ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಭೇಟಿಯಾಗಿ (CM to Visit Delhi) ಮಾತುಕತೆ ನಡೆಸಿದರು. ಈ ವೇಳೆ ಎಸ್‌ಸಿ ಎಸ್‌ಟಿ ಮೀಸಲಾತಿ ಹೆಚ್ಚಳ, ಸಚಿವ ಸಂಪುಟ ವಿಸ್ತರಣೆ, ಕೇಂದ್ರದ ಬಿಜೆಪಿ ನಾಯಕರ ರಾಜ್ಯ ಪ್ರವಾಸ ಸೇರಿ ಹಲವರು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಭೆಯ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಜೆ.ಪಿ.ನಡ್ಡಾ ನೇತೃತ್ವದಲ್ಲಿ ಸಭೆ ನಡೆದಿದೆ. ಜನವರಿ, ಫೆಬ್ರವರಿಯಿಂದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿ ಹಲವರು ರಾಜ್ಯ ಪ್ರವಾಸ ಶುರು ಮಾಡುವ ಬಗ್ಗೆ ಚರ್ಚೆ ನಡೆದಿದೆ. ಡಿಸೆಂಬರ್ 30ಕ್ಕೆ ಅಮಿತ್ ಶಾ ರಾಜ್ಯಕ್ಕೆ ಬರಲಿದ್ದಾರೆ ಎಂದು ಹೇಳಿದರು.
ಮೀಸಲಾತಿ ಹೋರಾಟ ಬಗ್ಗೆಯೂ ಮಾತುಕತೆ ನಡೆದಿದೆ. ಸಾಮಾಜಿಕ ನ್ಯಾಯ ಮಾನದಂಡದ ಆಧಾರದಲ್ಲಿ ಅರ್ಹ ಸಮುದಾಯಗಳಿಗೆ ಮೀಸಲಾತಿ ನೀಡುವ ಮೂಲಕ ನ್ಯಾಯ ಒದಗಿಸಲಾಗುವುದು. ಈಗಾಗಲೇ ಮೀಸಲಾತಿ ಕುರಿತು ಅನೇಕ ತಜ್ಞರು ವರದಿ ನೀಡಿದ್ದಾರೆ. ಮತ್ತಷ್ಟು ವರದಿ ಅಧ್ಯಯನ ಮಾಡುತ್ತೇವೆ. ಈ ಬಗ್ಗೆ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೆಲವರು ಬಿಜೆಪಿ ಸೇರುವ ಇಚ್ಛೆ ಹೊಂದಿದ್ದಾರೆ. ಅದರ ಬಗ್ಗೆಯೂ ಚರ್ಚೆ ಆಗಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ವಿಸ್ತೃತವಾಗಿ ಮಾತುಕತೆ ನಡೆದಿದೆ. ಪ್ರಾಂತ್ಯವಾರು ಮತ್ತು ಜಾತಿವಾರು ಸಚಿವರ ಮಾಹಿತಿ ಪಡೆದಿದ್ದಾರೆ. ಶೀಘ್ರದಲ್ಲೇ ಸಂಪುಟ ವಿಸ್ತರಣೆ ಬಗ್ಗೆ ತಿಳಿಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ | SCST Reservation | ದಲಿತ ಮೀಸಲಾತಿ ಹೆಚ್ಚಿಸುವ ಮಸೂದೆಗೆ ವಿಧಾನಸಭೆ ಒಪ್ಪಿಗೆ: ಬಿಜೆಪಿಯೇ ಮೀಸಲಾತಿ ಪರ ಎಂದ ಸರ್ಕಾರ