Site icon Vistara News

Video Viral : ಈಶ್ವರಪ್ಪಗೆ ಸನ್ಮಾನಿಸಲು ಒಲ್ಲೆ ಎಂದ ಸಿಎಂ ಸಿದ್ದರಾಮಯ್ಯ; ಕುಳಿತಲ್ಲಿಂದ ಏಳಲೇ ಇಲ್ಲ!

KS Eshwarappa and CM Siddaramaiah

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಕೆ.ಎಸ್.‌ ಈಶ್ವರಪ್ಪ ಅವರು ಕುರುಬ ಸಮಾಜದ ಪ್ರಬಲ ನಾಯಕರು. ಆದರೆ, ರಾಜಕೀಯವಾಗಿ ಇವರಿಬ್ಬರೂ ಬದ್ಧ ವೈರಿಗಳು. ಪರಸ್ಪರ ಆರೋಪ – ಪ್ರತ್ಯಾರೋಪಗಳನ್ನು ಮಾಡಿಕೊಳ್ಳತ್ತಲೇ ಬರುತ್ತಿದ್ದಾರೆ. ಈ ಮುನಿಸು ಈಗ ಕುರುಬ ಸಮಾಜದ ಕಾರ್ಯಕ್ರಮದಲ್ಲಿ ಎದ್ದು ಕಂಡಿದೆ. ಕಾರ್ಯಕ್ರಮದ ದೀಪ ಬೆಳಗಬೇಕಾದರೂ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ದೂರ ದೂರವೇ ಇದ್ದರು. ಕೊನೆಗೆ ಈಶ್ವರಪ್ಪ ಅವರು ಭಾಷಣ ಮಾಡಿ ಬಂದಾಗ ಅವರನ್ನು ಸನ್ಮಾನ ಮಾಡಲು ಮುಂದಾದಾಗ, ಸಿದ್ದರಾಮಯ್ಯ ಅವರು ತಾವು ಸನ್ಮಾನಿಸಲು ಒಲ್ಲೆ ಎಂದು ತಲೆ ಅಲ್ಲಾಡಿಸಿದ್ದಾರೆ. ಈ ವಿಡಿಯೊ ಈಗ ವೈರಲ್‌ (Video Viral) ಆಗಿದೆ.

ಬೆಂಗಳೂರಿನ ಕೇತೋಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠದ ಭೂಮಿ ಪೂಜೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಈ ಪ್ರಸಂಗ ನಡೆದಿದೆ.

ಇದನ್ನೂ ಓದಿ: Online Fraud : ನಿಮ್ಮ ಮೊಬೈಲ್‌ಗೆ ಕಾಲ್‌ ಬಂದಾಗ ಈ ನಂಬರ್‌ ಒತ್ತಲೇಬೇಡಿ

ಆಗಿದ್ದೇನು?

ಕಾರ್ಯಕ್ರಮದಲ್ಲಿ ಈಶ್ವರಪ್ಪ ಅವರು ಭಾಷಣ ಮಾಡುತ್ತಾ, ಸಿದ್ದರಾಮಯ್ಯ ಹಾಗೂ ಅವರ ಸರ್ಕಾರದ ನೀತಿಗಳನ್ನು ಟೀಕಿಸಿದ್ದರು. ಬಳಿಕ ಅವರು ವೇದಿಕೆಯಲ್ಲಿನ ತಮ್ಮ ಆಸನದತ್ತ ಹೊರಟರು. ಆ ವೇಳೆಗೆ ನಿರೂಪಕರು, ಮಠದಿಂದ ಸನ್ಮಾನ ಸ್ವೀಕಾರ ಮಾಡುವಂತೆ ಅನೌನ್ಸ್‌ ಮಾಡಿದರು. ಹೀಗಾಗಿ ತಮ್ಮ ಆಸನದತ್ತ ಹೋಗಿದ್ದ ಈಶ್ವರಪ್ಪ ಅವರು ವಾಪಸ್‌ ಬಂದಿದ್ದು, ಸಿಎಂ ಸಿದ್ದರಾಮಯ್ಯ ಕುಳಿತಿದ್ದ ಆಸನದ ಎದುರು ನಿಂತರು. ಆಗ ಅಲ್ಲಿಗೆ ಬಂದ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿಯವರು, ಈಶ್ವರಪ್ಪ ಅವರಿಗೆ ಸನ್ಮಾನ ಮಾಡುವಂತೆ ಸಿದ್ದರಾಮಯ್ಯ ಅವರ ಬಳಿ ಹೇಳಿದರು. ಅದಕ್ಕೆ ಸಿದ್ದರಾಮಯ್ಯ ಅವರು ಕುಳಿತಲ್ಲಿಂದಲೇ ತಲೆಯನ್ನು ಅಲ್ಲಾಡಿಸಿ, ನೀವೇ ಸನ್ಮಾನಿಸಿ ಎಂಬಂತೆ ಕಣ್ಣಲ್ಲೇ ಸನ್ನೆ ಮಾಡಿದರು.

ಈಶ್ವರಪ್ಪ ಅವರನ್ನು ಸನ್ಮಾನಿಸಿದ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ

ಕೊನೆಗೆ ಈಶ್ವರಪ್ಪ ಅವರಿಗೆ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರೇ ಸನ್ಮಾನ ಮಾಡಿದರು. ಇದು ಈಶ್ವರಪ್ಪ ಅವರಿಗೆ ಸ್ವಲ್ಪ ಇರಿಸುಮುರಿಸನ್ನೂ ತಂದಿತು.

ಸನ್ಮಾನಿಸಲು ಒಲ್ಲೆ ಎಂದ ಸಿದ್ದರಾಮಯ್ಯ; ಇಲ್ಲಿದೆ ವಿಡಿಯೊ

ಎಸ್.ಟಿ. ಸೋಮಶೇಖರ್‌ ಬೆನ್ನುತಟ್ಟಿ ಸನ್ಮಾನಿಸಿದ ಸಿದ್ದರಾಮಯ್ಯ

ಇದೇ ವೇದಿಕೆಯಲ್ಲಿ ಮತ್ತೊಂದು ವಿಶೇಷ ಸನ್ನಿವೇಶವೂ ನಡೆಯಿತು. ಕಳೆದ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಆಡಳಿತ ನಡೆಸಲು ಸಾಥ್‌ ನೀಡಿದ್ದ 17 ವಲಸಿಗರ ಮೇಲೆ ಈಶ್ವರಪ್ಪ ಇತ್ತೀಚೆಗೆ ದಾಳಿ ನಡೆಸಿದ್ದರು. ಕೊನೆಗೆ ತಾವು ವಲಸಿಗರ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟೀಕರಣವನ್ನೂ ನೀಡಿದ್ದರು. ಈ ವಲಸಿಗರ ಸಾಲಿಗೆ ಸೇರುವ ಮಾಜಿ ಸಚಿವ ಎಸ್.ಟಿ. ಸೋಮಶೇಖರ್‌ ಸಹ ಇದೇ ವೇದಿಕೆ ಮೇಲೆ ಇದ್ದರು. ಸೋಮಶೇಖರ್‌ ಭಾಷಣ ಮಾಡುವಾಗ, ತಾವು ಈ ಹಿಂದೆಯೂ ಸಿದ್ದರಾಮಯ್ಯ ಅವರ ಶಿಷ್ಯನಾಗಿದ್ದೆ. ಈಗಲೂ ಅವರ ಶಿಷ್ಯನೇ ಆಗಿದ್ದೇನೆ. ಮುಂದೆಯೂ ಅವರ ಶಿಷ್ಯನಾಗಿಯೇ ಇರುತ್ತೇನೆ. ಅವರು ತಮ್ಮ ಕ್ಷೇತ್ರಕ್ಕೆ ಅನುದಾನ ನೀಡಲು ಯಾವುದೇ ತಾರತಮ್ಯ ಮಾಡಲಿಲ್ಲ ಎಂಬಿತ್ಯಾದಿಯಾಗಿ ಹಾಡಿಹೊಗಳಿದ್ದರು. ಈ ವೇಳೆ ಸಿದ್ದರಾಮಯ್ಯ ಅವರೂ ನಕ್ಕು ಅವರ ಮಾತಿನಿಂದ ಖುಷಿಪಟ್ಟಿದ್ದರು.

ಇದನ್ನೂ ಓದಿ: Weather report : ಕರಾವಳಿ ಸೇರಿ ಈ 8 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಅಬ್ಬರ; ಇರಲಿ ಈ ಎಚ್ಚರ

ಅಲ್ಲದೆ, ವೇದಿಕೆಯಲ್ಲಿ ಕೆಲವು ಹೊತ್ತು ಅಕ್ಕಪಕ್ಕ ಕುಳಿತಿದ್ದ ಗುರು-ಶಿಷ್ಯರು ಬಹಳ ಚರ್ಚೆ ನಡೆಸಿದ್ದರು. ಈ ವೇಳೆ ಎಸ್.ಟಿ. ಸೋಮಶೇಖರ್‌ ಅವರ ಹೆಗಲ ಮೇಲೆ ಸಿದ್ದರಾಮಯ್ಯ ಅವರು ಕೈ ಇಟ್ಟುಕೊಂಡೇ ಮಾತನಾಡಿದ್ದರು. ಕೊನೆಗೆ ಎಸ್‌.ಟಿ. ಸೋಮಶೇಖರ್‌ ಅವರಿಗೆ ಸನ್ಮಾನ ಮಾಡುವಾಗಲೂ ಖುಷಿ ಖುಷಿಯಾಗಿದ್ದ ಸಿದ್ದರಾಮಯ್ಯ ಅವರು ತಮ್ಮ ಶಿಷ್ಯನ ಬೆನ್ನು ತಟ್ಟಿ ಸನ್ಮಾನಿಸಿದ್ದಾರೆ. ಆದರೆ, ಕೆ.ಎಸ್.‌ ಈಶ್ವರಪ್ಪ ಅವರನ್ನು ಸನ್ಮಾನಿಸಲು ಕರೆದಾಗ ಮಾತ್ರ “ಒಲ್ಲೆ” ಎಂದು ತಲೆ ಕುಣಿಸಿದ್ದಾರೆ.

Exit mobile version