Site icon Vistara News

Code of conduct : ಅನುಮತಿ ಪಡೆಯದೆ ಸಭೆ; ರೇಣುಕಾಚಾರ್ಯಗೆ ಚುನಾವಣಾಧಿಕಾರಿಗಳಿಂದ ಶಾಕ್‌ ಟ್ರೀಟ್‌ಮೆಂಟ್‌!

MP Renukacharya

#image_title

ಬೆಂಗಳೂರು: ಏನು ಮಾಡಿದರೂ ದಕ್ಕಿಸಿಕೊಳ್ಳಬಲ್ಲಷ್ಟು ಬುದ್ಧಿವಂತಿಕೆ ಮತ್ತು ಶಕ್ತಿ ಹೊಂದಿರುವ ಹೊನ್ನಾಳಿಯ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಚುನಾವಣಾ ಅಧಿಕಾರಿಗಳು ಶಾಕ್‌ ಟ್ರೀಟ್‌ಮೆಂಟ್‌ ನೀಡಿದ್ದಾರೆ. ಅವರು ಪೊಲೀಸ್‌ ಠಾಣೆಯ ಅನುಮತಿ ಪಡೆಯದೆ ಚುನಾವಣಾ ಸಭೆ ನಡೆಸಿದ್ದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ (Code of conduct) ಎಂಬ ಕಾರಣಕ್ಕೆ ಅಧಿಕಾರಿಗಳು ಸಭೆಯನ್ನು ತಡೆದರು. ಮಾತ್ರವಲ್ಲ ರೇಣುಕಾಚಾರ್ಯ ಅವರ ಕೈಯಲ್ಲಿದ್ದ ಮೈಕನ್ನೇ ಕಿತ್ತುಕೊಂಡರು.

ಈ ಘಟನೆ ನಡೆದಿರುವುದು ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ. ರಾಜ್ಯದ ಎಲ್ಲೆಡೆಯ ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಸ್ನೇಹ ಸಮ್ಮಿಲನ ಎಂಬ ಹೆಸರಿನಲ್ಲಿ ಸಭೆಯೊಂದನ್ನು ನಡೆಸುತ್ತಿದ್ದಾರೆ. ಅಂದರೆ ರಾಜ್ಯದ ಬಹುತೇಕ ಎಲ್ಲ ಕ್ಷೇತ್ರಗಳ ಕನಿಷ್ಠ ಒಂದೈದು ಸಾವಿರ ಜನರಾದರೂ ಬೆಂಗಳೂರಿನಲ್ಲಿ ಇರುತ್ತಾರೆ. ಅವರನ್ನು ತಮ್ಮ ಕಡೆಗೆ ಸೆಳೆಯುವುದು ಮತ್ತು ಅದಕ್ಕಿಂತಲೂ ಹೆಚ್ಚಾಗಿ ಮತದಾನದ ದಿನ ಅವರು ಕ್ಷೇತ್ರಕ್ಕೆ ಬಂದು ಮತದಾನದಲ್ಲಿ ಭಾಗವಹಿಸುವಂತೆ ಮನವೊಲಿಸುವುದು ಈ ಕಾರ್ಯಕ್ರಮದ ಉದ್ದೇಶ.

ಅಂತೆಯೇ ಹೊನ್ನಾಳಿ ಕ್ಷೇತ್ರದವರ ಸಭೆಯೊಂದು ಬೆಂಗಳೂರಿನ ಗುರುರಾಜ ಕಲ್ಯಾಣ ಮಂಟಪದಲ್ಲಿ ಆಯೋಜನೆಯಾಗಿತ್ತು. ಅದಕ್ಕೆ ರೇಣುಕಾಚಾರ್ಯ ಅವರು ಆಗಮಿಸಿದ್ದರು. ಸಭೆ ಆರಂಭವಾಗಿ ರೇಣುಕಾಚಾರ್ಯ ಅವರು ತಮ್ಮ ಸಾಧನೆಯ ಬಗ್ಗೆ, ಪಕ್ಷದ ವರ್ಚಸ್ಸಿನ ಬಗ್ಗೆ, ಮತದಾನಕ್ಕೆ ಬನ್ನಿ ಎಂಬ ಮನವಿಯೊಂದಿಗೆ ವಿವರಿಸುತ್ತಿದ್ದರು.

ಬಿಜೆಪಿ ಶಾಸಕ ರೇಣುಕಾಚಾರ್ಯ ಅವರ ಸಭೆಗೆ ಚುನಾವಣೆ ಅಧಿಕಾರಿಗಳಿಂದ ತಡೆ

ಆಗ ಚುನಾವಣಾ ಅಧಿಕಾರಿಗಳು ವಿಷಯ ತಿಳಿದು ಅಲ್ಲಿಗೆ ಲಗ್ಗೆ ಇಟ್ಟಿದ್ದರು. ಈ ಸಭೆ ನಡೆಸಲು ಚುನಾವಣಾ ಆಯೋಗ ಹಾರೂ ಸಂಬಂಧಪಟ್ಟ ಸ್ಟೇಷನ್‌ನಲ್ಲಿ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಗುರುರಾಜ ಕಲ್ಯಾಣ ಮಂಟಪಕ್ಕೆ ಪ್ರವೇಶ ಮಾಡಿದ ಅಧಿಕಾರಿಗಳು ಸಭೆ ನಿಲ್ಲಿಸುವಂತೆ ಸೂಚಿಸಿದರು.

ಅಧಿಕಾರಿಗಳು ಬಂದು ಸಭೆ ನಿಲ್ಲಿಸಲು ಸೂಚಿಸಿದರೂ ರೇಣುಕಾಚಾರ್ಯ ಅವರು ಮಾತ್ರ ಮಾತು ನಿಲ್ಲಿಸಲಿಲ್ಲ. ಇನ್ನೂ ಮಾತನಾಡುತ್ತಲೇ ಇದ್ದರು. ಆಗ ಅಧಿಕಾರಿಗಳೇ ಅವರ ಬಳಿಗೆ ಹೋಗಿ ಮೈಕ್‌ ಕಸಿಯಲು ಯತ್ನಿಸಿದರು. ಅಂತಿಮವಾಗಿ ರೇಣುಕಾಚಾರ್ಯ ಅವರು ಮಾತು ನಿಲ್ಲಿಸಿದರು ಸಭೆ ಅರ್ಧಕ್ಕೆ ಮೊಟಕುಗೊಂಡಿತು.

ಸಭೆ ನಡೆಯುತ್ತಿದ್ದ ಕಲ್ಯಾಣಮಂಟಪ

ಸಭೆಯ ಸಂಪೂರ್ಣ ವೀಡಿಯೊ ಚಿತ್ರೀಕರಣ ನಡೆಸಿರುವ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಕೇಸ್ ಹಾಕಲು ಸಿದ್ಧತೆ ನಡೆಸಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಸೋಮವಾರ ಎಫ್ ಐ ಆರ್ ಹಾಕುವ ಸಾಧ್ಯತೆ ಇದೆ. ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಎಫ್ ಐ ಆರ್ ದಾಖಲಾಗುವ ನಿರೀಕ್ಷೆ ಇದೆ. ಹೈಗ್ರೌಂಡ್‌ ಪೊಲೀಸರು ದಾಖಲೆಗಳನ್ನು ಮತ್ತು ಸಾಕ್ಷ್ಯಗಳನ್ನು ಸಿದ್ಧಪಡಿಸಿದ್ದಾರೆ.

ಈ ನಡುವೆ, ಅರ್ಧಕ್ಕೆ ಸಭೆ ಮುಗಿಸಿದ ರೇಣುಕಾಚಾರ್ಯ ಅವರು ಮುಂದಿನ ದಿನಗಳಲ್ಲಿ ದಾಸರಹಳ್ಳಿಯಲ್ಲಿ ಮತ್ತೊಂದು ಸಭೆ ಆಯೋಜಿಸಲಾಗುವುದು ಎಂದಿದ್ದಾರೆ. ಅಂದು ಎಲ್ಲ ಅನುಮತಿಗಳನ್ನು ಪಡೆದೇ ಸಭೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : Karnataka Elections : ನೀತಿ ಸಂಹಿತೆ ಉಲ್ಲಂಘನೆ, ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜ ವಿರುದ್ಧ ಎರಡು ದೂರು

Exit mobile version