ಉಡುಪಿ: ಸರ್ಕಾರದ ಗೃಹಲಕ್ಷ್ಮಿ ಯೋಜನೆ (Gruhalakshmi scheme) ಬಗ್ಗೆ ಗೊತ್ತಾ ನಿಮ್ಗೆಲ್ಲ.. ಗೃಹಲಕ್ಷ್ಮಿ ದುಡ್ಡು ನಿಮ್ಗೆ ಸಿಗಲ್ಲ. ನಿಮ್ಮ ಅಮ್ಮನಿಗೆ ಕೊಡ್ತೇವೆ; ಹೀಗೆಂದು ಮಕ್ಕಳ ಜತೆ ಆತ್ಮೀಯವಾಗಿ ಹರಟಿದರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah). ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಉಡುಪಿಯ ಬನ್ನಂಜೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ (Girls Hostel) ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳ ಕುಂದು ಕೊರತೆಗಳನ್ನು ಆಲಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಜತೆಗಿದ್ದರು.
ಕೆಲಸ ಸಿಗೋವರೆಗೆ ಯುವನಿಧಿ ಕೊಡ್ತೀವಿ
ಹಾಸ್ಟೆಲ್ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿದ್ದ ಎಲ್ಲ ಮಕ್ಕಳು ಸಿಎಂ ಅವರಿದ್ದಲ್ಲಿಗೆ ಓಡಿ ಬಂದರು. ಅವರನ್ನು ಪ್ರೀತಿಯಿಂದ ಮಾತನಾಡಿದ ಸಿಎಂ ಅವರು ಗೃಹಲಕ್ಷ್ಮಿ ಯೋಜನೆ ಬಗ್ಗೆ ವಿಚಾರಿಸಿದರು. ʻʻಗೃಹ ಲಕ್ಷ್ಮಿ ಯೋಜನೆಯ ಕಾಸು ನಿನಗೆ ಸಿಗಲ್ಲ. ಮನೆಯ ಯಜಮಾನಿಗೆ ದುಡ್ಡು ಹೋಗುತ್ತೆ. ನಿನಗೆ ಹಣ ಸಿಗಲ್ಲ, ನಿನ್ನ ಅಮ್ಮನಿಗೆ ಹಣ ಸಿಗುತ್ತೆʼʼ ಎಂದರು. ಅಂತಿಮ ಡಿಗ್ರಿ ಪಾಸಾದ ಮೇಲೆ ನಿಮಗೆ ಒಳ್ಳೆಯ ಕೆಲಸ ಸಿಗುವ ತನಕ ಯುವ ನಿಧಿ ಕೊಡುತ್ತೇವೆ ಎಂದು ಸಿಎಂ ಹೇಳಿದರು.
ನಿಮಗೇನಾದ್ರೂ ತೊಂದ್ರೆ ಇದ್ಯಾ?
ಹಾಸ್ಟೆಲ್‌ನ ಕುಂದುಕೊರತೆಗಳ ಬಗ್ಗೆ ಪ್ರಶ್ನಿಸಿದ ಅವರು, ನಿಮಗೆ ಏನಾದರೂ ತೊಂದರೆ ಇದ್ಯಾ? ತೊಂದರೆ ಇದ್ರೆ ಸರಿಪಡಿಸೋಕೆ ಕೇಳ್ತಾ ಇದ್ದೀನಿ. ಇವರು ಲಕ್ಷ್ಮಿ ಹೆಬ್ಬಾಳ್ಕರ್. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು. ನಿಮಗೆ ಏನಾದರೂ ತೊಂದರೆ ಇದ್ದರೆ ಹೇಳಬೇಕು ಎಂದು ಹೇಳಿದರು.
ಊಟ ತಿಂಡಿ ಮೆನು ನೀವೇ ಹೇಳ್ತೀರಾ?
ʻʻನಿಮಗೆ ಹೆಲ್ತ್ ಚೆಕಪ್ ಎಲ್ಲ ಟೈಮ್ ಟು ಟೈಮ್ ಮಾಡಿಸ್ತಾ ಇದ್ದಾರಾ? ಡಾಕ್ಟರ್ಸ್ ಬರ್ತಾರಾ?ʼʼ ಎಂದು ಕೇಳಿದ ಸಿದ್ದರಾಮಯ್ಯ, ʻʻಊಟ ತಿಂಡಿಗೆ ಮೆನು ನೀವೇ ಹೇಳ್ತೀರಾ? ಅವರೇ ಮಾಡುತ್ತಾರಾ?ʼʼ ಎಂದು ಕೇಳಿದರು.
ಎಲ್ಲಾ ಇಲ್ಲೇ ಇದ್ದೀರಲ್ಲಾ.. ರಜಾನಾ?
ಸಿದ್ದರಾಮಯ್ಯ ಅವರು ಹಾಸ್ಟೆಲ್‌ಗೆ ಹೋದಾಗ ಹೆಚ್ಚಿನ ಮಕ್ಕಳು ಅಲ್ಲೇ ಇದ್ದರು. ಆಗ ಸಿದ್ದರಾಮಯ್ಯನವರು ʻʻಇವತ್ತೇನ್ ರಜೆನಾ? ಏನು ಹಾಸ್ಟೆಲ್ ನಲ್ಲೆ ಇದ್ದೀರಿ?ʼʼ ಎಂದು ಕೇಳಿದರು. ಆಗ ಮಕ್ಕಳು ʻʻಇಲ್ಲ ಸರ್, ಎಕ್ಸಾಮ್ ಇದೆ.. ಎಂದರು. ʻʻಆಗ ಎಕ್ಸಾಮ್‌ಗೆ ಓದಿ ಆಯ್ತಾʼʼ ಎಂದು ವಿಚಾರಿಸಿ, ಆಲ್‌ದ ಬೆಸ್ಟ್ ಎಂದರು.
ವಿರೋಧ ಪಕ್ಷದ ನಾಯಕ ಯಾರು?!
ಹಾಸ್ಟೆಲ್ ಬೋರ್ಡ್ ನೋಡಿ ಮಕ್ಕಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ʻʻಓಹೋ ನಿಮ್ಮಲ್ಲೇ ಪ್ರಧಾನ ಮಂತ್ರಿ ಮಾಡಿದ್ದಿರಾ?ʼʼ ಎಂದು ಕೇಳಿ, ವಿರೋಧ ಪಕ್ಷದ ನಾಯಕರು ಯಾರು ಎಂದು ನಕ್ಕರು.
ವಿದ್ಯಾರ್ಥಿನಿಯರ ಜೊತೆ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದ ಅವರು ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳು ಕಾಡದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಸಿದ್ದರಾಮಯ್ಯ ಅವರು ಮಕ್ಕಳ ಜತೆಗೆ ಗ್ರೂಪ್ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.
ಇದನ್ನೂ ಓದಿ: Udupi Toilet Case : ಉಡುಪಿ ವಿಡಿಯೊ ಪ್ರಕರಣ SIT ತನಿಖೆ ಅಗತ್ಯ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ