ಮೈಸೂರು: ರಾಜಕೀಯ ಲಾಭಕ್ಕಾಗಿ ಬಿಜೆಪಿ- ಜೆಡಿಎಸ್ ನವರು ಮಾಡುತ್ತಿರುವ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ ಹಾಗೂ ಈ ಆರೋಪಗಳ ವಿರುದ್ಧ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡಲು ಸಿದ್ದವಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಆರೋಪಗಳ ಬಗ್ಗೆ ಸರ್ಕಾರದ ಮುಂದಿನ ನಡೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿಯ ಪಾದಯಾತ್ರೆಗೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಬೃಹತ್ ಜನಾಂದೋಲನವನ್ನು ಮಾಡಿದೆ. ಬಿಜೆಪಿ ಹಾಗೂ ಜೆಡಿಎಸ್ ನವರು ಸುಳ್ಳು ಆರೋಪಗಳನ್ನು ಆಧರಿಸಿ ಮಾಡುತ್ತಿರುವ ಪಾದಯಾತ್ರೆ ಮಾಡುತ್ತಿದ್ದು, ನನಗೆ ಕಪ್ಪು ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಅವರ ಆರೋಪಗಳು ಸುಳ್ಳು ಎಂದು ಜನರಿಗೆ ಮನವರಿಕೆ ಮಾಡಲು ಜನಾಂದೋಲನ ಮಾಡಲಾಗಿದೆ ಎಂದರು.
ರಾಜಕೀಯವಾಗಿ ಮಣಿಸಲು ಬಿಜೆಪಿ ಜೆಡಿಎಸ್ ತಂತ್ರ
ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ಹೂಡಿದ್ದಾರೆ. ಸುಳ್ಳು ಆರೋಪಗಳಿಂದ ನನ್ನ ಮೇಲೆ ಕಪ್ಪು ಬಳಿದರೆ, ರಾಜಕೀಯವಾಗಿ ನನ್ನನ್ನು ಮಣಿಸಿ ಲಾಭ ಪಡೆಯಬಹುದು ಎಂಬ ಭ್ರಮೆಯಲ್ಲಿದ್ದಾರೆ. ಬಿಜೆಪಿ ಜೆಡಿಎಸ್‌ನವರ ಹಗರಣಗಳು ಬೇಕಾದಷ್ಟಿದ್ದು, ಅವುಗಳನ್ನು ಬಯಲಿಗೆಳೆಯುತ್ತೇವೆ. ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಹಲವರ ಮೇಲೆ ಇರುವ ಹಗರಣಗಳ ವಿರುದ್ಧ ತನಿಖೆ ಕೈಗೊಳ್ಳಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ | Hindenburg: ಶೀಘ್ರದಲ್ಲೇ ಭಾರತದಲ್ಲಿ ಬಹುದೊಡ್ಡ ಸಂಚಲನ ಸೃಷ್ಟಿಯಾಗಲಿದೆ; ಹೊಸದೊಂದು ಬಾಂಬ್ ಸಿಡಿಸಿದ ಹಿಂಡನ್‌ಬರ್ಗ್
ಸುಳ್ಳು ಆರೋಪಗಳ ವಿರುದ್ಧ ಹೋರಾಟ
ಮುಖ್ಯಮಂತ್ರಿಗಳು ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಸುವುದಾಗಿ ಬಿಜೆಪಿ ಜೆಡಿಎಸ್ ನಾಯಕರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸುಳ್ಳು ಆರೋಪಗಳನ್ನಾಧರಿಸಿದ ಹೋರಾಟಗಳಿಗೆ ನಾನು ಹೆದರುವುದಿಲ್ಲ. ಬಿಜೆಪಿ-ಜೆಡಿಎಸ್ ಹೋರಾಟದ ಸತ್ಯಾಸತ್ಯತೆಗಳು ಜನರಿಗೆ ತಿಳಿದಾಗ , ಅವರೇ ಈ ಹೋರಾಟನ್ನು ಹತ್ತಿಕ್ಕುತ್ತಾರೆ. ಸರ್ಕಾರ ಹಾಗೂ ನನ್ನ ಮೇಲೆ ಬಂದಿರುವ ಆರೋಪಗಳನ್ನು ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ತಿಳಿಸಿದರು.
4 ದಶಕದಿಂದ ರಾಜಕೀಯದಲ್ಲಿರುವ ನನ್ನ ಬದುಕು ತೆರೆದ ಪುಸ್ತಕ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ನಾಲ್ಕು ದಶಕಗಳಿಂದ ರಾಜಕೀಯದಲ್ಲಿರುವ ನನ್ನ ಬದುಕು ತೆರೆದ ಪುಸ್ತಕ. ಈ ಪುಸ್ತಕದ ಪುಟಪುಟಗಳು ರಾಜ್ಯದ ಜನರಿಗೆ ತಿಳಿದಿದೆ. ಜನರ ವಿಶ್ವಾಸ ನನ್ನ ಮೇಲಿರುವವರೆಗೆ ವಿರೋಧಿಗಳ ಯಾವ ಷಡ್ಯಂತ್ರ, ಹೋರಾಟ, ಪಾದಯಾತ್ರೆಗಳು ನನ್ನನ್ನು ಒಂದಿಂಚು ಅಲುಗಾಡಿಸಲೂ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ, ಅಧಿಕಾರ ದುರುಪಯೋಗ ಮತ್ತು ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನಾಯಕರ ದುರುದ್ದೇಶದ ಪಾದಯಾತ್ರೆಯ ವಿರುದ್ಧವಾಗಿ ಇಂದು ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಜನಾಂದೋಲನ ಸಭೆ ಅತ್ಯಂತ ಯಶಸ್ವಿಯಾಗಿದೆ. ಸತ್ಯ, ನ್ಯಾಯ, ಪ್ರಾಮಾಣಿಕತೆಗೆ ಸಹೃದಯಿ ಕನ್ನಡಿಗರು ಸದಾ ಜೊತೆ ನಿಲ್ಲುತ್ತಾರೆ ಎಂಬುದಕ್ಕೆ ಇಂದು ಸೇರಿದ್ದ ಲಕ್ಷಾಂತರ ಜನರು ಸಾಕ್ಷಿಯಾದರು.
ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿ, ಬಿಜೆಪಿ – ಜೆಡಿಎಸ್ ವಿರುದ್ಧದ ನಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಂತ ತಮ್ಮೆಲ್ಲರಿಗೂ ನಾನು ಸದಾ ಋಣಿ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಮ್ಮ ಹಿರಿಯ-ಕಿರಿಯ ನಾಯಕರು ಪ್ರಮುಖವಾಗಿ ಪಕ್ಷದ ಸಾವಿರಾರು ಕಾರ್ಯಕರ್ತರು ಶ್ರಮಿಸಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನೂ ಓದಿ | Bangladesh Unrest: ಶೇಖ್ ಹಸೀನಾ ಓಡಿ ಬಂದ ಬಳಿಕ ಬಾಂಗ್ಲಾದೇಶದಲ್ಲಿ 232 ಜನರ ಕಗ್ಗೊಲೆ, ಹಿಂದೂಗಳೇ ಟಾರ್ಗೆಟ್
ವಿಪಕ್ಷಗಳು ಏನನ್ನೂ ಮಾಡಲು ಹೇಸದವರು, ತಮ್ಮ ದುರುದ್ದೇಶವನ್ನು ಈಡೇರಿಸಲು ಯಾವ ಮಟ್ಟಕ್ಕೂ ಹೋಗಬಲ್ಲರು. ಇಂತಹ ಬೆದರಿಕೆ, ಬ್ಲ್ಯಾಕ್ ಮೇಲ್ ತಂತ್ರಕ್ಕೆ ಬಗ್ಗುವ, ಕುಗ್ಗುವ, ಅಂಜುವ ವ್ಯಕ್ತಿ ನಾನಲ್ಲ. ಪ್ರಾಣಕ್ಕಿಂತ ಮಾನ ಮುಖ್ಯ ಎಂದು ತಿಳಿದುಕೊಂಡವನು ನಾನು. ನಾಲ್ಕು ದಶಕಗಳಿಂದ ರಾಜಕೀಯದಲ್ಲಿರುವ ನನ್ನ ಬದುಕು ತೆರೆದ ಪುಸ್ತಕ. ಈ ಪುಸ್ತಕದ ಪುಟಪುಟಗಳು ರಾಜ್ಯದ ಜನರಿಗೆ ತಿಳಿದಿದೆ ಎಂದು ಹೇಳಿದ್ದಾರೆ.