ಬೆಂಗಳೂರು: ಕಳೆದೊಂದು ವರ್ಷದಿಂದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಅಧ್ಯಕ್ಷರ ಸ್ಥಾನ ಖಾಲಿ ಇರುವ ಹಿನ್ನೆಲೆಯಲ್ಲಿ ಆಕ್ರೋಶ ಭುಗಿಲೆದಿದ್ದೆ. ಈ ಸಂಬಂಧ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಮಕ್ಕಳ ಹಕ್ಕು ಆಯೋಗದ ಎದುರು ಪೋಷಕರು ಪ್ರತಿಭಟನೆ ನಡೆಸಿದರು.
ಒಂದು ವರ್ಷದಿಂದ ಅಧ್ಯಕ್ಷ ಸ್ಥಾನ ಖಾಲಿ ಇದ್ದು, ಮಕ್ಕಳ ಆಯೋಗಕ್ಕೆ ಬರುವ ದೂರಗಳ ತನಿಖೆ ನಡೆಸಲು ಆಯೋಗದಲ್ಲಿ ಯಾರೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಖಾಸಗಿ ಶಾಲಾ-ಕಾಲೇಜು ಪೋಷಕರ ಸಂಘಟನೆಗಳ ಸಮನ್ವಯ ಸಮಿತಿ ಪ್ರತಿಭಟಿಸಿತು.
ರಾಜ್ಯ ಪೋಷಕರ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮಕ್ಕಳ ರಕ್ಷಣಾ ಆಯೋಗ ಜೀವಂತವಾಗಿ ಇದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈವರೆಗೆ 550ಕ್ಕೂ ಹೆಚ್ಚು ದೂರು ವಿಚಾರಣೆ ಆಗದೇ ಹಾಗೇ ಉಳಿದಿವೆ. ಇತ್ತೀಚೆಗೆ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳು ಹಾಗೂ ಮಂಡ್ಯದ ಮಳವಳ್ಳಿಯ ಕಾಮುಕ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಇದೆ. ಇವುಗಳಲ್ಲಿ ಆಯೋಗ ಸುಮೋಟೋ ಕೇಸ್ ದಾಖಲು ಮಾಡಿಕೊಳ್ಳಬೇಕು.
ಆದರೆ, ಯಾವ ಕೆಲಸವನ್ನು ಕೂಡ ಮಾಡಿಲ್ಲ, ಬದಲಿಗೆ ಇಲ್ಲಿ ಕೊಡುವ ದೂರಿಗೆ ಸಹ ಸ್ಪಂದನೆ ಇಲ್ಲ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇದ್ದೂ ಸತ್ತ ಹಾಗೇ ಇದೆ. ಆಯೋಗಕ್ಕೆ ಕಳೆದ ಒಂದು ವರ್ಷದಿಂದ ಪೂರ್ಣ ಪ್ರಮಾಣದ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡದೇ ಇರುವ ಸರ್ಕಾರದ ಕ್ರಮ ಖಂಡನೀಯ. ಮಕ್ಕಳ ಹಕ್ಕು, ಮಕ್ಕಳ ರಕ್ಷಣೆ ಮಾಡಬೇಕೆಂದು ಆಯೋಗ ರಚನೆಯಾಗಿದೆ. ಆದರೆ, ನ್ಯಾಯ ಮಾತ್ರ ಸಿಗುತ್ತಿಲ್ಲ. ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ, ಬಾಕಿಯಿರುವ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕೆಂದು ಮನವಿ ಮಾಡಿದರು.
ಪೋಷಕರ ಒಕ್ಕೂಟದ ಮನವಿ ಸ್ವೀಕರಿಸಿ ಮಾತನಾಡಿದ ಮಕ್ಕಳ ಆಯೋಗದ ಕಾರ್ಯದರ್ಶಿ ವೀಣಾ, ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ. 336 ಕೇಸ್‌ಗಳು ಬಾಕಿ ಇದ್ದು, ಆದಷ್ಟು ಬೇಗ ವಿಲೇವಾರಿ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ | ಮುರುಘಾಶ್ರೀ ವಿರುದ್ಧ ಪೋಕ್ಸೊ ಪ್ರಕರಣ; ಚಿತ್ರದುರ್ಗ ಎಸ್‌ಪಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೋಟಿಸ್