Site icon Vistara News

Coffee-Tea Scam : ನನ್ನ ಅವಧಿಯ ಕಾಫಿ-ತಿಂಡಿ ಖರ್ಚು 200 ಕೋಟಿ ಎಂಬುದು ಸುಳ್ಳು, ಕೇವಲ 3.26 ಕೋಟಿ ರೂ: ಸಿದ್ದರಾಮಯ್ಯ ತಿರುಗೇಟು

Coffee tea scam

#image_title

ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಅವರ ಮನೆಗೆ ಆಗಮಿಸುವ ಅತಿಥಿಗಳಿಗೆ ಕಾಫಿ-ಟೀ-ತಿಂಡಿ ನೀಡುವ ಸಲುವಾಗಿ ಬರೊಬ್ಬರಿ 200 ಕೋಟಿ ರೂ. ವೆಚ್ಚ ಮಾಡಿರುವುದಾಗಿ ಸುಳ್ಳು ಲೆಕ್ಕ (Coffee-Tea Scam) ನೀಡಿದ್ದಾರೆ ಎಂಬ ಬಿಜೆಪಿ ಬೆಂಗಳೂರು ದಕ್ಷಿಣ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಆರೋಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇದೊಂದು ಸುಳ್ಳು ಆಗೋಪವಾಗಿದ್ದು, ಮಾಡಾಳ್ ವಿರೂಪಾಕ್ಷಪ್ಪ ಹಗರಣವನ್ನು ದಿಕ್ಕು ತಪ್ಪಿಸಲು ಸುಳ್ಳಿನ ಕಾರ್ಖಾನೆಯಾದ ಬಿಜೆಪಿ ಕಾಫಿ-ತಿಂಡಿ ಹಿಂದೆ ಬಿದ್ದಿದೆ‌ ಎಂದು ಗೇಲಿ ಮಾಡಿದ್ದಾರೆ. ಜತೆಗೆ ತಮ್ಮ ಅವಧಿಯಲ್ಲಿ ಕಾಫಿ, ತಿಂಡಿಗೆ ಮಾಡಿರುವ ಖರ್ಚು 3.26 ಕೋಟಿ ರೂ. ಎಂದು ಲೆಕ್ಕ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ಅವರು ಹಲವು ಮಾಹಿತಿಗಳ ಮೂಲಕ ಆರೋಪವನ್ನು ಅಲ್ಲಗಳೆದಿದ್ದಾರೆ.

ಸುಳ್ಳಿನ ಉತ್ಪಾದನೆ ಮೂಲಕ ನಾಡಿಗೆ ದ್ರೋಹ

2013-14 ರಿಂದ 2017-18 ರವರೆಗೆ ನಮ್ಮ ಸರ್ಕಾರದ ಅವಧಿಯಲ್ಲಿ 3 ಕೋಟಿ 26 ಲಕ್ಷ ರೂ ಕಾಫಿ, ತಿಂಡಿ ಮತ್ತು ಊಟ ಇತ್ಯಾದಿ ಆತಿಥ್ಯದ ವೆಚ್ಚಕ್ಕೆ ಖರ್ಚಾಗಿದ್ದರೆ, 200 ರೂ ಖರ್ಚು ಮಾಡಿದ್ದಾರೆ ಎಂದು ಸುಳ್ಳನ್ನು ಉತ್ಪಾದಿಸಿ ನಾಡಿನ ಜನತೆಗೆ ದ್ರೋಹ ಬಗೆದಿದ್ದಾರೆ. ಇದು ಐಪಿಸಿ ಕಲಂ 420 ಗೆ ಅರ್ಹವಾದ ಪ್ರಕರಣ. ಇಡೀ ಬಿಜೆಪಿಯೇ ಸುಳ್ಳಿನ ಕಾರ್ಖಾನೆ ಎಂಬುದನ್ನು ಪದೇ ಪದೇ ಪ್ರೂವ್ ಮಾಡುತ್ತಿದೆ. ಇಂದೂ ಸಹ ಮರಿ ಸುಳ್ಳಿನ ಮೆಶೀನ್ ಒಂದು ನಮ್ಮ ಸರ್ಕಾರದ ಅವಧಿಯಲ್ಲಿ ಕಾಫಿ ತಿಂಡಿಗೆಂದು 200 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂಬುದೊಂದು ಸುಳ್ಳನ್ನು ಉತ್ಪಾದಿಸಿ ಮೀಡಿಯಾಗಳಿಗೆ ಬಿಡುಗಡೆ ಮಾಡಿದೆ. ಈ ಬಿಜೆಪಿಗರು ಕರ್ನಾಟಕದ ಜನರನ್ನೇನು ಮೂರ್ಖರು ಎಂದುಕೊಂಡಿದ್ದಾರಾ? ಇವರಿಗೆ ಆತ್ಮಸಾಕ್ಷಿ ಎಂಬುದೇನಾದರೂ ಇದೆಯಾ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಇವುಗಳೇನೂ ಇಲ್ಲದ ಕಾರಣಕ್ಕೆ ಇವರನ್ನು ಸುಳ್ಳಿನ ಕಾರ್ಖಾನೆಯ ಯಂತ್ರಗಳು ಎಂದು ಕರೆಯುವುದು. 40 ಪರ್ಸೆಂಟ್ ಹಗರಣ, ಮಾಡಾಳ್ ವಿರೂಪಾಕ್ಷಪ್ಪನವರ ಹಗರಣದಿಂದ ಕಂಗಾಲಾಗಿರುವ ಬಿಜೆಪಿಯು ಇಂಥ ಸುಳ್ಳುಗಳನ್ನು ಉತ್ಪಾದಿಸಿಕೊಂಡು ಓಡಾಡುತ್ತಿದೆ.

ಹಾಗಿದ್ದರೆ ಸಿದ್ದರಾಮಯ್ಯ ಪ್ರಕಾರ ನಿಜವೇನು?

ವಾಸ್ತವ ಏನೆಂದರೆ 2013-14 ರಿಂದ 2017-18 ರವರೆಗೆ ಕಾಫಿ ತಿಂಡಿ ಸೇರಿದಂತೆ ಮುಖ್ಯಮಂತ್ರಿಗಳ ಕಚೇರಿಯು ಆತಿಥ್ಯಕ್ಕೋಸ್ಕರ ಖರ್ಚು ಮಾಡಿದ ದಾಖಲೆಗಳನ್ನು ಸರ್ಕಾರ ನನಗೆ ನೀಡಿದೆ. ಅದು ಈ ರೀತಿ ಇದೆ.
13-5-2013ರಿಂದ 30-01-2014: 85.13 ಲಕ್ಷ ರೂ.
2014-15ರಲ್ಲಿ 58.45 ಲಕ್ಷ ರೂಪಾಯಿಗಳು
2015-16ರಲ್ಲಿ 39.20 ಲಕ್ಷ ರೂಪಾಯಿಗಳು
2016-17ರಲ್ಲಿ 66,03 ಲಕ್ಷ ರೂಪಾಯಿಗಳು
2017- 18ರಲ್ಲಿ 77.26 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಒಟ್ಟಾರೆ 5 ವರ್ಷಗಳ ನಮ್ಮ ಸಕಾರದ ಅವಧಿಯಲ್ಲಿ 3.26 ಕೋಟಿ ರೂಪಾಯಿಗಳನ್ನು ಮಾತ್ರ ಮುಖ್ಯಮಂತ್ರಿಗಳ ಕಛೇರಿಯ ಸಭೆಗಳಿಗೆ, ಜನತಾದರ್ಶನಗಳು ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಕಾಫಿ, ತಿಂಡಿ ಮತ್ತು ಊಟ ಮುಂತಾದವುಗಳಿಗೆ ಖರ್ಚಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಮಾಹಿತಿ ಬಿಜೆಪಿಯವರಿಗಿದ್ದರೂ ಸಹ ರಾಜ್ಯದ ಜನರಿಗೆ 200 ಕೋಟಿ ಖರ್ಚು ಮಾಡಿದ್ದಾರೆ ಎಂದು ಸುಳ್ಳು ಹೇಳುವ ಮೂಲಕ ನಾಡಿನ ಜನರಿಗೆ ದ್ರೋಹ ಎಸಗಿದ್ದಾರೆ. ಇವರ ಮೇಲೆ ಮುಖ್ಯಮಂತ್ರಿಗಳು ಕ್ರಿಮಿನಲ್ ಮೊಕದ್ದಮೆ ಹೂಡಲು ಅಧಿಕಾರಿಗಳಿಗೆ ನಿರ್ದೇಶನ ಕೊಡುತ್ತಾರಾ ಎಂಬುದನ್ನು ಕಾದು ನೋಡುತ್ತೇನೆ. ನಿರ್ದೇಶನ ನೀಡದಿದ್ದರೆ ಇಡೀ ಬಿಜೆಪಿಯೆ ನನ್ನ ವಿರುದ್ಧ ಪಿತೂರಿ ಸುಳ್ಳಿನ ಪಿತೂರಿ ನಡೆಸುತ್ತಿದೆ ಎಂಬುದನ್ನು ಜನರು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಾರೆ.

ಎಜಿ ವರದಿಯಲ್ಲಿ ನಮ್ಮ ಮೇಲೆ ಆರೋಪವಿಲ್ಲ

ಇನ್ನು ಎಜಿ ಆಡಿಟ್ ವಿಚಾರಕ್ಕೆ ಬಂದರೆ ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ 2021ರಲ್ಲಿ 4109924 ರೂಪಾಯಿಗಳು [ 7.54 ಕೋಟಿ] ಮತ್ತು ಫೆಬ್ರವರಿ 2022 ರಲ್ಲಿ 34243290 ಕೋಟಿ ಖರ್ಚು ಮಾಡಿರುವುದರಲ್ಲಿ ದಾಖಲೆಗಳಿಲ್ಲ. ಡಿಸ್ಕ್ರಿಪೆನ್ಸಿಗಳಿವೆ ಎಂದು ಎಜಿಯವರು ತಮ್ಮ ವರದಿಯಲ್ಲಿ ಹೇಳಿದ್ದಾರೆ ಎಂದಿದ್ದಾರೆ ಸಿದ್ದರಾಮಯ್ಯ.

ನಾನು ಲೆಕ್ಕ ಕೊಟ್ಟಿದ್ದೇನೆ, ಬೊಮ್ಮಾಯಿ ಕೂಡಾ ಲೆಕ್ಕ ಕೊಡಲಿ

ನಾನು ಲೆಕ್ಕ ಕೊಟ್ಟಿದ್ದೇನೆ. ಹಾಗೆಯೆ ಬಸವರಾಜ್ ಬೊಮ್ಮಾಯಿಯವರು 2019 ರ ಜುಲೈನಿಂದ ಈ ಬಾಬತ್ತಿಗೆ ಎಷ್ಟು ಖರ್ಚಾಗಿದೆ ಎಂಬುದನ್ನು ಜನರ ಮುಂದೆ ಇಡಬೇಕೆಂದು ಆಗ್ರಹಿಸುತ್ತೇನೆ. ಮುಖ್ಯಮಂತ್ರಿಗಳು ಸರ್ಕಾರ ನಡೆಸುತ್ತಿರುವುದು ನಿಜವೇ ಆಗಿದ್ದರೆ ಬಿಜೆಪಿಯ ಮರಿ ಸುಳ್ಳಿನ ಮೆಶೀನುಗಳು ಉತ್ಪಾದಿಸಿ ಗಾಳಿಗೆ ಬಿಟ್ಟಿರುವ 200 ಕೋಟಿ ಕಾಫಿ, ತಿಂಡಿಗೆ ಸಿದ್ದರಾಮಯ್ಯ ಖರ್ಚು ಮಾಡಿದ್ದಾರೆ ಎಂಬ ದಾಖಲೆಗಳನ್ನು ಜನರ ಮುಂದೆ ಇಡಲಿ ಹಾಗೂ ಇದನ್ನೂ ಸೇರಿಸಿ 40 ಪರ್ಸೆಂಟ್ ಬಿಜೆಪಿಯ ಭ್ರಷ್ಟಾಚಾರಗಳನ್ನೂ ಸೇರಿಸಿ ನಾವು ಮೊದಲಿನಿಂದಲೂ ಒತ್ತಾಯಿಸುತ್ತಿರುವ ಹಾಗೆ ನ್ಯಾಯಾಂಗ ತನಿಖೆಗೆ ಕೊಡಲಿ ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ ಸಿದ್ದರಾಮಯ್ಯ.

ʻʻಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಸರ್ಕಾರವೆ ಇಂದು ನನಗೆ ನೀಡಿರುವ ಮಾಹಿತಿಯಂತೆ ನಮ್ಮ ಸರ್ಕಾರದ ಅವಧಿಯಲ್ಲಿ ಊಟ, ತಿಂಡಿಗೆ ಖರ್ಚಾಗಿರುವ ಮೊತ್ತ 3.26 ಕೋಟಿ ರೂಪಾಯಿಗಳನ್ನು ಮಾತ್ರ. 200 ಕೋಟಿ ರೂ. ಎಂಬುದು ಬಿಜೆಪಿಯ ಸುಳ್ಳಿನ ಕಾರ್ಖನೆಯ ಉತ್ಪಾದನೆ. ಹಾಗಾಗಿ ನಾಡಿನ ಜನರು ಬಿಜೆಪಿಯ ದುರುಳತನವನ್ನು ಹಾಗೂ ಸುಳ್ಳು ಉತ್ಪಾದನೆಯ ಮೆಶೀನುಗಳನ್ನು ತಿಪ್ಪೆಗೆಸೆದು ದ್ವೇಷ, ಹಿಂಸೆ ರಹಿತ ಸಮಾಜದ ನಿರ್ಮಾಣದ ಕಡೆಗೆ ನಡೆಯಬೇಕೆಂದು ಕೋರುತ್ತೇನೆʼʼ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ : Coffee-Tea Scam: ಸಿದ್ದರಾಮಯ್ಯ ಮನೆಯಲ್ಲಿ ಕಾಫಿ-ಟೀ-ತಿಂಡಿಗೆ 200 ಕೋಟಿ ರೂ. ವೆಚ್ಚ: ಬಿಜೆಪಿ ನಾಯಕ ಎನ್‌.ಆರ್‌. ರಮೇಶ್‌ ಆರೋಪ

Exit mobile version