Site icon Vistara News

ಸರ್ಕಾರಿ ನೌಕರರ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ದಿನಾಂಕ ವಿಸ್ತರಣೆ ಇಲ್ಲ: ಪರೀಕ್ಷೆ ಎದುರಿಸಿ ಎಂದ ಸರ್ಕಾರ

ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ

ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯನ್ನು(computer literacy test) ತೆಗೆದುಕೊಳ್ಳಲು ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಜೂನ್‌ ತಿಂಗಳಲ್ಲಿ ಹೊರಡಿಸಿದ್ದ ಆದೇಶದಂತೆ 2022ರ ಡಿಸೆಂಬರ್ 31ರವರೆಗೆ ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಕಡ್ಡಾಯ ಎಂದು ಈ ಆಡಳಿತ ಕೇಂದ್ರ ಸೂಚನೆ ನೀಡಿದೆ.

ಈ ಹಿಂದೆ ನಡೆಸಿದ ಕಂಪ್ಯೂಟರ್‌ ಪರೀಕ್ಷೆಯಲ್ಲಿ ಸುಮಾರು 3,50,000 ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು, ನಿಗಮ-ಮಂಡಳಿಗಳ ಸಿಬ್ಬಂದಿ ಹಾಗೂ ಅನುತ್ತೀರ್ಣರಾದವರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಂಡಿರಲಿಲ್ಲ, ಇವರಲ್ಲಿ 86 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಅನುತ್ತೀರ್ಣರಾಗಿದ್ದರು. ಎಲ್ಲರೂ ಡಿಸೆಂಬರ್ 31ರೊಳಗೆ ಉತ್ತೀರ್ಣರಾಗಬೇಕು. ತಪ್ಪಿದ್ದಲ್ಲಿ ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ಡಿಯನ್ನು ಪಡೆಯಲು ಅರ್ಹರಾಗುವುದಿಲ್ಲ. ಹೀಗಾಗಿ ಆಯಾ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಸಿಬ್ಬಂದಿಗೆ ಪರೀಕ್ಷೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಜೂನ್‌ 8ರಂದು ಸೂಚನೆ ನೀಡಲಾಗಿತ್ತು.

ಈಗಾಗಲೆ ಆಯಾ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಇಲಾಖೆಯ ಮೇಲಧಿಕಾರಿಗಳು, ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳುಲು ಮಾಹಿತಿ ನೀಡಬೇಕು ಎಂದು ತಿಳಿಸಿರುವ ವಿಸ್ತರಿಸಲಾಗಿದೆ. ಪರೀಕ್ಷೆಯನ್ನು ತೆಗೆದುಕೊಳ್ಳಲು ಜುಲೈ 15ರಿಂದಲೇ ಅನುಕೂಲ ಮಾಡಿಕೊಡಲಾಗಿದೆ ಎಂದು ಇ ಆಡಳಿತ ಕೇಂದ್ರದ ಸಾಮರ್ಥ್ಯ ಸಂಘಟನೆ ಯೋಜನಾ ನಿರ್ದೇಶಕ ಕೆ.ಎಸ್. ಶಿವರಾಮು ಸೂಚಿಸಿದ್ದಾರೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳುವವರು https://clt.karnataka.gov.in ಹಾಗೂ https://nkclt.clt.karnataka.gov.in ವೆಬ್‌ಸೈಟ್‌ನಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ | 86,500 ಸರ್ಕಾರಿ ನೌಕರರು ಕಂಪ್ಯೂಟರ್‌ ಪರೀಕ್ಷೆಯಲ್ಲಿ ಫೇಲ್‌ !

Exit mobile version