ಬೆಂಗಳೂರು: ಫೆಬ್ರವರಿ 2ರಿಂದ ಮೂರು ದಿನಗಳ ನಡೆಯಲಿರುವ ಹಂಪಿ ಉತ್ಸವದ (Hampi Utsav) ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಅನಾವರಣಗೊಳಿಸಿದರು. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಜಿಲ್ಲಾಧಿಕಾರಿ ದಿವಾಕರ್ ಹಾಗೂ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ, ನಿರ್ದೇಶಕಿ ಕವಿತಾ ಲಂಕೇಶ್ ಉಪಸ್ಥಿತರಿದ್ದರು.
ಹಂಪಿ ಉತ್ಸವವನ್ನು ಪ್ರತಿ ವರ್ಷ ನವೆಂಬರ್‌ನಲ್ಲಿ ನಡೆಸಲಾಗುತ್ತಿತ್ತು. 2023ರಲ್ಲಿ ವಿಜಯನಗರ- ಬಳ್ಳಾರಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಸೃಷ್ಟಿಯಾಗಿದ್ದರಿಂದ ಫೆಬ್ರವರಿಗೆ ಮುಂದೂಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಹೀಗಾಗಿ ಫೆಬ್ರವರಿ 2, 3 ಮತ್ತು 4ರಂದು ಹಂಪಿ ಉತ್ಸವ ನಡೆಸಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 2 ರಿಂದ ಮೂರು ದಿನ ಹಂಪಿ ಉತ್ಸವ ನಡೆಸಲು ಒಪ್ಪಿಗೆ ನೀಡಿದ್ದು, ಮೊದಲ ದಿನ ಉತ್ಸವ ಉದ್ಘಾಟನೆ ಮಾಡಲಿದ್ದಾರೆ. ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಇತ್ತೀಚೆಗೆ ಸೂಚನೆ ನೀಡಿದ್ದರು.
ಈ ಬಾರಿಯ ಹಂಪಿ ಉತ್ಸವ ವಿಜೃಂಭಣೆಯಿಂದ ಮಾಡುವಂತೆ ಹಾಗೂ ಸ್ಥಳೀಯ ಕಲಾವಿದರು ಹಾಗೂ ಸಾಂಸ್ಕೃತಿಕ ಕಲೆಗಳಿಗೆ ಒತ್ತು ನೀಡಲು ಸಚಿವರು ನಿರ್ದೇಶನ ನೀಡಿದ್ದರು.
ಇದನ್ನೂ ಓದಿ | DK Shivakumar: ಕೃತಕ ಬುದ್ಧಿಮತ್ತೆ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮೇಲೆ ನಿಗಾ: ಡಿಕೆಶಿ
ನಾವು ವಚನ ಭ್ರಷ್ಟರಲ್ಲ, ವಚನ ಪಾಲಕರು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ನುಡಿದಂತೆ ನಡೆಯುತ್ತಿದ್ದೇವೆ. ವಚನ ಪಾಲನೆಯ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಈಗ ಪ್ರಜೆಗಳಾದ ನಿಮ್ಮ ಸರದಿ. ಗ್ಯಾರಂಟಿ ಯೋಜನೆಗಳ (Congress Guarantee) ಒಂದು ಪೈಸೆಯನ್ನೂ ದುರುಪಯೋಗ ಮಾಡಲಾರೆ ಎಂಬ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಐದು ಗ್ಯಾರಂಟಿಗಳ ಅನುಷ್ಠಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನುಡಿದಂತೆ ನಡೆಯುತ್ತೇವೆ ಎನ್ನುವುದು ನಾವು ಜನತೆಗೆ ನೀಡಿರುವ ವಚನ. ನಾವು ಉಳಿದವರಂತೆ ವಚನ ಭ್ರಷ್ಟರಲ್ಲ, ವಚನ ಪಾಲಕರು ಎಂದು ಹೇಳಿದ್ದಾರೆ.
ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದು ಜನರಿಂದ ಆಯ್ಕೆಯಾದ ಒಂದು ಸರ್ಕಾರದ ಕರ್ತವ್ಯ, ಈ ಯೋಜನೆಗಳು ದುರುಪಯೋಗ ಆಗದಂತೆ ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿರುವುದು ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದ್ದಾರೆ.
ನಿಮ್ಮದೇ ತೆರಿಗೆ ಹಣ, ನಿಮ್ಮದೇ ಕಲ್ಯಾಣ ಕಾರ್ಯಕ್ರಮಗಳು, ಇವು ಉಚಿತ ಯೋಜನೆಗಳು ಎಂಬ ತಪ್ಪು ಕಲ್ಪನೆ ಬೇಡ. ಗ್ಯಾರಂಟಿಗಳ ಪ್ರತಿ ಪೈಸೆಯೂ ನಿಮ್ಮ ಬದುಕಿಗೆ ಸದುಪಯೋಗವಾಗಬೇಕು. ಚುನಾವಣಾ ಪ್ರಣಾಳಿಕೆಯನ್ನು
ಚುನಾವಣಾ ಪ್ರಚಾರಕ್ಕೆ ಸೀಮಿತಗೊಳಿಸದೆ ಅದನ್ನು ಕಾರ್ಯರೂಪಕ್ಕೆ ತಂದು, ಜನರ ಬದುಕಲ್ಲಿ ಅವುಗಳ ಪ್ರತಿಫಲ ಕಾಣಬೇಕು ಎಂಬುದು ಆಶಯ ನಮ್ಮದು. ನಮ್ಮ ಸರ್ಕಾರದ ಸದಾಶಯಕ್ಕೆ ತಮ್ಮೆಲ್ಲರ ಬೆಂಬಲವಿರಲಿ. ಗ್ಯಾರಂಟಿ ಗೆಲುವು, ಕರ್ನಾಟಕದ ಗೆಲುವು, ನಿಮ್ಮೆಲ್ಲರ ಗೆಲುವು ಎಂದು ಸಿಎಂ ಹೇಳಿದ್ದಾರೆ.