Site icon Vistara News

Code of conduct : ಶಿವಮೊಗ್ಗದ ಜುವೆಲ್ಲರಿಗೆ ದಾಳಿ, 5.83 ಕೋಟಿ ರೂ. ಮೌಲ್ಯದ ದಾಖಲೆರಹಿತ ಚಿನ್ನಾಭರಣ ವಶಕ್ಕೆ

Shivamogga jewellery

#image_title

ಶಿವಮೊಗ್ಗ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯ (Karnataka Elections) ಬಳಿಕ ನೀತಿ ಸಂಹಿತೆ (Code of conduct) ಜಾರಿ ವಿಷಯದಲ್ಲಿ ಭಾರಿ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಹಣ, ವಸ್ತುಗಳ ಸಾಗಾಟದ ಮೇಲೆ ಕಣ್ಣಿಡಲಾಗಿದೆ. ಇದೇ ವೇಳೆ ಸಂಶಯ ಬಂದ ಗೋದಾಮು, ಜುವೆಲ್ಲರಿಗಳ ಮೇಲೂ ದಾಳಿ ನಡೆಯುತ್ತಿದೆ. ಈಗ ದಾಖಲೆರಹಿತವಾಗಿ ಸಿಗುತ್ತಿರುವ ಪ್ರತಿಯೊಂದು ವಸ್ತು ಮತ್ತು ನಗದಿಗೂ ಚುನಾವಣೆಗೂ ಸಂಬಂಧವಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.

ಶಿವಮೊಗ್ಗದಲ್ಲಿ ಚಿನ್ನದ ಅಂಗಡಿಯೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಸೂಕ್ತ ದಾಖಲೆಗಳು ಇಲ್ಲದೆ ಸಂಗ್ರಹಿಸಿಟ್ಟಿದ್ದ ಸುಮಾರು 5.83 ಕೋಟಿ ರೂ. ಮೌಲ್ಯದ 9.565 ಕೆಜಿ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗದ ಗಾಂಧಿ ಬಜಾರಿನ‌ ಎಲೆ ರೇವಣ್ಣಕೇರಿಯಲ್ಲಿರುವ ಚಿನ್ನದ ಅಂಗಡಿ ಇದಾಗಿದೆ.

ಸಿಲ್ವರ್ ಪ್ಯಾಲೇಸ್ ಎಂಬ ಹೆಸರಿನ ಚಿನ್ನದ ಅಂಗಡಿಗೆ ಲಕ್ಷ್ಮಣ್‌ ಕುಮಾರ್‌ ಎಂಬವರು ಮಾಲೀಕರಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಶಿವಮೊಗ್ಗದಲ್ಲಿ 30.64 ಲಕ್ಷ ರೂ. ವಶಕ್ಕೆ

ಈ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 30.64 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸೂಕ್ತ ದಾಖಲೆಯಿಲ್ಲದೆ ಸಾಗಾಟ ಮಾಡುತ್ತಿದ್ದ ಹಣ ವಶಕ್ಕೆ ಪಡೆಯಲಾಗಿದೆ.

ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ 27.60 ಲಕ್ಷ ರೂ, ಶಿಕಾರಿಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 1.79 ಲಕ್ಷ ರೂ. ಮತ್ತು ಪೇಪರ್ ಟೌನ್ ಠಾಣಾ ವ್ಯಾಪ್ತಿಯಲ್ಲಿ 1.25 ಲಕ್ಷ ರೂ. ಹೀಗೆ ಮೂರು ಕಡೆಗಳಲ್ಲಿ ಒಟ್ಟು 30.64 ಲ ರೂ ವಶಕ್ಕೆ ಪಡೆಯಲಾಗಿದೆ.

ಹಾವೇರಿಯಲ್ಲಿ 40 ಲಕ್ಷ ರೂ. ವಶಕ್ಕೆ

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 40 ಲಕ್ಷ ರೂಪಾಯಿ ವಶವಾಗಿದೆ. ಶಿವಯೋಗಿ ಮುದಿಗೌಡ್ರ ಎಚ್.ಡಿ.ಎಫ್.ಸಿ ಬ್ಯಾಂಕಿನ ಸಿಬ್ಬಂದಿಗಳು ಈ ಹಣವನ್ನು ಸಾಗಿಸುತ್ತಿದ್ದರು. ಹಣವನ್ನು ವಶಕ್ಕೆ ಪಡೆದು ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Karnataka Election: ಚುನಾವಣಾ ಅಕ್ರಮ; ನಗದು ಸೇರಿ 100 ಕೋಟಿ ರೂ. ದಾಟಿದ ಜಪ್ತಿ ವಸ್ತುಗಳ ಮೌಲ್ಯ!

Exit mobile version