ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ವಿಷದ ಹಾವಿದ್ದಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿರುವುದಕ್ಕೆ ಬಿಜೆಪಿ (Karnataka Election) ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದೇಶದ ಪ್ರಧಾನಿಯನ್ನು ವಿಷ ಸರ್ಪಕ್ಕೆ ಹೋಲಿಸಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನ” ಎಂದು ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
“ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ತುಂಬಿದ ಸರ್ಪದ ಜತೆ ಹೋಲಿಸುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಹಳೆ ಚಾಳಿಯನ್ನು ಮುಂದುವರಿಸಿದೆ. ಖಂಡಿತವಾಗಿಯೂ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮೂಲೆಗುಂಪು ಆಗುವುದರಲ್ಲಿ ಅನುಮಾನವೇ ಇಲ್ಲ. ಪ್ರಧಾನಿಯನ್ನು ವಿಷದ ಹಾವಿಗೆ ಹೋಲಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರಧಾನಿಯಾಗಿ ಚುನಾಯಿತರಾದ ಮೋದಿ ಅವರನ್ನು ಕಾಂಗ್ರೆಸ್ ಯಾವ ರೀತಿ ಕಾಣುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ” ಎಂದು ಟೀಕಿಸಿದರು.
“ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದೆಯೂ ಮೋದಿಯವರನ್ನು ರಾವಣ ಎಂದು ಸಂಬೋಧಿಸಿದ್ದರು. ಸೋನಿಯಾ ಗಾಂಧಿ ಕೂಡ ಮೌತ್ ಕಾ ಸೌದಾಗರ್ ಹಾಗೂ ರಾಹುಲ್ ಗಾಂಧಿ ಚೋರ್ ಎಂದು ಹೇಳುವ ಮೂಲಕ ದೇಶದ ಪ್ರಧಾನಿಯನ್ನು ನಿಂದಿಸಿದ್ದರು. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದ್ದರು, ಈಗಲೂ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ಸೇರಿ ಎಲ್ಲ ವಿಷಯಗಳನ್ನು ರಾಜ್ಯದ ಜನರ ಮುಂದೆ ಇಂದಿನಿಂದಲೇ ತೆಗೆದುಕೊಂಡು ಹೋಗುತ್ತೇವೆ. ಯಾರು ವಿಷ ಸರ್ಪ ಇದ್ದಾರೆ ಎಂಬುದನ್ನು ಈ ಚುನಾವಣೆಯಲ್ಲಿ ಜನರೇ ತೀರ್ಮಾನ ಮಾಡಬೇಕು ಎಂಬುದಾಗಿ ಮನವಿ ಮಾಡುತ್ತೇವೆ” ಎಂದು ಹೇಳಿದರು.
“ರಾಜ್ಯದಲ್ಲಿ ಬಡವರಿಗೆ 61 ಲಕ್ಷ ಮನೆಗಳನ್ನು ನೀಡಿ, ಅಪ್ಪರ್ ಭದ್ರಾ ಯೋಜನೆಗೆ 5,300 ಕೋಟಿ ರೂ. ಕೊಟ್ಟು, ಕಳಸಾ ಬಂಡೂರಿ ವಿಷಯದಲ್ಲಿ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳುವ ಮೂಲಕ ಅಭಿವೃದ್ಧಿಯ ಹೈವೇಯನ್ನು ಬಿಜೆಪಿ ಸರ್ಕಾರ ನಿರ್ಮಾಣ ಮಾಡುತ್ತಿದೆ” ಎಂದು ತಿಳಿಸಿದರು.
“ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವುದಕ್ಕೆ ಕೈ ಹಾಕಿದ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರೆನು ಸತ್ಯ ಹರಿಶ್ಚಂದ್ರರಾ? ಪ್ರಧಾನಿ ನರೇಂದ್ರ ಮೋದಿ ಅವರ ಸ್ಥಾನ ಮಾನ ಗೌರವದ ಬಗ್ಗೆ ಈ ರೀತಿ ಹೇಳಿಕೆ ನೀಡುವುದು ನಿಮಗೆ ಎಷ್ಟು ಶೋಭೆ ತರುತ್ತದೆ” ಎಂದು ಎನ್. ರವಿಕುಮಾರ್ ಪ್ರಶ್ನಿಸಿದರು.
ಇದನ್ನೂ ಓದಿ: ಸಿದ್ದು ಸೋಲಿಸಲು ಡಿಕೆಶಿ, ಪರಮೇಶ್ವರ್ ಕುತಂತ್ರ; ಬಿಜೆಪಿ ಸೇರ್ಪಡೆ ಬಳಿಕ ಪರಂ ಬಲಗೈ ಬಂಟ ಆರೋಪ
“ಕಾಂಗ್ರೆಸ್ ಪಕ್ಷದ ಹುಸಿ ಭರವಸೆಗಳನ್ನು ಜನ ನಂಬಲು ಹೋಗುವುದಿಲ್ಲ. ಸುಳ್ಳು ಭರವಸೆ ನೀಡುತ್ತಿರುವ ಕಾಂಗ್ರೆಸ್ ಎಲ್ಲವನ್ನೂ ಹೇಗೆ ಉಚಿತವಾಗಿ ನೀಡುತ್ತದೆ ಎಂಬುದರ ಬಗ್ಗೆ ಆ ಪಕ್ಷದ ನಾಯಕರು ಚರ್ಚೆಗೆ ಬರಲಿ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿ ಹೈವೇ ನಿರ್ಮಾಣವಾಗಲಿದೆ” ಎಂದರು.