Site icon Vistara News

Communal Harmony : ಉರೂಸ್‌ ಸಂಭ್ರಮದಲ್ಲಿ ಹಿಂದೂ ಶ್ರೀಗಳನ್ನು ಗೌರವಿಸಿ ಭಾವೈಕ್ಯತೆ ಮೆರೆದ ಮುಸ್ಲಿಮರು

holalu urus

#image_title

ವಿಜಯನಗರ: ಧರ್ಮ ಧರ್ಮಗಳ ನಡುವೆ ಸಂಘರ್ಷ, ಒಂದು ಧರ್ಮದ ಜಾತ್ರೆಗೆ ಇನ್ನೊಬ್ಬರು ಹೋಗಬಾರದು, ವ್ಯಾಪಾರ ಮಾಡಬಾರದು ಎನ್ನುವ ಧರ್ಮ ದಂಗಲ್‌ಗಳ ನಡುವೆ ಹೂವಿನಹಡಗಲಿ ಸೌಹಾರ್ದದ (Communal Harmony) ಸಂಭ್ರಮಕ್ಕೆ ಸಾಕ್ಷಿಯಾಯಿತು.

ಹೂವಿನಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಭಾಂದವರ ಭಾವೈಕ್ಯ ಸಂಗಮವಾದ ಗುರು ಹಜರತ್ ಮೆಹಬೂಬ ಸುಭಾನಿಗಳವರ ಉರೂಸು ಕಾರ್ಯಕ್ರಮ ವೈಭವದಿಂದ ಜರುಗಿತು. ಸೌಹಾರ್ದತೆಗೆ ಸಾಕ್ಷಿಯಾಗಿ ಗಮನ ಸೆಳೆದಿರುವ ಉರೂಸು ಆಚರಣೆಗೆ ಮುಸ್ಲಿಂ ಬಾಂದವರು ಗ್ರಾಮದ ವಿರಕ್ತ ಮಠದ ಶ್ರೀ ಚನ್ನಬಸವ ಶ್ರೀಗಳನ್ನು ಶ್ರದ್ಧಾ ಭಕ್ತಿಯಿಂದ ದರ್ಗಾಕ್ಕೆ ಬರಮಾಡಿಕೊಂಡು ದರ್ಶನಾಶೀರ್ವಾದ ಪಡೆದರಲ್ಲದೆ ಶ್ರೀಗಳ ಜೊತೆ ಹಿಂದೂ ಮುಖಂಡರನ್ನು ಗೌರವಿಸಿ ಸನ್ಮಾನಿಸಿದರು.

ಹೊಳಲು ಉರುಸ್‌ನಲ್ಲಿ ಹಿಂದೂ ಸ್ವಾಮೀಜಿಗಳಿಗೆ ಗೌರವ

ಈವೇಳೆ ಹಿರಿಯರಾದ ಮುಜಾವರ್ ಇಮಾಮ್ ಸಾಬ್ ಮಾತನಾಡಿ, ʻನಮ್ಮ ಗ್ರಾಮದ ನೂತನ ಮಠಕ್ಕೆ ಚನ್ನಬಸವ ಶ್ರೀಗಳ ಆಗಮನ ಹೊಸ ಚೈತನ್ಯವನ್ನುಂಟು ಮಾಡಿದೆ. ಕೆಲ ವರ್ಷದಿಂದ ಸ್ವಲ್ಪ ಮರೀಚಿಕೆಯಾಗಿದ್ದ ಭಾವೈಕ್ಯತೆಗೆ ಮತ್ತೆ ಹೊಸ ಚಿಗುರು ಬಂದಂತಾಗಿದೆ. ಹಿಂದೂ ಮತ್ತು ಮುಸ್ಲಿಂ ಬಾಂದವರಿಗೆ ಶ್ರೀಗಳು ಕೊಂಡಿಯಾಗಿ ಸಮಾಜದ ಎಲ್ಲಾ ಮತ ಬಾಂಧವರಿಗೆ ಸದಾ ನೆರಳಾಗಿರಲಿʼ ಎಂದು ಆಶಯ ವ್ಯಕ್ತಪಡಿಸಿದರು.

ಉರೂಸು ಅಂಗವಾಗಿ ಹರಕೆ ಹೊತ್ತ ಭಕ್ತರು ದೀಡ ನಮಸ್ಕಾರ ಹಾಕಿದರು. ಸಂತಾನ ಫಲ ಬೇಡಿದ ಭಕ್ತರು ತಮಗೆ ಸಂತಾನವಾದ ಮಗುವಿನ ತೂಕದ ಸಕ್ಕರೆಯನ್ನು ಸ್ವಾಮಿಗೆ ಅರ್ಪಿಸಿ ಕೃಪೆಯನ್ನು ಪಡೆದರು.

ರೈತ ಬಾಂಧವರು ತಮ್ಮ ಎತ್ತುಗಳನ್ನು ಶೃಂಗರಿಸಿ ಚಕ್ಕಡಿ ಹೂಡಿ ದರ್ಗಾಕ್ಕೆ ಬರುವ ಭಕ್ತರಿಗೆ ಬೆಲ್ಲದ ಸಿಹಿ ನೀರು ಹಂಚುವುದರ ಮೂಲಕ ಸೇವೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಹೊಳಲು ಹಾಗೂ ಸುತ್ತ ಮುತ್ತಗ್ರಾಮದ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮಾಜ ಬಾಂಧವರು ಇದ್ದರು.

ಇದನ್ನೂ ಓದಿ :Communal harmony : ಹಿಂದೂ ಮಹಿಳೆಯ ಶವಕ್ಕೆ ಹೆಗಲು ಕೊಟ್ಟ ಮುಸ್ಲಿಂ ಯುವಕರು, ಅನಾಥೆಗೆ ಗೌರವದ ಅಂತ್ಯ ಸಂಸ್ಕಾರ

Exit mobile version