶಾಸಕ ರುದ್ರಪ್ಪ ಲಮಾಣಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರನ್ನು, ನೀವು ಈ ಸಮಸ್ಯೆ ಬಗ್ಗೆ ಏಕೆ ಗಮನಹರಿಸಿಲ್ಲ ಎಂದು ಪ್ರಶ್ನಿಸಿದರು. ಗುತ್ತಿಗೆದಾರ ಕಾಮಗಾರಿ ವಿಳಂಬ ಮಾಡಿರುವ ಬಗ್ಗೆ ಶಾಸಕ ರುದ್ರಪ್ಪ ಲಮಾಣಿ ಅವರು ಸಿಎಂ ಗಮನಕ್ಕೆ ತಂದರು. “ಕಳಪೆ ಕಾಮಗಾರಿ ಮತ್ತು ವಿಳಂಬ ಧೋರಣೆ ಮಾಡಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಏಕೆ ಸೇರಿಸಿಲ್ಲ” ಎಂದು ಸಿಎಂ ಪ್ರಶ್ನಿಸಿದರು.
ಇದನ್ನೂ ಓದಿ | CM Siddaramaiah : ಸಿಎಂಗೆ ಡಬಲ್ ಟ್ರಬಲ್ ! ಸಚಿವರ ಮೇಲೆ ಕಾಂಗ್ರೆಸ್ ಶಾಸಕರಿಂದಲೇ ದೂರು
ಸಬೂಬು ಹೇಳಲು ಬಂದ ಎಂಜಿನಿಯರ್ ಅವರನ್ನು ಗದರಿಸಿದ ಸಿಎಂ, ರೋಗಿಗಳ ಬೆಡ್ ಮೇಲೆ ಮಳೆ ನೀರು ಸೋರಿರುವುದು ಕಣ್ಣಿಗೆ ಕಾಣುತ್ತಿಲ್ಲವೇ? ದುರಸ್ತಿ ಕಾರ್ಯ ಕೈಗೊಳ್ಳಲು ಅನುದಾನದ ಕೊರತೆ ಇದೆಯೇ? ಎಂದು ಖಾರವಾಗಿ ಪ್ರಶ್ನಿಸಿದರು.