Site icon Vistara News

Kiccha sudeep : ವಾಲ್ಮೀಕಿ ಜಾತ್ರೆಗೆ ಆಹ್ವಾನವೇ ಇರಲಿಲ್ಲ ಎಂದ ಕಿಚ್ಚ ಸುದೀಪ್; ಹಾಗಿದ್ದರೆ ನಿಜಕ್ಕೂ ಆಗಿದ್ದೇನು?

Kicha sudeep

#image_title

ದಾವಣಗೆರೆ: ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸಬೇಕಾಗಿದ್ದ ಖ್ಯಾತ ಚಿತ್ರ ನಟ ಕಿಚ್ಚ ಸುದೀಪ್‌ (Kiccha sudeep) ಅವರು ಗೈರು ಹಾಜರಾದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಅಲ್ಲಿ ರಣಾಂಗಣವೇ ಸೃಷ್ಟಿಯಾಗಿತ್ತು. ಅಭಿಮಾನಿಗಳು ಬೆಳಗ್ಗಿನಿಂದಲೇ ಕಿಚ್ಚ್‌ ಅವರಿಗಾಗಿ ಕಾದು, ಸಂಜೆ ನಿಗದಿತ ಸಮಯಕ್ಕೂ ಬಾರದೆ ಇದ್ದಾಗ ಸಿಟ್ಟಿಗೆದ್ದು ಕುರ್ಚಿಗಳನ್ನು ಎಸೆದಿದ್ದರು. ಇವರ ದಾಂಧಲೆ ತಡೆಯಲು ಪೊಲೀಸರು ಲಾಠಿಚಾರ್ಜ್‌ ಕೂಡಾ ನಡೆಸಬೇಕಾಯಿತು.

ಈ ಹೊತ್ತಿನಲ್ಲಿ ಹಲವು ಗಂಭೀರ ಪ್ರಶ್ನೆಗಳು ಎದ್ದಿದ್ದವು? ಸುದೀಪ್‌ ಅವರು ತಮ್ಮದೇ ಆದ ವಾಲ್ಮೀಕಿ ಜನಾಂಗದ ಈ ಕಾರ್ಯಕ್ರಮವನ್ನು ಒಪ್ಪಿಕೊಂಡು ಯಾಕೆ ಬರಲಿಲ್ಲ. ಗುರುಗಳಾದ ಶ್ರೀ ಪ್ರಸನ್ನಾನಂದ ಪುರಿ ಶ್ರೀಗಳು ಕಿಚ್ಚ ಸುದೀಪ್‌ ಬರುವುದನ್ನು ದೃಢೀಕರಿಸಿಕೊಂಡಿರಲಿಲ್ಲವೇ? ಎಲ್ಲಿ ಎಡವಟ್ಟಾಯಿತು ಎನ್ನುವ ಪ್ರಶ್ನೆ ಎದ್ದಿತ್ತು.

ಈ ನಡುವೆ ಕಿಚ್ಚ್‌ ಸುದೀಪ್‌ ಅವರು ನೀಡಿರುವ ಒಂದು ಸ್ಪಷ್ಟೀಕರಣ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ʻʻರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ನಡೆಯುವುದು, ಅದರ ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರು ಇರುವ ವಿಚಾರವೇ ತನಗೆ ಗೊತ್ತಿರಲಿಲ್ಲ. ನನಗೆ ಆಹ್ವಾನವೇ ಇರಲಿಲ್ಲʼʼ ಎಂದು ಕಿಚ್ಚ ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಅವರ ಟ್ವೀಟ್‌ನಲ್ಲಿ ಏನಿದೆ?

ಸ್ನೇಹಿತರಿಗೆ ನಲ್ಮೆಯ ನಮಸ್ಕಾರ -ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು.ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ.ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ.ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ.ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ ..ಮುಂದೆ ಖಂಡಿತ ಬರುವೆ.ಪ್ರೀತಿ ಇರಲಿ.ಶಾಂತರೀತಿಯಿಂದ ವರ್ತಿಸಿ … ಪ್ರೀತಿಯೊಂದಿಗೆ ನಿಮ್ಮ ಕಿಚ್ಚ….- ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಹಾಗಿದ್ದರೆ ಆಹ್ವಾನವೇ ಹೋಗಿಲ್ಲವೇ?
ಈಗ ಎರಡನೇ ಪ್ರಶ್ನೆಗೆ ಬರುವುದಾದರೆ ಗುರುಗಳು ಅಥವಾ ಆಡಳಿತ ಮಂಡಳಿಯವರು ಕಿಚ್ಚ್‌ ಸುದೀಪ್‌ ಅವರಿಗೆ ಗೊತ್ತಿಲ್ಲದೆಯೇ ಹೆಸರು ಹಾಕಿದರೇ? ಅವರಿಗೆ ಆಮಂತ್ರಣವನ್ನೇ ನೀಡಲಿಲ್ಲವೇ? ಎನ್ನುವುದು.

ಇದಕ್ಕೆ ಉತ್ತರವನ್ನು ರಂಗನಾಥ ಕೆ.ಎಂ. ಎನ್ನುವವರು ನೀಡಿದ್ದಾರೆ. ಇವರು ಜಾತ್ರೆ ಸಮಿತಿ ಸದಸ್ಯರಲ್ಲಿ ಒಬ್ಬರು. ಅವರ ಪ್ರಕಾರ, ಶ್ರೀಗಳು ಮತ್ತು ಜಾತ್ರಾ ಸಮಿತಿಯವರು ಕಿಚ್ಚ್‌ ಸುದೀಪ್‌ ಅವರಿಗೆ ಆಹ್ವಾನ ನೀಡಲು ಸುದೀಪ್‌ ಅವರ ಮನೆಗೆ ಹೋಗಿದ್ದರು. ಆದರೆ, ಅವರು ಮನೆಯಲ್ಲಿ ಇರಲಿಲ್ಲ. ಅವರ ತಂದೆ ಸರೋವರ್‌ ಸಂಜೀವ್‌ ಅವರಿದ್ದರು. ಅವರಲ್ಲಿ ವಿಷಯವನ್ನು ಮನವರಿಕೆ ಮಾಡಿ, ಆಹ್ವಾನ ನೀಡಿದ್ದಾರೆ. ಈ ಭೇಟಿಯ ಫೋಟೊಗಳನ್ನು ರಂಗನಾಥ್‌ ಅವರು ಟ್ವೀಟ್‌ ಮಾಡಿದ್ದಾರೆ.‌

ʻʻಪ್ರಸನ್ನನಾಂದ ಮಹಾಸ್ವಾಮಿಜೀಯವರು ಹಾಗೂ 2023 ರ ವಾಲ್ಮೀಕಿ ಜಾತ್ರೆಯ ಅದ್ಯಕ್ಷರು ಹಾಗೂ ಜಗಳೂರಿನ ಶಾಸಕರಾದ ಎಸ್ ವಿ.ರಾಮಚಂದ್ರಪ್ಪ .ಕಿಚ್ಚ ಸುದೀಪ್ ರವರ ಮನೆಗೆ ಭೇಟಿ ನೀಡಿ ಸುದೀಪ್ ರವರು ಬೆಂಗಳೂರಿನಲ್ಲಿ ಇಲ್ಲದ ಕಾರಣ ತಂದೆಯವರಾದ ಸಂಜೀವ್ ಸರ್ ರವರನ್ನ ಭೇಟಿ ಮಾಡಿ ಸುದೀಪ್ ನವರನ್ನ ಕರೆದುಕೊಂಡು ಬನ್ನಿ ಎಂದು ಆಹ್ವಾನಿಸಲಾಗಿತ್ತುʼʼ ಎಂದಿದ್ದಾರೆ ರಂಗನಾಥ್‌

ಸಂವಹನದ ಕೊರತೆ

ಒಟ್ಟಾರೆಯಾಗಿ ಈ ವಿದ್ಯಮಾನದಲ್ಲಿ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಕಿಚ್ಚ ಸುದೀಪ್‌ ಅವರನ್ನು ಜಾತ್ರೆಗೆ ಕರೆಯುವ ವಿಚಾರದಲ್ಲಿ ನೇರವಾಗಿ ಸುದೀಪ್‌ ಅವರ ಜತೆ ಸಂವಹನ ನಡೆದಿಲ್ಲ ಎಂಬಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕೆಲವೊಮ್ಮೆ ನಟರ ಆಪ್ತ ಸಹಾಯಕರ ಮೂಲಕ ನಡೆದ ಮಾತುಕತೆ ನಟರಿಗೆ ಕಮ್ಯುನಿಕೇಟ್‌ ಆಗುವುದಿಲ್ಲ. ಸ್ವಾಮೀಜಿಗಳು ಕಿಚ್ಚ ಅವರನ್ನು ನೇರವಾಗಿ ಭೇಟಿಯಾಗಲು ಹೋದಾಗ ಅವರು ಸಿಗದೆ ಇದ್ದುದು ಇನ್ನೊಂದು ಕಾರಣ.

ಅಂತೂ ಗುರುವಾರ ನಡೆದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಬಾರದೆ ದೊಡ್ಡ ದಾಂಧಲೆಯೇ ನಡೆದು ಹೋಗಿದ್ದಂತೂ ಹೌದು.

ಇದನ್ನೂ ಓದಿ : Kiccha Sudeep : ವಾಲ್ಮೀಕಿ ಜಾತ್ರೆಗೆ ಬಾರದ ನಟ ಕಿಚ್ಚ ಸುದೀಪ್‌, ಸಿಟ್ಟಿಗೆದ್ದ ಅಭಿಮಾನಿಗಳಿಂದ ಭಾರಿ ದಾಂಧಲೆ, ಲಾಠಿಚಾರ್ಜ್‌

Exit mobile version