ಬೆಂಗಳೂರು: ಎಲ್ಲರಿಗೂ ಆರೋಗ್ಯ ಎಂಬ ಘೋಷಣೆಯನ್ನು ಸಾಕಾರಗೊಳಿಸಲು ಹಾಗೂ ಶ್ರವಣ ದೋಷ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ 6 ವರ್ಷದೊಳಗಿನ ಮಕ್ಕಳ ಶ್ರವಣ ದೋಷ ನಿವಾರಣೆಗೆ (Cochlear Implant) ವಿಶೇಷ ಗಮನವನ್ನು ಹರಿಸಿದೆ.
ಈ ವರ್ಷ ಎಲ್ಲ ಜನ್ಮಜಾತ ಶ್ರವಣ ದೋಷ ಸಮಸ್ಯೆ ಇರುವ ಮಕ್ಕಳ ಸಂಬಂಧ ವಿಶೇಷ ಗಮನ ಹರಿಸಲಾಗಿದ್ದು, ಶ್ರವಣ ದೋಷ ಸಮಸ್ಯೆ ಇರುವ ಮಕ್ಕಳಲ್ಲಿ ಮಾತು ಮತ್ತು ಶ್ರವಣ ಸಾಮರ್ಥ್ಯ ಸುಧಾರಿಸಲು 500 ಮಕ್ಕಳಿಗೆ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್ ಮಾಡಲು ಸರ್ಕಾರ ಎಲ್ಲ ವ್ಯವಸ್ಥೆ ಮಾಡಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ 6 ವರ್ಷದೊಳಗಿನ 1,939 ಮಕ್ಕಳು ಶ್ರವಣ ದೋಷಕ್ಕೊಳಗಾಗಿದ್ದಾರೆ ಎಂದು ಗುರುತಿಸಲಾಗಿದೆ. ಈ ಪೈಕಿ ಹೆಚ್ಚಿನವರು ಜನ್ಮಜಾತ ಕಿವುಡು ಸಮಸ್ಯೆಗೆ ಸಿಲುಕಿದ್ದು, ಪ್ರಸವಪೂರ್ವ ಅವಧಿಯಲ್ಲಿ ಔಷಧ ಸೇವನೆ, ವೈರಾಣು ಸೋಂಕು, ಉಸಿರುಗಟ್ಟುವಿಕೆ, ಆಘಾತದಂತಹ ಸಮಸ್ಯೆಗಳು ಇದಕ್ಕೆ ಮೂಲ ಕಾರಣವಾಗಿದೆ.
ಇದನ್ನೂ ಓದಿ | Bagalakote News | ವೃದ್ಧನ ಹೊಟ್ಟೆ ಒಳಗೆ ಇತ್ತು 187 ನಾಣ್ಯಗಳು; ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು
ಕಾಕ್ಲಿಯರ್ ಇಂಪ್ಲಾಂಟ್ ಒಂದು ಸಣ್ಣ ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಈ ಸಾಧನವು ತೀವ್ರ ಮತ್ತು ಅತಿಯಾದ ಶ್ರವಣ ದೋಷ ಹೊಂದಿರುವ ಮಕ್ಕಳಿಗೆ ಶಬ್ದಗಳನ್ನು ಕೇಳಲು ಸಹಾಯ ಮಾಡುತ್ತದೆ. ಒಳ ಕಿವಿಯ ಕಾಕ್ಲಿಯಾಗೆ ಸೇರಿಸಿ ಇಂಪ್ಲಾಂಟ್ ಅಳವಡಿಸಿದ ನಂತರ ಪ್ರೊಸೆಸರ್ ಅನ್ನು ಕಿವಿಯ ಹಿಂದೆ ಇರಿಸಲಾಗುತ್ತದೆ, ನಿಷ್ಕ್ರಿಯ ಶ್ರವಣ ಸಾಧನ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಮತ್ತು ಆಡಿಯೊ ಸಂಕೇತಗಳನ್ನು ಮೆದುಳಿಗೆ ರವಾನಿಸುತ್ತದೆ.
ಆಶಾ ಕಾರ್ಯಕರ್ತೆಯರಿಗೆ ಗೌರವ ಧನ
ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು, ಶಸ್ತ್ರಚಿಕಿತ್ಸೆಗೆ ನೆರವಾಗುವ ಆಶಾ ಕಾರ್ಯಕರ್ತೆಯರಿಗೆ 250 ರೂ. ಗೌರವಧನ ನೀಡಲಾಗುತ್ತಿದೆ. ಇಂತಹ ಶಸ್ತ್ರ ಚಿಕಿತ್ಸೆಯನ್ನು ಕೆ.ಸಿ. ಜನರಲ್ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಸಂಸ್ಥೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು ಬಿಎಂಸಿಆರ್‌ಐ, ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ 20 ಆಸ್ಪತ್ರೆಗಳಲ್ಲಿ ಸುಸಜ್ಜಿತ ಶಸ್ತ್ರಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇನ್ನಷ್ಟು ಆಸ್ಪತ್ರೆಗಳನ್ನು ಉಚಿತ ಶಸ್ತ್ರಚಿಕಿತ್ಸೆಗಾಗಿ ಸೇರ್ಪಡೆ ಮಾಡಲಾಗುತ್ತಿದೆ.
ಕಿವುಡುತನ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್.ಪಿ.ಪಿ.ಸಿ.ಡಿ.) ಅಡಿ ಕಾರ್ಯನಿರ್ವಹಿಸುವ ಶ್ರವಣಶಾಸ್ತ್ರ ತಂಡಗಳು ರಾಷ್ಟ್ರೀಯ ಬಾಲ ಸುರಕ್ಷಾ ಕಾರ್ಯಕ್ರಮ (ಆರ್.ಬಿ.ಎಸ್.ಕೆ.)ದಡಿ ಸಂಚಾರಿ ಆರೋಗ್ಯ ತಂಡಗಳ ಸಹಯೋಗದೊಂದಿಗೆ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ. ಗುರುತಿಸಲಾದ ಅರ್ಹ ಮಕ್ಕಳನ್ನು ಹೆಚ್ಚಿನ ಮೌಲ್ಯಮಾಪನ ಮತ್ತು ನಿರ್ವಹಣೆಗಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ.
ಇದನ್ನೂ ಓದಿ | Border Dispute | ಮಹಾಜನ ವರದಿಯನ್ನು ಮಹಾರಾಷ್ಟ್ರದವರು ಒಪ್ಪಬೇಕು, ಇಲ್ಲದಿದ್ರೆ ಸುಮ್ನೆ ಕೂತ್ಕೋಬೇಕು: ಯತ್ನಾಳ್ ಕಿಡಿ
62 ಮಕ್ಕಳಿಗೆ ಶಸ್ತ್ರಚಿಕಿತ್ಸೆ
ರಾಜ್ಯದಲ್ಲಿ ಪ್ರಸ್ತುತ ಇಂತಹ 652 ಮಕ್ಕಳನ್ನು ಗುರುತಿಸಿದ್ದು, ಈ ಪೈಕಿ 586 ಮಕ್ಕಳು ವಿವಿಧ ಹಂತಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 62 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, 258 ಮಕ್ಕಳ ಮೇಲೆ ನಿಗಾ ವಹಿಸಲಾಗಿದೆ. 142 ಮಕ್ಕಳು ಶ್ರವಣ ಸಾಧನ ಅಳವಡಿಕೆ ಚಿಕಿತ್ಸೆ ಪಡೆಯುತ್ತಿವೆ.
ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23 ನೇ ಸಾಲಿನ ಬಜೆಟ್‌ನಲ್ಲಿ ಶ್ರವಣ ದೋಷ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದರು. ಈ ಯೋಜನೆ ಕುರಿತು ಸಚಿವರು ಪ್ರಗತಿ ಪರಿಶೀಲನೆ ನಡೆಸಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಅಡಿಕೆಗೆ ಎಲೆ ಚುಕ್ಕಿ ರೋಗ | ಮುನ್ನೆಚ್ಚರಿಕಾ ಕ್ರಮಕ್ಕೆ 10 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ