ಪುತ್ತೂರು: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಶ್ವರಮಂಗಲ ಸಮೀಪದ ಸುಳ್ಯಪದವು ಕನ್ನಡ್ಕದಲ್ಲಿ ನಡೆದಿದೆ.
ಕನ್ನಡ್ಕ ನಿವಾಸಿ, ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ (16) ಮೃತ ಬಾಲಕಿ. ದೀಕ್ಷಾ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈಕೆ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದು, ಸೋಮವಾರ ಲ್ಯಾಬ್ ಪರೀಕ್ಷೆಯಿತ್ತು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆ ನಂತರವಷ್ಟೇ ತಿಳಿದುಬರಬೇಕಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಅಕ್ಕ-ತಮ್ಮನ ಮೇಲೆ ನೈತಿಕ ಪೊಲೀಸ್ ಗಿರಿ ಕೇಸ್; ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ
ಶ್ರೀರಂಗಪಟ್ಟಣದಲ್ಲಿ ಕಾರು-ಸ್ಕೂಟರ್ ಡಿಕ್ಕಿಯಾಗಿ ಇಬ್ಬರು ಶಿಕ್ಷಕಿಯರ ಸಾವು
ಮಂಡ್ಯ: ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾಗಿ ಇಬ್ಬರು ಶಿಕ್ಷಕಿಯರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ಭಾನುವಾರ ನಡೆದಿದೆ. ಪಿ. ಹೊಸಹಳ್ಳಿ ಗ್ರಾಮದ ಶಾಲೆ ಶಿಕ್ಷಕಿ ನಾಗರತ್ನ, ಬಸ್ತಿಪುರ ಗ್ರಾಮದ ಶಾಲೆ ಶಿಕ್ಷಕಿ ಮಂಜುಳ ಮೃತರು.
ಮೃತರಿಬ್ಬರೂ ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದವರಾಗಿದ್ದಾರೆ. ನಾಗರತ್ನ ಅವರು ಸ್ಥಳದಲ್ಲಿ ಮೃತಪಟ್ಟರೆ, ಮಂಜುಳ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಶ್ರೀರಂಗಪಟ್ಟಣ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕೃಷಿ ಹೊಂಡಕ್ಕೆ ಬಿದ್ದು ಕಾಡು ಕೋಣ ಸಾವು
ಸೊರಬ: ಜಮೀನಿನ ಕೃಷಿ ಹೊಂಡದಲ್ಲಿ ಕಾಡು ಕೋಣ ಬಿದ್ದು ಮೃತಪಟ್ಟ ಘಟನೆ ಚಂದ್ರುಗುತ್ತಿ ಸಮೀಪದ ಅಂದವಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಅಂದವಳ್ಳಿ ಗ್ರಾಮದ ಸರ್ವೆ ನಂ. 25ರ ರೇಣುಕಮ್ಮ ಕೃಷ್ಣಪ್ಪ ಅವರ ಜಮೀನಿನ ಕೃಷಿ ಹೊಂಡದಲ್ಲಿ ರಾತ್ರಿ ವೇಳೆ ನೀರು ಕುಡಿಯಲು ಬಂದ ಸಂದರ್ಭದಲ್ಲಿ ಕಾಡು ಕೋಣ ಮೃತಪಟ್ಟಿದೆ ಎನ್ನಲಾಗಿದೆ.
ಸುಮಾರು 6 ವರ್ಷದ ಕಾಡುಕೋಣ ಮೃತಪಟ್ಟಿದ್ದು, ಇದು ಒಂದೂವರೆ ಟನ್ ತೂಕ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿ ಚಟುವಟಿಕೆಗಾಗಿ ಮಾಡಿದ್ದ ಕೃಷಿ ಹೊಂಡದಲ್ಲಿ 10 ಅಡಿ ಆಳದ ನೀರು ಇದ್ದ ಕಾರಣ ಆಯತಪ್ಪಿ ಬಿದ್ದು ಕಾಡುಕೋಣ ನೀರು ಪಾಲಾಗಿದೆ.
ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ, ಜೆಸಿಬಿ ಯಂತ್ರದ ಮೂಲಕ ಮೃತ ಕಾಡುಕೋಣವನ್ನು ಕೃಷಿ ಹೊಂಡದಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ನಂತರ ಅಂದವಳ್ಳಿ ಗ್ರಾಮದ ಕಾಡಿನಲ್ಲಿ ಹೂತು ಹಾಕಲಾಯಿತು.
ಇದನ್ನೂ ಓದಿ | Murder Case : ಗಂಡನ ಜತೆ ಸೇರಿ ಹೆತ್ತ ತಾಯಿಯನ್ನೇ ಕೊಂದಳಾ ಮಗಳು!
ಈ ಸಂದರ್ಭದಲ್ಲಿ ಡಿಸಿಎಫ್ ಸಂತೋಷ್ ಕೆಂಚಪ್ಪ, ಎಸಿಎಫ್ ರವಿಕುಮಾರ್, ವಲಯ ಅರಣ್ಯ ಅಧಿಕಾರಿ ಜಾವಿದ್ ಭಾಷಾ ಅಂಗಡಿ, ಉಪ ವಲಯದ ಅರಣ್ಯ ಅಧಿಕಾರಿ ಶರಣಪ್ಪ, ಅರಣ್ಯ ರಕ್ಷಕ ಹರೀಶ್, ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಜಗದೀಶ್, ಪಿಡಿಒ ನಾರಾಯಣಮೂರ್ತಿ, ಗ್ರಾಮ ಲೆಕ್ಕಿಗ ರಮೇಶ್, ಕರಿಬಸಪ್ಪ, ಗಿರಿಗೌಡ ಸೇರಿದಂತೆ ಮೊದಲಾದವರಿದ್ದರು.