ಬೆಂಗಳೂರು: ಮಂಗಳೂರಿನ ನಾಗುರಿಯಲ್ಲಿ ನವೆಂಬರ್ ೧೯ರ ಸಂಜೆ ೪.೩೦ರ ಹೊತ್ತಿಗೆ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ (ಮಂಗಳೂರು ಸ್ಫೋಟ) ರೂವಾರಿ ಶಾರಿಕ್ ಕೆಲವು ತಿಂಗಳ ಹಿಂದೆ ಕೊಯಮತ್ತೂರಿನಲ್ಲಿ ತಂಗಿದ್ದ ಲಾಡ್ಜನ್ನು ತಮಿಳುನಾಡು ಪೊಲೀಸರು ಸೀಲ್ ಮಾಡಿದ್ದಾರೆ.
ಕೊಯಮತ್ತೂರಿನ ಗಾಂಧಿಪುರಂನಲ್ಲಿರುವ ಎಂವಿಎಂ ಲಾಡ್ಜ್‌ನಲ್ಲಿ ಶಾರಿಕ್ ತಂಗಿದ್ದ ಎನ್ನುವುದನ್ನು ಪೊಲೀಸರು ದೃಢಪಡಿಸಿಕೊಂಡಿದ್ದಾರೆ. ಕಾಮರಾಜು ಎಂಬಾತನ ಒಡೆತನದಲ್ಲಿರುವ ಲಾಡ್ಜ್‌ಗೆ ಈಗ ಪೊಲೀಸರು ಬೀಗ ಹಾಕಿದ್ದು, ಮಾಲೀಕನನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಲಾಡ್ಜ್‌ನಲ್ಲಿ ರೂಮ್ ಪಡೆದಿದ್ದವರ ಮಾಹಿತಿಯನ್ನು ದಾಖಲಿಸಿಟ್ಟುಕೊಂಡಿಲ್ಲ ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕೊಯಮತ್ತೂರಿನ ಕೊಟ್ಟೈ ಈಶ್ವರನ್ ದೇವಸ್ಥಾನದ ಮುಂಭಾಗದಲ್ಲಿ ಕಳೆದ ಅಕ್ಟೋಬರ್ ೨೩ರಂದು ಕಾರು ಬಾಂಬ್ ಸ್ಫೋಟಿಸಿತ್ತು. ದೀಪಾವಳಿಯ ಮುನ್ನಾ ದಿನ ಸಂಭವಿಸಿದ ಈ ಸ್ಫೋಟದಲ್ಲಿ ಜಮೀಶಾ ಮುಬೀನ್ ಎಂಬ ಬೆಂಗಳೂರು ಮೂಲದ ಉಗ್ರ ಸತ್ತಿದ್ದ. ಆತ ಆತ್ಮಹತ್ಯೆ ಬಾಂಬರ್ ಆಗಿ ಈ ಕೃತ್ಯ ನಡೆಸಿದನೇ ಅಥವಾ ಎಲ್ಲೋ ನಿರ್ದಿಷ್ಟ ಪ್ರದೇಶಕ್ಕೆ ಬಾಂಬ್ ಒಯ್ಯುವ ವೇಳೆ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿತೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಈ ನಡುವೆ, ತಿಳಿದುಬಂದಿರುವ ಮಾಹಿತಿ ಏನೆಂದರೆ, ಶಾರಿಕ್‌ಗೂ ಮುಬೀನ್‌ಗೂ ಮೊದಲಿನಿಂದಲೂ ಸಂಬಂಧವಿದೆ ಮತ್ತು ಶಾರಿಕ್ ಕೂಡಾ ಈ ಸ್ಫೋಟದಲ್ಲಿ ಸಹಕಾರ ನೀಡಿದ್ದ ಎನ್ನುವುದು. ಕಾರು ಬಾಂಬ್ ಸ್ಫೋಟ ಸಂಭವಿಸುವುದಕ್ಕೆ ಮುನ್ನ ಕೆಲವು ದಿನಗಳ ಕಾಲ ಶಾರಿಕ್ ಕೊಯಮತ್ತೂರಿನಲ್ಲಿ ತಂಗಿದ್ದು, ಸಹಕಾರ ನೀಡಿದ್ದಕ್ಕೆ ಸಾಕ್ಷಿಯಾಗಿದೆ. ಆಗ ಅವನು ಆಶ್ರಯ ಪಡೆದಿದ್ದು ಎಂಎಎಂ ಲಾಡ್ಜ್‌ನಲ್ಲಿ. ಆದರೆ, ಈ ಬಗ್ಗೆ ಲಾಡ್ಜ್‌ನಲ್ಲಿ ಯಾವುದೇ ದಾಖಲೆ ಇರಲಿಲ್ಲ ಎನ್ನಲಾಗಿದೆ.
ಅಲ್ಲೂ ಸಿಡಿದದ್ದು ಕುಕ್ಕರ್ ಬಾಂಬ್
ಕೊಯಮತ್ತೂರು ಕಾರು ಬಾಂಬ್ ಸ್ಫೋಟದಲ್ಲೂ ಸಿಡಿದದ್ದು ಕುಕ್ಕರ್ ಬಾಂಬ್ ಆಗಿತ್ತು. ಶಾರಿಕ್ ಅದಕ್ಕೆ ಸಹಕರಿಸಲು ಹೋಗುವುದರ ಜತೆಗೆ ಕುಕ್ಕರ್ ಬಾಂಬ್ ತಯಾರಿ, ಅದರ ಜೋಡಣೆ ವಿಷಯವನ್ನು ಅರಿಯಲು ಅಲ್ಲಿ ಹೋಗಿದ್ದ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೊಯಮತ್ತೂರು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಕೊಯಮತ್ತೂರಿನಲ್ಲಿ ಈ ಹಿಂದೆಯೂ ಬಾಂಬ್ ಸ್ಫೋಟ ಸಂಭವಿಸಿದೆ. 1998ರಲ್ಲಿ ನಗರದ 18 ಕಡೆ ಬ್ಲಾಸ್ಟ್ ನಡೆದಿದ್ದು, 56 ಜನ ಸಾವನ್ನಪ್ಪಿ 200 ಜನ ಗಾಯಗೊಂಡಿದ್ದರು. ಆಲ್ ಉಮಾ ಸಂಘಟನೆ ಈ ಬಾಂಬ್ ಸ್ಫೋಟವನ್ನು ಸಂಘಟಿಸಿತ್ತು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕೊಯಮತ್ತೂರು- ಮಂಗಳೂರು ಸ್ಫೋಟಗಳ ಮಧ್ಯೆ ಇದೆಯಾ ಸಾಮ್ಯತೆ?