ಕೋಲ್ಕೊತಾ: ದೇಶೀಯ ಕಲ್ಲಿದ್ದಲು ಉತ್ಪಾದನೆ ಕಳೆದ ಸಾಲಿಗಿಂತ ಶೇ. 18ರಷ್ಟು ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ (Prahlad joshi) ಹೇಳಿದ್ದಾರೆ. ಪಶ್ಚಿಮ ಬಂಗಾಳದ ಝಂಜ್ರಾ ಭೂಗತ ಕಲ್ಲಿದ್ದಲು ಗಣಿಗೆ ಭೇಟಿ ನೀಡಿದ ನಂತರ ಕಲ್ಲಿದ್ದಲು ಗಣಿಗಳ ಉತ್ಪಾದನೆ ಕುರಿತ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವರು ಮಾತನಾಡಿದರು.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಅಕ್ಟೋಬರ್ 2022ರ ಹೊತ್ತಿಗೆ ಭಾರತದ ಒಟ್ಟು ಕಲ್ಲಿದ್ದಲು ಉತ್ಪಾದನೆಯು ಶೇ.18ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, 448 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಮಾರ್ಚ್, 2023ರೊಳಗೆ ವಿದ್ಯುತ್ ಸ್ಥಾವರಗಳೊಂದಿಗೆ 45 ಮೆಟ್ರಿಕ್ ಟನ್ ಸ್ಟಾಕ್ ಗುರಿಯನ್ನು ಸಾಧಿಸಬೇಕೆಂದು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ನಿಂದ ಕಲ್ಲಿದ್ದಲು ಉತ್ಪಾದನೆಯ ಬೆಳವಣಿಗೆಯು ಶೇ. 17ಕ್ಕಿಂತ ಹೆಚ್ಚಾಗಿದೆ. 2022ರ ನವೆಂಬರ್ ಅಂತ್ಯದ ವೇಳೆಗೆ ದೇಶೀಯ ಕಲ್ಲಿದ್ದಲು ಆಧಾರಿತ ಸ್ಥಾವರಗಳಲ್ಲಿ 30 ಮಿಲಿಯನ್ ಟನ್ ಗಳಷ್ಟು ದಾಸ್ತಾನು ನಿರ್ಮಿಸಲು ಯೋಜಿಸುತ್ತಿದೆ. 2023 ರ ಮಾರ್ಚ್ 31ರ ಅಂತ್ಯದ ವೇಳೆಗೆ ಥರ್ಮಲ್ ಸ್ಟಾಕ್ ಅನ್ನು ನಿರ್ಮಿಸಲು ಯೋಜಿಸಿದ್ದು, ವಿದ್ಯುತ್ ಸ್ಥಾವರಗಳ (TPP) ಸ್ಟಾಕ್ 45 ಮಿಲಿಯನ್ ಟನ್‌ಗಳಿಗೆ ಏರಲಿದೆ ಎಂದು ಪ್ರಲ್ಹಾದ್ ಜೋಶಿ ಇದೇ ವೇಳೆ ಹೇಳಿದ್ದಾರೆ.
ಪ್ರತಿ ದಿನ ಶೇ. ೯ರಷ್ಟು ಬೆಳವಣಿಗೆ
ಪ್ರಸಕ್ತ ಸಾಲಿನಲ್ಲಿ ಮೊದಲ ಏಳು ತಿಂಗಳುಗಳಲ್ಲಿ ದಿನಕ್ಕೆ ಸರಾಸರಿ ಶೇ. 9 ಬೆಳವಣಿಗೆ ಕಂಡುಬಂದಿದೆ, ಇದು ಹೆಚ್ಚಿನ ಪ್ರಮಾಣದ ಕಲ್ಲಿದ್ದಲನ್ನು ಸಾಗಿಸಲು ಮತ್ತು ವಿದ್ಯುತ್ ಸ್ಥಾವರಗಳಲ್ಲಿ ದಾಸ್ತಾನುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ವಿದ್ಯುತ್ ಸಚಿವಾಲಯವು ರೈಲು-ಕಮ್-ರಸ್ತೆ ವಿಧಾನದ ಮೂಲಕ ಕಲ್ಲಿದ್ದಲು ಸಾಗಣೆಯನ್ನು ಹೆಚ್ಚಿಸುತ್ತಿದೆ. ಸುಗಮ ಕಲ್ಲಿದ್ದಲು ಸಾಗಣೆಗಾಗಿ ಸಮುದ್ರ ಮಾರ್ಗದ ಮೂಲಕ ಕಲ್ಲಿದ್ದಲು ಸಾಗಣೆಯನ್ನು ಉತ್ತೇಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ, ವಿದ್ಯುತ್ ಸಚಿವಾಲಯ, ರೈಲ್ವೆ ಮತ್ತು ಕಲ್ಲಿದ್ದಲು ಸಚಿವಾಲಯಗಳು ಒಟ್ಟಾಗಿ ಕೆಲಸ ಮಾಡುತ್ತಿವೆ.
ಪೂರ್ವ ಕರಾವಳಿಯ ವಿದ್ಯುತ್ ಸ್ಥಾವರಗಳಿಗೆ ರೈಲು-ಸಮುದ್ರ ಮಾರ್ಗದ ಮೂಲಕ ಸಾಗಣೆ ಮಾಡಲಾಗುತ್ತಿದೆ. ದೇಶದ ಪೂರ್ವ ಭಾಗದಲ್ಲಿರುವ ಕಲ್ಲಿದ್ದಲು ಗಣಿಗಳಿಂದ ಪಶ್ಚಿಮ ಕರಾವಳಿ ಅಥವಾ ದೇಶದ ಉತ್ತರ ಭಾಗದಲ್ಲಿರುವ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಆರ್‌ಎಸ್‌ಆರ್ ಮೂಲಕ ಪಶ್ಚಿಮ ಕರಾವಳಿ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | COP27 | ಕಲ್ಲಿದ್ದಲು ಹಂತಗಳಲ್ಲಿ ಇಳಿಕೆ, ಇಂಧನ ಸಬ್ಸಿಡಿ ಮುಂದುವರಿಸುವ ಭಾರತದ ಪ್ರಸ್ತಾಪಕ್ಕೆ ವಿಶ್ವಸಂಸ್ಥೆ ಮಾತುಕತೆ ಸಮ್ಮತಿ