ಹುಬ್ಬಳ್ಳಿ: ಇನ್ಫೋಸಿಸ್ ಹುಬ್ಬಳ್ಳಿ ಘಟಕ ಕಾರ್ಯಾರಂಭ ಮಾಡಿದ ಹಿನ್ನೆಲೆಯಲ್ಲಿ ಸ್ಟಾರ್ಟ್-ಇನ್ಫೋಸಿಸ್-ಹುಬ್ಬಳ್ಳಿ ತಂಡ ನಡೆಸಿದ ಅಭಿಯಾನಕ್ಕೆ ಯಶಸ್ಸು ಸಿಕ್ಕಿದೆ. ಉತ್ತರ ಕರ್ನಾಟಕದ ಯುವಕರ ಉದ್ಯೋಗಕ್ಕಾಗಿ, ಬೆಂಗಳೂರಿನಾಚೆ ಧಾರವಾಡ ಜಿಲ್ಲೆಯನ್ನು ಐಟಿ-ಬಿಟಿ ಕೇಂದ್ರ ಮಾಡುವ ದಶಕಗಳ ಕನಸು ನನಸಾಗಿದ್ದಕ್ಕೆ ಜನರು ಸೋಮವಾರ ಸಂಭ್ರಮಾಚರಣೆ ಮಾಡಿದ್ದಾರೆ.
ಒಂದೂವರೆ ತಿಂಗಳಿನಿಂದ ನಡೆಸಿದ ನಿರಂತರ ಅಭಿಯಾನಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದ್ದು, ಇನ್ಫೋಸಿಸ್ ಹುಬ್ಬಳ್ಳಿ ಘಟಕದಲ್ಲಿ ಸೋಮವಾರದಿಂದ ಸಹಾಯಕ ಸಿಬ್ಬಂದಿ (ಸಪೋರ್ಟ್ ಸ್ಟಾಫ್) ಸಂದರ್ಶನ ಕೂಡ ಶುರುವಾಗಿದೆ. ಇನ್ಫೋಸಿಸ್ ಹುಬ್ಬಳ್ಳಿ ಸಂಪೂರ್ಣ ಕಾರ್ಯಾರಂಭ ಮಾಡಿ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದರೆ 5,000 ಸಿಬ್ಬಂದಿಗೆ ಕೆಲಸ ಕೊಡಬಹುದು. ಇನ್ಫೋಸಿಸ್ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದ್ದಲ್ಲಿ ಬೇರೆ ಐಟಿ-ಬಿಟಿ ಕಂಪನಿಗಳನ್ನು ಹುಬ್ಬಳ್ಳಿ- ಧಾರವಾಡ ನಗರಗಳ ಕಡೆಗೆ ಸೆಳೆಯಬಹುದಾಗಿದೆ.
ಇದನ್ನೂ ಓದಿ | Hand Grenade | ಹ್ಯಾಂಡ್ ಗ್ರೆನೇಡ್‌ನೊಂದಿಗೆ ಆಟವಾಡಿದ ಶಾಲಾ ಮಕ್ಕಳು; ಬೆಳಗಾವಿ ಗಡಿಭಾಗದಲ್ಲಿ ಆತಂಕ
ಸ್ಟಾರ್ಟ್-ಇನ್ಫೋಸಿಸ್-ಹುಬ್ಬಳ್ಳಿ ತಂಡದ ಸದಸ್ಯರು ಈ ಐತಿಹಾಸಿಕ ದಿನದಂದು ಸಂತಸ ವ್ಯಕ್ತಪಡಿಸಿದ್ದು, ಇನ್ಫೋಸಿಸ್ ಕಟ್ಟಡ ಚಿತ್ರದ ಕೇಕ್ ಅನ್ನು ಕತ್ತರಿಸಿ ಸಿಹಿಯನ್ನು ಹಂಚಿದರು. ನೂರಾರು ವಿದ್ಯಾರ್ಥಿಗಳು, ರೈತರು, ಐಟಿ ವೃತ್ತಿಪರರು ಹಾಗು ಐಟಿ ಉದ್ಯಮಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿ ಕುಣಿದು ಕುಪ್ಪಳಿಸುತ್ತಾ ಇನ್ಫೋಸಿಸ್ ಅನ್ನು ಹುಬ್ಬಳ್ಳಿ ನಗರಕ್ಕೆ ಸ್ವಾಗತಿಸಿದರು.
ವಿಜಯೋತ್ಸವದಲ್ಲಿ ಹುಬ್ಬಳ್ಳಿ -ಧಾರವಾಡದ ಹಲವಾರು ಗಣ್ಯರು ಭಾಗಿಯಾಗಿದ್ದರು. ಎನ್.ಎಸ್. ಇನ್ಫೋಟೆಕ್ ಸಂಸ್ಥಾಪಕ ಸಂತೋಷ ಹುರಳಿಕೊಪ್ಪಿ ಭಾಗಿಯಾಗಿ ಮಾತನಾಡಿ, ಹು-ಧಾ ಹಾಗೂ ಉತ್ತರ ಕರ್ನಾಟಕ್ಕೆ ಸೋಮವಾರ ಐತಿಹಾಸಿಕ ದಿನ. ಈ ಭಾಗದ ಜನರು ಎಲ್ಲ ಕ್ಷೇತ್ರಗಳಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಬೇರೆ-ಬೇರೆ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಕನ್ನಡಿಗರು ತಾಂತ್ರಿಕ ಕ್ಷೇತ್ರದಲ್ಲಿ ಸದಾ ಮುಂದೆ ಇರುತ್ತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಅವಕಾಶ ಇಲ್ಲದ ಕಾರಣ ವಲಸೆ ಹೋಗುತ್ತಿದ್ದಾರೆ. ಈಗ ಇನ್ಫೋಸಿಸ್ ಹುಬ್ಬಳ್ಳಿ ಘಟಕ ಕಾರ್ಯಾರಂಭ ಮಾಡಿದ್ದರಿಂದ ಯುವಕರು ಬೇರೆ ಮೆಟ್ರೋ ನಗರಗಳಿಗೆ ಹೋಗುವ ಅವಶ್ಯಕತೆ ಇಲ್ಲ ಎಂದರು.
ಸ್ಟಾರ್ಟ್ -ಇನ್ಫೋಸಿಸ್-ಹುಬ್ಬಳ್ಳಿಯ ರೂವಾರಿ ಸಂತೋಷ ನರಗುಂದ ಮಾತನಾಡಿ, ಇದು ನಮ್ಮ ತಂಡದಿಂದ ಉತ್ತರ ಕರ್ನಾಟಕದ ಜನತೆಗಾಗಿ ಕೊಡುಗೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ಅಭಿಯಾನ ಇಲ್ಲಿಗೆ ನಿಲ್ಲದೇ, ಮೊದಲನೇ ಹಂತದಲ್ಲಿ ಇನ್ಫೋಸಿಸ್‌ನ ಹುಬ್ಬಳ್ಳಿ ಘಟಕದಲ್ಲಿ 1500 ಸಿಬ್ಬಂದಿ ಸಂಖ್ಯೆ ತಲುಪುವವರೆಗೂ ನಮ್ಮ ಅಭಿಯಾನ ನಿಲ್ಲುವುದಿಲ್ಲ. ಇಲ್ಲಿಯವರೆಗೆ ನಮ್ಮ ಈ ಅಭಿಯಾನಕ್ಕೆ ಉತ್ತರ ಕರ್ನಾಟಕದ ಐಟಿ ವೃತ್ತಿಪರರ ಅಭೂತಪೂರ್ವ ಬೆಂಬಲ ದೊರಕಿದೆ. ಅವರೆಲ್ಲರಿಗೂ ತಂಡದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಇನ್ಫೋಸಿಸ್ ಘಟಕ ಸ್ಥಾಪನೆಗೆ ಜಮೀನು ಕಳೆದುಕೊಂಡ ಗೋಕುಲ ಗ್ರಾಮದ ನಾಗೇಂದ್ರಪ್ಪ ಪೂಜಾರ, ರಾಮಪ್ಪ ಉಣಕಲ್, ಕೃಷ್ಣ ಬಳ್ಳಾರಿ ಮತ್ತು ಸುಮಾರು 15 ರೈತರು ಸಮಾರಂಭದಲ್ಲಿ ಭಾಗಿಯಾಗಿ ಸಂತಸ ವ್ಯಕ್ತಪಡಿಸಿ, ಭೂಮಿ ಕಳೆದುಕೊಂಡ ಪ್ರತಿಯೊಂದು ಕುಟುಂಬದ ಒಬ್ಬರಿಗೆ ಸರ್ಕಾರದಿಂದ ಇನ್ಫೋಸಿಸ್ ಘಟಕದಲ್ಲಿ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.
ಪ್ರೊ. ಪ್ರಸಾದ ರೂಡಗಿ, ಶಾಮ ನರಗುಂದ, ವಿಜಯ ಸಾಯಿ, ಆರ್.ಜೆ. ರಾಶಿದ, ಒಟ್ಟಿಲಿ ಅನಬನ ಕುಮಾರ, ಪ್ರೊ. ಶಿವಯೋಗಿ ಹುಬ್ಳಿಕರ, ನಚಿಕೇತ ಜಮಾದಾರ, ಶಿವಾನಂದ ಬೇಳವಟಗಿ, ರಾಮಪ್ರಸಾದ ದೇಶಪಾಂಡೆ, ಪ್ರಶಾಂತ ಸಿಂಗ, ಆನಂದ ಬಸವ, ಯಶ ರಜಪೂತ, ಶ್ರೀರಾಮ ರಾಯ್ಕರ್, ರೋಮಾ ಹಿರೇಮಠ, ಉದಯ ಪೆಂಡ್ಸೆ, ಭೀಮ ಸಿಂಘಿ ಉಪಸ್ಥಿತರಿದ್ದರು.
ಇದನ್ನೂ ಓದಿ | Students Missing case | ರಾಯಚೂರಿನಲ್ಲಿ ಮಿಸ್ ಆದ ಹುಡುಗಿಯರು ಹುಬ್ಬಳ್ಳಿಯಲ್ಲಿ ಪತ್ತೆ