ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮೇ 21 ಮತ್ತು 22ರಂದು ಗುಡುಗು ಸಹಿತ ಭಾರೀ ಮಳೆಯಾಗುವ (Heavy rain) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಆರೆಂಜ್ ಅಲರ್ಟ್ ದಿನಗಳಲ್ಲಿ ಕರಾವಳಿಯಲ್ಲಿ 115.6 ಮಿ.ಮೀ. ನಿಂದ 204.4 ಮಿ.ಮೀ. ವರೆಗೆ ಮಳೆಯಾಗುವ (Coastal Weather) ನಿರೀಕ್ಷೆಯಿದೆ.
ಹಲವೆಡೆ ಉತ್ತಮ ಮಳೆ
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಭಾನುವಾರ ಬೆಳಗ್ಗೆ ಮತ್ತು ಸಂಜೆ ಉತ್ತಮ ಮಳೆ ಸುರಿದಿದೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಇದನ್ನೂ ಓದಿ: Heavy Rain: ಶಿರಾದಲ್ಲಿ ಭಾರೀ ಮಳೆಗೆ ಮನೆ, ಅಂಗಡಿಗಳಿಗೆ ನುಗ್ಗಿದ ನೀರು
ಮಂಗಳೂರಿನಲ್ಲಿ ಮೋಡ ಕವಿದ ವಾತಾವರಣದಿಂದ ಕೂಡಿತ್ತು. ಮಂಗಳೂರಿನಲ್ಲಿ ಭಾನುವಾರ 32.2 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.2 ಡಿ.ಸೆ. ಕಡಿಮೆ ಇತ್ತು. 24.8 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.1 ಡಿ.ಸೆ. ಉಷ್ಣಾಂಶ ಕಡಿಮೆ ಇತ್ತು.
ಉಡುಪಿಯಲ್ಲಿ ಧಾರಾಕಾರ ಮಳೆ
ಉಡುಪಿ ಜಿಲ್ಲೆಯಲ್ಲಿ ಭಾನುವಾರ ಬೆಳಗಿನ ಜಾವ ಹಲವೆಡೆ ಧಾರಾಕಾರ ಮಳೆಯಾಗಿದೆ. ಗುಡುಗು, ಮಿಂಚು ಸಹಿತ ಭಾನುವಾರ ಬೆಳಗಿನಜಾವದವರೆಗೂ ನಿರಂತರ ಮಳೆ ಸುರಿದಿದೆ. ಇನ್ನು ಉಡುಪಿ, ಮಣಿಪಾಲ, ಮಲ್ಪೆ, ಬ್ರಹ್ಮಾವರ, ಕೋಟ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ, ಕಾಪು, ಶಿರ್ವ, ಪಡುಬಿದ್ರಿ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಹಲವೆಡೆ ಗಾಳಿ-ಮಳೆಗೆ ಮನೆಗಳಿಗೆ ಹಾನಿ ಸಂಭವಿಸಿದೆ. ವಿದ್ಯುತ್ ಕಂಬ, ತಂತಿಗಳಿಗೆ ಹಾನಿ ಸಂಭವಿಸಿದೆ.
ಕೊಡಗಿನಲ್ಲಿ ಉತ್ತಮ ಮಳೆ
ಕೊಡಗಿನ ವಿವಿಧೆಡೆ ಉತ್ತಮ ಮಳೆಯಾಗುತ್ತಿದ್ದು, ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮೇ 23ರ ವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
Karnataka Weather : ಯಾದಗಿರಿಯಲ್ಲಿ ಸಿಡಿಲಿಗೆ ಕುರಿಗಾಹಿ ಸಾವು ; ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ಪ್ರವಾಸಿಗರು
ಯಾದಗಿರಿ/ಚಿಕ್ಕಮಗಳೂರು: ಮಳೆಯ ಆರ್ಭಟ (Karnataka Weather Forecast) ಮುಂದುವರಿದಿದ್ದು, ಸಾವು-ನೋವಿಗೆ ಕಾರಣವಾಗುತ್ತಿದೆ. ಯಾದಗಿರಿಯ ಗುರುಮಠಕಲ್ ತಾಲೂಕಿನ ಭಾಗದಲ್ಲಿ ಸೋಮವಾರ ಗುಡುಗು, ಸಿಡಿಲಿನ ಜತೆಗೆ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಸಿಡಿಲು ಬಡಿದು ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುಮಠಕಲ್ ತಾಲೂಕಿನ ರಾಂಪುರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ.
ಇದನ್ನೂ ಓದಿ: Rain news: ಚಾರ್ಮಾಡಿ ಘಾಟಿಯಲ್ಲಿ ಮಳೆಗೆ ಸಿಲುಕಿಕೊಂಡ ನೂರಾರು ಪ್ರಯಾಣಿಕರು
ರಾಂಪುರು ಗ್ರಾಮದ ಕುರಿಗಾಹಿ ಚಂದಪ್ಪ (55) ಮೃತ ದುರ್ದೈವಿ. ಕುರಿಗಾಹಿ ಚಂದಪ್ಪ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡು ಕುರಿ ಮೇಯಿಸಲು ತೆರಳಿದ್ದರು. ಈ ವೇಳೆ ಮೊಬೈಲ್ ಇಟ್ಟುಕೊಂಡ ಭಾಗಕ್ಕೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆಗೆ ಸಿಲುಕಿ ಪ್ರವಾಸಿಗರ ಪರದಾಟ
ಗೋಪಾಲಸ್ವಾಮಿ ಬೆಟ್ಟದಲ್ಲಿ ಜೋರು ಮಳೆಯಾಗುತ್ತಿದ್ದು ಪ್ರವಾಸಿಗರು ಪರದಾಡಿದರು. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಚೆಕ್ ಪೋಸ್ಟ್ ಸಮೀಪ ನೀರು ನದಿಯಂತೆ ಹರಿಯುತ್ತಿದೆ. ಚೆಕ್ ಪೋಸ್ಟ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ನೂರಾರು ಮಂದಿ ಮಳೆಗೆ ಸಿಲುಕಿದರು. 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ಬೆಟ್ಟದ ಮೇಲಿಂದ ನದಿಯಂತೆ ನೀರು ಹರಿದು ಬಂದಿತ್ತು. ಮಳೆಗೆ ಸಿಲುಕಿ ಪ್ರವಾಸಿಗರ ಪರದಾಟ ಒಂದು ಕಡೆಯಾದರೆ, ಮಳಿಗೆಗಳಿಗೂ ನೀರು ನುಗ್ಗಿತ್ತು.
ಚಾಮರಾಜನಗರದಲ್ಲಿ ಮಳೆಯ ಅಬ್ಬರ
ಚಾಮರಾಜನಗರದಲ್ಲಿ ಎರಡು ಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದೆ. ಜಿಲ್ಲೆಯ ಕೆಲ ಕಡೆ ತುಂತುರು ಮಳೆಯಾದರೆ ಕೆಲವು ಕಡೆ ಭರ್ಜರಿ ಮಳೆಯಾಗಿದೆ. ರಸ್ತೆ ಬದಿಗಳಲ್ಲಿ ನದಿಯಂತೆ ಮಳೆ ನೀರು ಹರಿಯುತ್ತಿದೆ. ಇತ್ತ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟ, ಹಂಗಳ ಗ್ರಾಮದ ಸುತ್ತ ಮುತ್ತ ಭರ್ಜರಿ ಮಳೆಯಾಗಿದೆ.
ಇದನ್ನೂ ಓದಿ: Karnataka Weather : ವರ್ಷಾಘಾತಕ್ಕೆ ಜನ ಸುಸ್ತು; ಮಳೆಯಾಟಕ್ಕೆ ಬಿರುಗಾಳಿ ಸಾಥ್
ಶಿವಮೊಗ್ಗದಲ್ಲಿ ಧಾರಾಕಾರ ಮಳೆ
ಮಲೆನಾಡು ಶಿವಮೊಗ್ಗದಲ್ಲೂ ಧಾರಾಕಾರವಾಗಿ ಮಳೆ ಸುರಿದಿದೆ. ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸೊರಬ, ಭದ್ರಾವತಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಒಂದು ಗಂಟೆಯಿಂದ ಬಿಡುವು ನೀಡದೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ.