ಕಾರವಾರ: ಬೃಹತ್ ಗಾತ್ರದ ನಾಗರ ಹಾವೊಂದು ರಾಷ್ಟ್ರೀಯ ಹೆದ್ದಾರಿ ದಾಟಲು ಪರದಾಡಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಹೊಳೆಗದ್ದೆ ಟೋಲ್ ಬಳಿ ನಡೆದಿದೆ.
ಸುಮಾರು 6 ಅಡಿ ಉದ್ದದ ನಾಗರ ಹಾವು ಹೆದ್ದಾರಿ ದಾಟುವ ನಿಟ್ಟಿನಲ್ಲಿ ರಸ್ತೆ ಮೇಲೆ ಬಂತು. ಅತ್ತ ದಾಟಲೂ ಆಗದೇ, ತಿರುಗಿಯೂ ಹೋಗದೇ ರಸ್ತೆಯಲ್ಲೇ ನಿಂತಿತ್ತು. ಇದರಿಂದಾಗಿ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸಲಾಗದೇ ಸಂಚಾರಕ್ಕೆ ಅಡ್ಡಿಯುಂಟಾಗಿ, ಸುಮಾರು ಅರ್ಧ ಗಂಟೆ ಕಾಲ ಹಾವಿನಿಂದಾಗಿ ಅಡೆತಡೆಯುಂಟಾಗಿತ್ತು.
ಈ ವೇಳೆ ಸ್ಥಳೀಯರು ಉರಗ ಪ್ರೇಮಿ ಪವನ ನಾಯ್ಕಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಪವನ್ ಹೆದ್ದಾರಿಯಲ್ಲಿ ನಿಂತಿದ್ದ ನಾಗರಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಅದನ್ನು ರಸ್ತೆ ಸಮೀಪದಲ್ಲೇ ಇದ್ದ ಪೊದೆಗೆ ಬಿಟ್ಟಿದ್ದು, ಹಾವನ್ನು ಹಿಡಿದ ಬಳಿಕ ವಾಹನ ಸವಾರರು ನಿಟ್ಟುಸಿರು ಬಿಡುವಂತಾಯಿತು.
ಇದನ್ನೂ ಓದಿ: Kshatriya Samavesha: ಬೆಂಗಳೂರಿನಲ್ಲಿ ಭಾನುವಾರ ಬೃಹತ್ ಕ್ಷತ್ರಿಯ ಸಮಾವೇಶ