ಹಾವೇರಿ: ಮಾಜಿ ಸಚಿವ ಹಾಗೂ ಹಾಲಿ ಎಂಎಲ್‌ಸಿ ಆರ್. ಶಂಕರ್ ಅವರ ರಾಣೆಬೆನ್ನೂರಿನ ಬೀರಲಿಂಗೇಶ್ವರ ನಗರದ ನಿವಾಸ ಹಾಗೂ ಬೆಂಗಳೂರಿನ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿರುವ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಪತ್ತೆಯಾದ ವಸ್ತುಗಳ ಒಟ್ಟು ಮೌಲ್ಯ 19 ಲಕ್ಷ ರೂ. ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಕಳೆದ ಮಾರ್ಚ್ 14ರಂದು ಅವರ ಮನೆಗಳಿಗೆ ದಾಳಿ ಮಾಡಲಾಗಿದ್ದು, ಈ ಸಂಬಂಧ ದಾಖಲಾದ ಎಫ್‌ಐಆರ್‌ನಲ್ಲಿ ಮನೆಯಲ್ಲಿ ಯಾವ್ಯಾವ ವಸ್ತುಗಳು ಸಿಕ್ಕವು, ಅವುಗಳ ಮೌಲ್ಯವೆಷ್ಟು ಎಂದು ತಿಳಿಸಲಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರ ನಗರ ಪೊಲೀಸ್ ಠಾಣೆಯಲ್ಲಿ ಶಂಕರ್ ವಿರುದ್ಧ ಪ್ರಕರಣ ದಾಖಲಾಗಿದೆ. ತಹಸೀಲ್ದಾರ್ ಗುರುಬಸವರಾಜ ಅವರ ಮೂಲಕ ದೂರು ದಾಖಲಿಸಲಾಗಿದೆ.
ರಾಣೆಬೆನ್ನೂರಿನ ಮನೆಯ ಪಕ್ಕದಲ್ಲಿದ್ದ ಗೋದಾಮಿನಲ್ಲಿ ಪತ್ತೆಯಾಗಿದ್ದ ಸೀರೆ, ಸ್ಕೂಲ್ ಬ್ಯಾಗ್, ವ್ಯಾನಿಟಿ ಬ್ಯಾಗ್, ಸ್ಟೀಲ್ ಪ್ಲೇಟ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಇವುಗಳಲ್ಲಿ 9 ಲಕ್ಷ ರೂ. ಮೌಲ್ಯದ 6 ಸಾವಿರ ಸೀರೆ, 9,67,500 ರೂ. ಮೌಲ್ಯದ 9675 ಸ್ಕೂಲ್ ಬ್ಯಾಗ್, 45 ಸಾವಿರ ರೂ. ಮೌಲ್ಯದ ವ್ಯಾನಿಟಿ ಬ್ಯಾಗ್, ಸ್ಟೀಲ್ ಪ್ಲೇಟ್, ಸ್ಟೀಲ್ ಗ್ಲಾಸ್ ಸೇರಿ ಒಟ್ಟು 19 ಲಕ್ಷದ 40 ಸಾವಿರ ರೂ. ಮೌಲ್ಯದ ವಸ್ತುಗಳು ಜಪ್ತಿಯಾಗಿವೆ. ಐಪಿಸಿ ಕಲಂ 171ಇ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
2019ರಲ್ಲಿ ಆಪರೇಷನ್ ಕಮಲ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಆರ್ ಶಂಕರ್ ಅವರು ಬಳಿಕ ರಾಣೆಬೆನ್ನೂರಿನಲ್ಲಿ ಸ್ಪರ್ಧೆ ನಡೆಸಿರಲಿಲ್ಲ. ಅವರ ಬದಲು ಬಿಜೆಪಿ ಬೇರೆಯವರಿಗೆ ಟಿಕೆಟ್ ನೀಡಿತ್ತು. ಶಂಕರ್ ಅವರನ್ನು ಎಂಎಲ್‌ಸಿ ಮಾಡಲಾಗಿತ್ತು. ಯಾವುದೇ ಮಂತ್ರಿ ಸ್ಥಾನವೂ ಸಿಕ್ಕಿರಲಿಲ್ಲ.
ಬಿಜೆಪಿ ಈ ಬಾರಿಯೂ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇಲ್ಲ. ಆರ್ ಶಂಕರ್ ಅವರು ಮರಳಿ ಕಾಂಗ್ರೆಸ್ ಕಡೆಗೆ ಹೋಗುವ ಮನಸ್ಸು ಹೊಂದಿದ್ದಾರಾದರೂ ಅವರಿಗೆ ಟಿಕೆಟ್ ಕೊಡುವ ವಾಗ್ದಾನ ದೊರೆತಿಲ್ಲ. ಹೀಗಾಗಿ ಎಲ್ಲೂ ಅವಕಾಶವಿಲ್ಲದೆ ಸಂಕಷ್ಟದಲ್ಲಿದ್ದಾರೆ ಆರ್. ಶಂಕರ್. ಈ ನಡುವೆ ಈ ಹಿಂದೆ ಗೆದ್ದಂತೆ ಸ್ವಂತ ಬಲದಿಂದ ಕಣಕ್ಕಿಳಿಯುವ ಒಂದು ಆಸೆ ಶಂಕರ್‌ಗಿದೆ. ಹೀಗಾಗಿಯೇ ಅವರು ಚುನಾವಣೆಯ ಸಂದರ್ಭದಲ್ಲಿ ಜನರ ಮನವೊಲಿಸಲು ಸೀರೆ, ಬ್ಯಾಗ್ ಹಂಚಿಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಅದಕ್ಕೂ ಈಗ ಕತ್ತರಿ ಬಿದ್ದಿದೆ.
ಕಳೆದ ಮಾರ್ಚ್ 15ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಅವರು ಎಲ್ಲರೂ ನನ್ನನ್ನು ನಡುನೀರಿನಲ್ಲಿ ಕೈಬಿಟ್ಟು ಚಂದ ನೋಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದರು. ಬಿಜೆಪಿ ಸರ್ಕಾರ ಬೇಕೆಂದೇ ತನ್ನ ಮೇಲೆ ದಾಳಿ ಮಾಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ ಇದನ್ನು ನಿರಾಕರಿಸಿದ್ದರು.
ಇದನ್ನೂ ಓದಿ : IT Raid: ಸಿಎಂ ಆದವರು ಮಾಜಿ ಆಗಲೇಬೇಕಲ್ಲವೇ; ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ: ಐಟಿ ದಾಳಿಗೆ ಶಂಕರ್ ಕಿಡಿ