Site icon Vistara News

Hampi Utsav 2024: ಹಂಪಿ ಉತ್ಸವಕ್ಕೆ ಇಂದು ಸಂಜೆ ಸಿಎಂ ಚಾಲನೆ; ಹೇಗಿದೆ ಸಿದ್ಧತೆ?

Hampi Utsav

ಹೊಸಪೇಟೆ: ವಿಜಯನಗರ ಸಾಮಾಜ್ಯದ ಗತವೈಭವ ಸಾರುವ ʼಹಂಪಿ ಉತ್ಸವʼ (Hampi Utsav 2024) ಇಂದಿನಿಂದ (ಶುಕ್ರವಾರ) ಆರಂಭವಾಗಲಿದ್ದು, ಮೂರು ದಿನಗಳ ಉತ್ಸವಕ್ಕೆ ಸಂಜೆ 7.30ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತ ಚಾಲನೆ ನೀಡಲೀದ್ದಾರೆ. ಏಕಕಾಲದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಇದಕ್ಕಾಗಿ ವಿಜಯನಗರ ಜಿಲ್ಲಾಡಳಿತವು ಸಿದ್ಧತೆ ಮಾಡಿಕೊಂಡಿದೆ.

ಹಂಪಿ ಉತ್ಸವದ ಅಂಗವಾಗಿ ಫೆಬ್ರವರಿ 2, 3 ಮತ್ತು 4 ರಂದು ಗ್ರಾಮೀಣ ಕ್ರೀಡೆಗಳು, ರಂಗೋಲಿ ಸ್ಪರ್ಧೆಗಳು, ಸಂಗೀತ, ಸಾಹಸ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಗಾಯತ್ರಿ ಪೀಠದ ವೇದಿಕೆಯಲ್ಲಿ ಸಂಜೆ ಹಂಪಿ ಉತ್ಸವಕ್ಕೆ ಚಾಲನೆ ಸಿಗಲಿದೆ. ಕಲಾವಿದ, ನಟ ಕಲಾವಿದ ಅರುಣ್ ಸಾಗರ್ ಕಲ್ಪನೆಯಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ಹಂಪಿಯ ಗೋಪುರ, ಉಗ್ರ ನರಸಿಂಹ, ಸೈನಿಕರು, ಆನೆಗಳ ಮಾದರಿಯ ವೇದಿಕೆ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ | Pustaka Sante: ಫೆ. 10, 11ರಂದು ತಪ್ಪದೇ ಬನ್ನಿ ʼಪುಸ್ತಕ ಸಂತೆʼಗೆ!

ಸಿಎಂ ಸಿದ್ದರಾಮಯ್ಯ ಅವರ ಜತೆಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ. ಸಚಿವರಾದ ಜಮೀರ್ ಅಹಮ್ಮದ್, ಬಿ‌.ನಾಗೇಂದ್ರ ಸೇರಿದಂತೆ ವಿಜಯನಗರ, ಬಳ್ಳಾರಿ ಜಿಲ್ಲೆಯ ಶಾಸಕರು ಭಾಗಿಯಾಗಲಿದ್ದಾರೆ.

ವೇದಿಕೆ ಮುಂಭಾಗ 25 ರಿಂದ 50 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು, ಹಂಪಿ ಉತ್ಸವಕ್ಕೆ ಬರಲು ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಉತ್ಸವವನ್ನು ಜನೋತ್ಸವ ಆಗಿಸಲು ಜಿಲ್ಲಾಡಳಿತ ಸಕಲ ಸನ್ನದ್ಧವಾಗಿದೆ.

ಹಂಪಿ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್‌ ಏರ್ಪಡಿಸಿದ್ದು, ಭದ್ರತೆಗಾಗಿ 2,000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ನಾಲ್ಕು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು,, ಎಂಟು ಡಿಎಸ್.ಪಿ, ನಾಲ್ಕು ಎಎಸ್‌ಪಿ, 33 ಪಿಎಸ್ಐ, ನಾಲ್ಕು ಸಬ್ ಇನ್‌ಸ್ಪೆಕ್ಟರ್‌, 170 ಜನ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್‌, 914 ಕಾನ್‌ಸ್ಟೇಬಲ್, 100 ಮಹಿಳಾ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಜತೆಗೆ ಹಂಪಿಯ ವಿವಿಧ ಭಾಗಗಳಲ್ಲಿ 500 ಜನ ಹೋಮ್‌ ಗಾರ್ಡ್‌ಗಳ ನೇಮಕ ಮಾಡಲಾಗಿದ್ದು, ನಾಲ್ಕು KSRP ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ.

2 ಜಿಲ್ಲಾ ಆರ್ಮಿ ತಂಡ, ಡಾಗ್ ಸ್ಕ್ವಾಡ್ ಕೂಡ ಕಾರ್ಯನಿರ್ವಹಣೆ ಮಾಡಲಿದ್ದು, ಎಮರ್ಜೆನ್ಸಿ ರೆಸ್ಪಾನ್ಸ್ 112 ಹೆಲ್ಪ್‌ಲೈನ್ ಕರೆ ಮಾಡಲು ಐದು ಕಡೆಗೆ ಜಾಗ ಗುರುತು‌ ಮಾಡಲಾಗಿದ್ದು, ಹಂಪಿ, ಮಕಲಾಪೂರ ಭಾಗದ 19 ಕಡೆ ಪಾರ್ಕಿಂಗ್ ಜಾಗ ಗುರುತಿಸಲಾಗಿದೆ. ಕಡ್ಡಿರಾಂಪೂರ, ಕಮಲಾಪೂರ ಏರಿಯಾಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, 7 ರಿಂದ 8 ಸಾವಿರ ವಾಹನಗಳು ಏಕಕಾಲದಲ್ಲಿ ನಿಲುಗಡೆಗೆ ವ್ಯವಸ್ಥೆ ಇದೆ. ಹಂಪಿಯಲ್ಲಿ 150 ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದ್ದು, ಹೊಸಪೇಟೆ ಸಿಟಿಯಲ್ಲೂ ಸೂಕ್ಷ್ಮ ವಲಯಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಾಗಿದೆ.

ರಾಸುಗಳ ಪ್ರದರ್ಶನಕ್ಕೆ ಚಾಲನೆ ನೀಡಿದ ಸಚಿವ ಜಮೀರ್ ಅಹ್ಮದ್

ಹಂಪಿ ಉತ್ಸವದ ಭಾಗವಾಗಿ ಆಯೋಜಿಸಿರುವ ಆಕರ್ಷಕ ರಾಸುಗಳ ಪ್ರದರ್ಶನಕ್ಕೆ ಸಚಿವ ಜಮೀರ್ ಅಹ್ಮದ್ ಅವರು ಶುಕ್ರವಾರ ಮಧ್ಯಾಹ್ನ ಚಾಲನೆ ನೀಡಿದರು. ಹಂಪಿಯ ಹವಾಮಾ ಕಚೇರಿ ಹಿಂಭಾಗದಲ್ಲಿ ವಿಜಯನಗರ ಜಿಲ್ಲಾಡಳಿತ, ಪಶುಸಂಗೋಪನೆ ಇಲಾಖೆಯಿಂದ ಅತ್ಯುತ್ತಮ ತಳಿಯ 50 ಜೋಡಿ ರಾಸುಗಳ ಪ್ರದರ್ಶನ ಆಯೋಜಿಸಲಾಗಿತ್ತು.

ಕಿಲಾರಿ, ಅಮೃತ್ ಮಹಲ್ ತಳಿಯ ರಾಸುಗಳ ಪ್ರದರ್ಶನ ನಡೆಯಿತು. ವಿದೇಶಿ ಪ್ರಜೆಗಳೂ ರಾಸುಗಳ ಪ್ರದರ್ಶನ ಕಣ್ತುಂಬಿಕೊಂಡು, ಫೋಟೊ ಸೆರೆಹಿಡಿದುಕೊಂಡರು.ಪ್ರದರ್ಶನದಲ್ಲಿ ಮೊದಲ ಬಹುಮಾನ ಪಡೆದ ರಾಸುಗಳ ಜೋಡಿಗೆ 50,000 ರೂ. ನಗದನ್ನು ಜಮೀರ್ ನೀಡಿದರು.

ಏಕಕಾಲದಲ್ಲಿ ವಿವಿಧ ಕಾರ್ಯಕ್ರಮ

ಏಕಕಾಲದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಾಲ್ಕು ದೊಡ್ಡ ವೇದಿಕೆಗಳನ್ನು ರಚಿಸಲಾಗಿದೆ. ಹಂಪಿ ಉತ್ಸವದ ಸಂದರ್ಭದಲ್ಲಿ ಹಲವಾರು ಪ್ರಸಿದ್ಧ ಗಾಯಕರು ಮತ್ತು ಸಂಗೀತಗಾರರು ಪ್ರದರ್ಶನ ನೀಡಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲು ವಿವಿಧ ಸಾಂಸ್ಕೃತಿಕ ತಂಡಗಳನ್ನು ನಿಯೋಜಿಸಲಾಗಿದೆ. ಹೊಸಪೇಟೆಯ ರಸ್ತೆಗಳಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.

ಇದನ್ನೂ ಓದಿ | ದಶಮುಖ ಅಂಕಣ: ಬಾಗಿಲನು ತೆರೆದು…

ಹೆಲಿ ರೈಡ್ ವ್ಯವಸ್ಥೆ

ವಿಜಯನಗರ ಸಾಮ್ರಾಜ್ಯದ ಕುರುಹುಗಳನ್ನು ಆಕಾಶದಿಂದ ನೋಡಿ ಆನಂದಿಸಲು ಇಚ್ಛಿಸುವ ಪ್ರವಾಸಿಗರಿಗೆ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪ್ರಯಾಣಿಕರಿಗೆ 4,229 ರೂ. ಟಿಕೆಟ್ ನಿಗದಿಪಡಿಸಲಾಗಿದೆ. ಹೆಲಿಕಾಪ್ಟ‌ರ್ ರೈಡ್‌ಗೆ ಪ್ರತಿ ಬಾರಿ ಐದರಿಂದ ಆರು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇನ್ನು ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯು ಹೊಸಪೇಟೆಯಿಂದ ಸಮೀಪದ ಹಳ್ಳಿಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ವಿಶೇಷ ಬಸ್‌ ಸೇವೆ ಪ್ರಾರಂಭಿಸಿದೆ.

Exit mobile version