ಬೆಂಗಳೂರು: ರಾಜ್ಯ ಸರ್ಕಾರದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವ ಹೊರಗುತ್ತಿಗೆಯಲ್ಲೂ ಮೀಸಲಾತಿ (Reservation in Outsourcing) ತರುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಕೇಂದ್ರ ದೇವರಾಜ ಅರಸು ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶದ (Karnataka Janamana Samavesha) ಸಂವಾದದಲ್ಲಿ ಮಾತನಾಡಿದರು.
ಸಂವಾದದಲ್ಲಿ, ಸರ್ಕಾರಿ ಉದ್ಯೋಗ ಭರ್ತಿಯಾಗುತ್ತಿಲ್ಲ, ಹೊರಗುತ್ತಿಗೆ ನೌಕರರು ಹೆಚ್ಚಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ʻʻರಾಜ್ಯದಲ್ಲಿ 7 ಲಕ್ಷ ಸರ್ಕಾರಿ ಉದ್ಯೋಗಗಳಿವೆ. 5 ಲಕ್ಷ ಉದ್ಯೋಗಗಳು ಭರ್ತಿಯಾಗಿವೆ. 2.5 ಲಕ್ಷ ಉದ್ಯೋಗ ಖಾಲಿ ಇದೆ. 75 ಸಾವಿರ ಉದ್ಯೋಗಗಳು ಹೊರಗುತ್ತಿಗೆಯಲ್ಲಿದ್ದಾರೆ. ಹೊರಗುತ್ತಿಗೆಗೆ ಕಡಿವಾಣ ಹಾಕಬೇಕು ಎಂದರೆ ಸರ್ಕಾರಿ ಉದ್ಯೋಗ ಕಾಯಂ ಮಾಡಬೇಕಾಗುತ್ತದೆ. ಖಾಲಿ ಹುದ್ದೆ ಭರ್ತಿ ಮಾಡಬೇಕಾಗುತ್ತದೆ. ಈ ಹುದ್ದೆಗಳನ್ನು ಹೊರಗುತ್ತಿಗೆಗೆ ನೀಡಿದರೆ ಅಲ್ಲಿ ಮೀಸಲಾತಿ ಇರುವುದಿಲ್ಲ. ಹಾಗೆ ಮಾಡುವುದರಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲʼʼ ಎಂದು ಹೇಲೀದರು.
ʻʻನಾವು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ಸರ್ಕಾರಿ ಉದ್ಯೋಗ ಭರ್ತಿ ಮಾಡುತ್ತೇವೆ. ಶಿಕ್ಷಕರು, ಪೋಲಿಸ್ ಹುದ್ದೆಗಳು ಖಾಲಿ ಇದೆ. ಅದನ್ನು ಭರ್ತಿ ಮಾಡುವ ಕೆಲಸ ಮಾಡುತ್ತೇವೆ. ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡಿದಾಗ ಹೊರಗುತ್ತಿಗೆ ಕಡಿಮೆಯಾಗುತ್ತದೆ. ಹೊರಗುತ್ತಿಗೆಯಲ್ಲೂ ಮೀಸಲಾತಿ ನೀಡುವ ಚಿಂತನೆಯಿದೆʼʼ ಎಂದು ಹೇಳಿದರು ಸಿದ್ದರಾಮಯ್ಯ.
ಪಠ್ಯ ಪರಿಷ್ಕರಣೆಗೆ ಹೊಸ ಸಮಿತಿ ರಚನೆ
ಹಿಂದಿನ ಸರ್ಕಾರದ ಅವಧಿಯಲ್ಲಿ ಮಕ್ಕಳಿಗೆ ಬೋಧಿಸುವ ಪಠ್ಯವನ್ನೇ ತಿರುಚಿದ್ದರು. ಹೀಗಾಗಿ ಪಠ್ಯವನ್ನು ತಾತ್ಕಾಲಿಕವಾಗಿ ತಡೆಹಿಡಿದು ಅದನ್ನು ತೆಗೆದು ಹಾಕಿ ಎಂದು ಸೂಚಿಸಿದ್ದೆ. ಈಗ ಪಠ್ಯ ಪರಿಷ್ಕರಣೆಗೆ ಹೊಸದೊಂದು ಕಮಿಟಿ ಮಾಡಿದ್ದೇನೆ ಎಂದು ಹೇಳಿದ ಸಿದ್ದರಾಮಯ್ಯ, ದುರ್ದೈವವೆಂದರೆ ವಿದ್ಯಾವಂತರೆ ಹೆಚ್ಚು ಮೌಢ್ಯಕ್ಕೆ ಒಳಗಾಗುತ್ತಿದ್ದಾರೆ. ಶಿಕ್ಷಣ ಪಡೆದವರೇ ಕೋಮುವಾದಿಗಳಾಗುತ್ತಿದ್ದಾರೆ. ರಾಷ್ಟ್ರದಲ್ಲಿ ವಿದ್ಯಾವಂತರು ಜಾತ್ಯತೀತರಾಗಿರಬೇಕು. ಬೋಧಕರು ವೈಚಾರಿಕತೆ ಹೊಂದದೆ ಇದ್ದರೆ ಮಕ್ಕಳಿಗೆ ವೈಚಾರಿಕತೆ ತುಂಬಲು ಸಾಧ್ಯವಿಲ್ಲ ಎಂದರು.
ನಾವು ಸಮಾಜದಲ್ಲಿ ಶಾಂತಿ ಕಾಪಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಅವರು, ನೈತಿಕ ಪೊಲೀಸ್ ಗಿರಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶ ಮಾಡಿದ್ದೇನೆ ಎಂದರು.
ಇದನ್ನೂ ಓದಿ: CM Siddaramaiah : ಮಕ್ಕಳ ತಲೆಯಲ್ಲಿ ತುಂಬಬೇಕಿರುವುದು ಧರ್ಮ ಅಲ್ಲ, ವೈಚಾರಿಕತೆ ಎಂದ ಸಿದ್ದರಾಮಯ್ಯ
ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗುತ್ತದೆ ಎನ್ನುವುದು ಸುಳ್ಳು
ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದರು. ನಾನು ಬಜೆಟ್‌ನಲ್ಲಿ 5 ಗ್ಯಾರಂಟಿ ಜಾರಿಗೆ ತಂದೆ, ಈಗ ಅದು ಆರ್ಥಿಕ ದಿವಾಳಿ ಆಯ್ತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ʻʻಐದು ಗ್ಯಾರಂಟಿ ಯೋಜನೆಗಳ ಜಾರಿಗೆ 52 ಸಾವಿರ ಕೋಟಿ ರೂ. ಬೇಕು. ಬಡವರ ಮೇಲೆ ಟ್ಯಾಕ್ಸ್ ಹಾಕದೆ ಸಂಪನ್ಮೂಲ ಕ್ರೋಡೀಕರಣಕ್ಕೆ ಸೂಚನೆ ನೀಡಿದ್ದೇನೆ. ಮದ್ಯಪಾನ ಮಾಡುವವರ ಮೇಲೆ ಟ್ಯಾಕ್ಸ್ ಹೆಚ್ಚಳ ಮಾಡಿದ್ದೇನೆ. ಇದರಿಂದ ಬಡವರು ಮತ್ತು ಮಹಿಳೆಯರಿಗೆ ನಷ್ಟ ಆಗಲ್ಲ. ತೈಲ ಬೆಲೆ ಮೇಲೆ ಟ್ಯಾಕ್ಸ್ ಹಾಕಿಲ್ಲ. 13,500 ಕೋಟಿ ಅಡಿಷನಲ್ ಟ್ಯಾಕ್ಸ್ ಸಂಗ್ರಹ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಬಿಡಲ್ಲ ಆರ್ಥಿಕ ದಿವಾಳಿಯಾಗಲು ಬಿಡಲ್ಲ ಎಂದು ಸಿದ್ದರಾಮಯ್ಯ ಘೋಷಿಸಿದರು.