ಬೆಂಗಳೂರು: ರಾಜ್ಯದಲ್ಲಿ ಗಣೇಶೋತ್ಸವ ವಿಚಾರಕ್ಕೆ ಸಂಬಂಧಿಸಿ ಸಾಕಷ್ಟು ಗದ್ದಲಗಳು ಕಾಣಿಸಿಕೊಂಡಿವೆ. ಒಂದು ಕಡೆ ಬೆಂಗಳೂರಿನ ಚಾಮರಾಜ ನಗರ ಮತ್ತು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವ ಸಂಬಂಧ ಗೊಂದಲಗಳು ಮುಂದುವರಿದಿದೆ. ಈ ನಡುವೆ, ರಾಜ್ಯಾದ್ಯಂತ ಗಣೇಶೋತ್ಸವಕ್ಕೆ ಅನುಮತಿ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಕೆಲವೊಂದು ಸೂಚನೆಗಳನ್ನು ಪಾಲಿಸುವಂತೆ ಸ್ಥಳೀಯಾಡಳಿತಗಳಿಗೆ ಸೂಚನೆ ನೀಡಿದೆ. ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾಗಿರುವ ಡಾ. ರಜನೀಶ್ ಗೋಯೆಲ್ ಅವರು ಈ ಸೂಚನೆಗಳನ್ನು ಹೊರಡಿಸಿದ್ದಾರೆ.
ಈ ಸೂಚನೆಗಳಲ್ಲಿ ಹೆಚ್ಚಿನವು ಹಳೆಯದೆ. ಆದರೆ, ಕೊನೆಯದಾಗಿ ನೀಡಿರುವ ಸೂಚನೆ ಈಗಿನ ಕಾಲ ಘಟ್ಟದಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಗಣೇಶೋತ್ಸವ ಆಚರಣೆಗೆ ಮುನ್ನ ಕೋಮು ಸೌಹಾರ್ದ ಸಭೆಯನ್ನು ನಡೆಸುವಂತೆ ಸೂಚಿಸಲಾಗಿದೆ. ʻʻಉತ್ಸವಕ್ಕೆ ಮುಂಚಿತವಾಗಿ ನಾಗರಿಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಮತ್ತಿತರ ಎಲ್ಲಾ ಸಂಘಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡಂತೆ ಕೋಮು ಸೌಹಾರ್ದ ಸಭೆಗಳನ್ನು ಆಯೋಜಿಸಲು ಕ್ರಮ ವಹಿಸುವುದುʼʼ ಎಂದು ಅದರಲ್ಲಿ ಹೇಳಲಾಗಿದೆ. ಈ ಬಾರಿ ಗಣೇಶೋತ್ಸವದಲ್ಲಿ ಗಣೇಶ ಮೂರ್ತಿಯ ಜತೆಗೆ ಸಾವರ್ಕರ್ ಭಾವಚಿತ್ರವನ್ನೂ ಇಡಬೇಕು ಎನ್ನುವ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ಮಹತ್ವ ಪಡೆದಿದೆ.
ಇತರ ಪ್ರಮುಖ ಸೂಚನೆಗಳು
-ಗಣೇಶ, ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪಂಡಾಲ್, ವಿದ್ಯುತ್ ಸಂಪರ್ಕ ಇನ್ನು ಮುಂತಾದ ಪರವಾನಗಿಗಳನ್ನು ನೀಡಲು ಕಂದಾಯ, ಲೋಕೋಪಯೋಗಿ, ಇಂಧನ, ಅಗ್ನಿಶಾಮಕ ಮತ್ತು ಪೋಲಿಸ್ ಇಲಾಖೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಂಯೋಜಿತವಾಗಿ ಗಣೇಶ ವಿಗ್ರಹ ಸ್ಥಾಪನೆಗೆ ಅಗತ್ಯವಿರುವ ಪರವಾನಗಿಯನ್ನು ಏಕಗವಾಕ್ಷಿ ಅಡಿಯಲ್ಲಿ ನೀಡಲು ಸೂಕ್ತ ಕ್ರಮ ವಹಿಸುವುದು.
– ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ವಾರ್ಡ್‌ಗಳ ಮಟ್ಟದಲ್ಲಿ ಸಂಬಂಧಿಸಿದ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಸ್ಥಾಪಿಸಿ ಪ್ರಚಾರ ಮಾಡುವುದು.
-ಕಾರ್ಯಕ್ರಮದ ಆಯೋಜಕರು ನಿಗದಿತ ನಮೂನೆಯಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಹಾಗೂ ಆಯೋಜಕರು ಸಲ್ಲಿಸುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳು ಜಂಟಿ ತಪಾಸಣೆ ಮಾಡಿ ಮೂರು ದಿನಗಳೊಳಗಾಗಿ ನಿಯಮಾನುಸಾರ ಪರವಾನಿಗೆಯನ್ನು ನೀಡಲು ಕ್ರಮ ವಹಿಸುವುದು.
-ಪರವಾನಗಿ ನೀಡುವ ಮುನ್ನ ಆಯೋಜಕರಿಂದ ಕಾಲಕಾಲಕ್ಕೆ ನ್ಯಾಯಾಲಯದ ನಿರ್ದೇಶನಗಳನ್ನು ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ನೀಡಿರುವ ಸೂಚನೆಗಳನ್ನು ಪಾಲಿಸುವ ಬಗ್ಗೆ, ಮುಚ್ಚಳಿಕೆಯನ್ನು ಪಡೆಯುವುದು.
– ಸಾರ್ವಜನಿಕ ಸುರಕ್ಷತೆ ಹಾಗೂ ಪರಿಸರ ಮಾಲಿನ್ಯ ಉಂಟಾಗದ ರೀತಿ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ, ಆಯೋಜಕರಿಂದ ಖಾತರಿಪಡಿಸಿಕೊಳ್ಳುವುದು. ಅಗತ್ಯವಿರುವ ಕಡೆ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸುವಂತೆ ಆಯೋಜಕರಿಗೆ ಸೂಚಿಸುವುದು.
– ವಿಶೇಷವಾಗಿ ಹೈ-ಟೆನ್ಶನ್ ತಂತಿ ಹಾದು ಹೋಗಿರುವ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಯನ್ನು ಸ್ಥಾಪಿಸಲು ಅನುಮತಿ ಕೊಡಬಾರದು.
ಇದನ್ನೂ ಓದಿ| Savarkar Photo | ಸಾವರ್ಕರ್ ಗಣೇಶೋತ್ಸವ: ರಾಜ್ಯದೆಲ್ಲೆಡೆ ಹಬ್ಬುತ್ತಿದೆ ಕಾವು