ಚಿಕ್ಕಬಳ್ಳಾಪುರ: ಗೃಹಲಕ್ಷ್ಮೀ ಯೋಜನೆಯಲ್ಲಿ ಹಣ ವಸೂಲಿ ಇನ್ನೂ ನಿಂತಿಲ್ಲ. ಅರ್ಜಿ ಸಲ್ಲಿಕೆಗೆ ಜನರಿಂದ ಹಣ ಸ್ವೀಕರಿಸಬಾರದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ್ದರೂ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ವಿರುದ್ಧ ಹಣ ವಸೂಲಿ ಆರೋಪ ಕೇಳಿಬಂದಿದೆ.
ಸರ್ಕಾರಿ ಯೋಜನೆ ಹೆಸರಲ್ಲಿ ಕಂಪ್ಯೂಟರ್ ಆಪರೇಟರ್ಸ್ ಹಣ ವಸೂಲಿಗಿಳಿದಿದ್ದು, ಅರ್ಜಿ ಸಲ್ಲಿಸಲು ಬರುವ ಪ್ರತಿ ಮಹಿಳೆಯಿಂದ 50 ರಿಂದ 100 ರೂ.ಗಳವರೆಗೆ ವಸೂಲಿ ಮಾಡಲಾಗುತ್ತಿದೆ. ಹಣ ವಸೂಲಿ ವಿಡಿಯೊ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಿರುವ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆಗೆ ಡೊಂಟ್ ಕೇರ್!
ಚಿಕ್ಕೋಡಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದರೂ ಗೃಹಲಕ್ಷ್ಮಿ ಯೋಜನೆಯಲ್ಲಿ ಅರ್ಜಿ ಸಲ್ಲಿಕೆ ವೇಳೆ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಿದೆ. ತಾಲೂಕಿನ ರಡ್ದೆರಹಟ್ಟಿ ಗ್ರಾಮದ ಗ್ರಾಮ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಕೆ ಹಣ ವಸೂಲಿ ಮಾಡಲಾಗುತ್ತಿದೆ.
ಅರ್ಜಿ ಶುಲ್ಕವನ್ನು ಸರ್ಕಾರವೇ ಭರಿಸುತ್ತಿದ್ದರೂ ಸರ್ಕಾರದ ನಿಯಮ ಗಾಳಿಗೆ ತೂರಿ ಗ್ರಾಮ ಒನ್ ಕೇಂದ್ರಗಳು ಹಣ ಪೀಕುತ್ತಿವೆ. ಹೀಗಾಗಿ ತಾಲೂಕು ಆಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರತಿ ಅರ್ಜಿಗೆ 12 ರೂ. ಸರ್ಕಾರವೇ ನೀಡುತ್ತದೆ
ಬೆಂಗಳೂರು: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಸಿಬ್ಬಂದಿ ಅಸಡ್ಡೆ ತೋರಿದರೆ, ಜನರಿಂದ ದುಡ್ಡು ಪಡೆದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಣ ವಸೂಲಿ ಮಾಡಿದ ಮೂವರು ಸಿಬ್ಬಂದಿ ಲಾಗಿನ್ ಐಡಿ ರದ್ದು ಮಾಡಲಾಗಿದೆ. ಸರ್ಕಾರವಾಗಲಿ, ಇಲಾಖೆಯಾಗಲಿ ಸುಮ್ಮನೆ ಕುಳಿತಿಲ್ಲ. ಹಣ ವಸೂಲಿ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ | Karnataka Politics : ಸರ್ಕಾರದಲ್ಲಿ ಅನುದಾನ ಎಲ್ಲಿದೆ? ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ತಿರುಗೇಟು!
ಅರ್ಜಿ ಸಲ್ಲಿಕೆ ಮಾಡುವವರಿಗೆ ಸರ್ಕಾರದಿಂದಲೇ 12 ರೂ. ನೀಡಲಾಗುತ್ತದೆ. 10 ರೂ. ಅಪಲೋಡ್ ಮಾಡಲು, 2 ರೂ. ಪ್ರಿಂಟ್ ಔಟ್‌ಗೆ ಕೊಡಲಾಗುತ್ತದೆ. ಹಾಗಾಗಿ ಜನರು ಯಾರಿಗೂ ದುಡ್ಡು ಕೊಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.