ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಆಶಯದೊಂದಿಗೆ ನವೆಂಬರ್ 27 ರಂದು ಬೆಳಗ್ಗೆ 9.30 ಗಂಟೆಯಿಂದ ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ಕಾರ್ಯಕ್ರಮ (Jana Spandana) ನಡೆಸಲಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಸಚಿವಾಲಯವು ಸಕಲ ಸಿದ್ಧತೆಗಳನ್ನು ನಡೆಸಿದ್ದು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಅವರು ಭಾನುವಾರ ಸಂಜೆ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು.
ಅಹವಾಲುಗಳನ್ನು ಸ್ವೀಕರಿಸಲು ಒಟ್ಟು 20 ಕೌಂಟರುಗಳನ್ನು ಸ್ಥಾಪಿಸಲಾಗಿದ್ದು, ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ಎರಡು ಕೌಂಟರ್ ಗಳನ್ನು ಮೀಸಲಿರಿಸಲಾಗಿದೆ. ಸ್ವೀಕರಿಸಿದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ ತಂತ್ರಾಂಶದಲ್ಲಿ ದಾಖಲಿಸಿ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿದ ನಂತರ ಮುಖ್ಯಮಂತ್ರಿಯವರು ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸುವರು.
ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯವರು ಈಗಾಗಲೇ ಸುತ್ತೋಲೆ ಹೊರಡಿಸಿ ಸರ್ಕಾರದ ಎಲ್ಲ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಖುದ್ದು ಹಾಜರಿರುವಂತೆ ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ, ಉಪವಿಭಾಗ, ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಹಾಜರಿರುವಂತೆ ಸೂಚಿಸಿದ್ದಾರೆ.
ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರು ತಮ್ಮ ಗುರುತಿಗಾಗಿ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ತರುವಂತೆ ಕೋರಲಾಗಿದೆ. ಇದರಿಂದ ತಂತ್ರಾಂಶದಲ್ಲಿ ದಾಖಲಿಸುವ ಅರ್ಜಿಗಳ ಸ್ಥಿತಿಗತಿಯನ್ನು ಪತ್ತೆಹಚ್ಚಲು ಅನುಕೂಲವಾಗಲಿದೆ.
ಇದನ್ನೂ ಓದಿ | Foeticide Case: ಭ್ರೂಣ ಹತ್ಯೆ ಮಾಡಿದ್ರೆ ಕಠಿಣ ಶಿಕ್ಷೆ: ಸಿಎಂ ಎಚ್ಚರಿಕೆ
ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಕಳೆದ ಮೂರು ದಿನಗಳಿಂದ ಸಕಲ ಸಿದ್ಧತೆ ನಡೆಸಲಾಗುತ್ತಿದ್ದು, ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರಿಗೆ ಕುಡಿಯುವ ನೀರು, ಆಹಾರ ಹಾಗೂ ಶೌಚಾಲಯ ಮತ್ತು ಇತರ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗುತ್ತಿದೆ.
2024ರಲ್ಲಿ ಯುವನಿಧಿ ಜಾರಿ ಜತೆ ಕೌಶಾಲ್ಯಾಭಿವೃದ್ಧಿ ತರಬೇತಿ!
ತೆಲಂಗಾಣ: ಕಾಂಗ್ರೆಸ್ ಗ್ಯಾರಂಟಿ (Congress Guarantee Scheme) ಯೋಜನೆಗಳಲ್ಲಿ ಒಂದಾಗಿರುವ ಯುವನಿಧಿ ಯೋಜನೆಯಡಿ (Yuva Nidhi Scheme) ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವ ಜನರನ್ನು ಸಶಕ್ತಗೊಳಿಸುತ್ತೇವೆ. 2022-23ನೇ ಸಾಲಿನಲ್ಲಿ ಪದವಿ ಪಡೆದ ಯುವಜನರಿಗೆ 2 ವರ್ಷಗಳವರೆಗೆ ಮಾಸಿಕ 3000 ರೂ. ಹಾಗೂ 2 ವರ್ಷದವರೆಗೆ ಡಿಪ್ಲೊಮಾ ಮಾಡಿದ ಯುವ ಜನತೆಗೆ ಮಾಸಿಕ 1500 ರೂ.ಗಳನ್ನು ನೀಡಲಾಗುವುದು. ಇದಲ್ಲದೇ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ (Skill Development Training) ನೀಡಲಾಗುತ್ತದೆ. ಈ ಯೋಜನೆಯನ್ನು ಜನವರಿ 2024ರಿಂದ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.
ಭಾನುವಾರ ತೆಲಂಗಾಣ ರಾಜ್ಯಕ್ಕೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯುವ ನಿಧಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಒಂದೇ ವರ್ಷದೊಳಗೆ ಜಾರಿಗೊಳಿಸಿದಂತಾಗುತ್ತದೆ. ಈ ವರ್ಷ ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಸುಮಾರು 38 ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತಿದೆ ಎಂದು ತಿಳಿಸಿದರು.
ಗ್ಯಾರಂಟಿ ಬಗ್ಗೆ ಚುನಾವಣಾ ಪ್ರೇರಿತ ಹೇಳಿಕೆ
ತೆಲಂಗಾಣದ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿ ಮಾಡಲಾಗುತ್ತಿಲ್ಲ ಎಂಬ ಆರೋಪಗಳು ಚುನಾವಣಾ ಪ್ರೇರಿತ ಮತ್ತು ಸತ್ಯಕ್ಕೆ ದೂರವಾಗಿದೆ. ಕರ್ನಾಟಕ ರಾಜ್ಯದ ಜನತೆಯನ್ನು ಮೋಸ ಮಾಡಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾಂಗ್ರೆಸ್ ಪಕ್ಷ ನೀಡಿರುವ ಎಲ್ಲ ಪಂಚ ಗ್ಯಾರಂಟಿಗಳನ್ನು 5 ವರ್ಷಗಳವರೆಗೆ ಅನುಷ್ಠಾನಗೊಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೊದಲ ಸಂಪುಟದಲ್ಲಿಯೇ ಆದೇಶ
ಇದನ್ನೂ ಓದಿ | ಪತ್ರಿಕಾ ವಿತರಕರಿಗೆ ನೆರವು; ಸಿಎಂಗೆ ಕೆಯುಡಬ್ಲ್ಯೂಜೆ, ವಿತರಕರ ಒಕ್ಕೂಟ ಕೃತಜ್ಞತೆ
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿತು. ನಾವು ಅಧಿಕಾರ ಸ್ವೀಕರಿಸಿದ ಮೇ 20ರ ದಿನದಂದೇ ಕಾಂಗ್ರೆಸ್ ನೀಡಿದ್ದ ಐದೂ ಗ್ಯಾರಂಟಿಗಳ ಅನುಷ್ಠಾನಗೊಳಿಸಲು ಸಂಪುಟ ಸಭೆ ನಡೆಸಿ ತೀರ್ಮಾನಿಸಿ, ಸಂಬಂಧಪಟ್ಟ ಸರ್ಕಾರಿ ಆದೇಶಗಳನ್ನು ಅಂದೇ ನೀಡಲಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ