Site icon Vistara News

CLT Exam: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸ್ ಗಡುವು ಮತ್ತೆ ವಿಸ್ತರಣೆ

CLT Exam

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (Computer Literacy Test) ಪಾಸ್ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಪರೀಕ್ಷೆ ಪಾಸ್ (CLT Exam) ಮಾಡುವುದಕ್ಕೆ ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು 2024ರ ಡಿಸೆಂಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ.

ರಾಜ್ಯ ಸರ್ಕಾರಿ ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ (CLT Exam) ಉತ್ತೀರ್ಣರಾಗಿರಲೇಬೇಕೆಂದು ರಾಜ್ಯ ಸರ್ಕಾರ ಗಡುವು ನೀಡಿತ್ತು. ಈ ಹಿಂದೆ ಹಲವು ಬಾರಿ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿತ್ತು. ಆದರೆ, ಇನ್ನೂ ಸಾಕಷ್ಟು ನೌಕರರು ಪರೀಕ್ಷೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಪರೀಕ್ಷೆ ಉತ್ತೀರ್ಣವಾಗುವ ಗಡುವು ವಿಸ್ತರಿಸಲಾಗಿದೆ.

ಈ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ತಿದ್ದುಪಡಿ ಮಾಡಲು ಹೊರಡಿಸಿದ್ದ ಅಧಿಸೂಚನೆಗೆ ಬಂದಂತಹ, ಆಕ್ಷೇಪಣೆ ಮತ್ತು ಸಲಹೆಗಳ ಮೇರೆಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸ್ ಅವಧಿಯನ್ನು 2024ರ ಡಿಸೆಂಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸೂಚಿಸಲಾಗಿದೆ.

ಇದನ್ನೂ ಓದಿ | Job Alert: ನೌಕರರ ರಾಜ್ಯ ವಿಮಾ ನಿಗಮದಲ್ಲಿದೆ ಬರೋಬ್ಬರಿ 1,930 ಹುದ್ದೆ; ಆನ್‌ಲೈನ್‌ ಮೂಲಕ ಇಂದೇ ಅರ್ಜಿ ಸಲ್ಲಿಸಿ

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯ ಮಾಡಿ 2014ರ ಡಿಸೆಂಬರ್‌ನಲ್ಲಿಯೇ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಸರ್ಕಾರಿ ನೌಕರರು ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ಕಲಿಯಬೇಕೆಂಬ ಉದ್ದೇಶದಿಂದ ಸರ್ಕಾರ ಈ ಪರೀಕ್ಷೆ ನಡೆಸುತ್ತಿದೆ. ಮೊದಲ ಬಾರಿಗೆ ಉಚಿತವಾಗಿ ಈ ಪರೀಕ್ಷೆ ಬರೆಯಬಹುದಾಗಿರುತ್ತದೆ. ಒಂದು ವೇಳೆ ಇದರಲ್ಲಿ ಉತ್ತೀರ್ಣರಾಗದೇ ಇದ್ದಲ್ಲಿ, ಮುಂದೆ ಪರೀಕ್ಷೆ ಬರೆಯಲು 359 ರೂ. ಹಾಗೂ ಬ್ಯಾಂಕ್‌ ಸೇವಾ ಶುಲ್ಕವನ್ನು ನೌಕರರು ಪಾವತಿಸ ಬೇಕಾಗಿರುತ್ತದೆ. ಶುಲ್ಕ ಪಾವತಿಸಿದ ದಿನಾಂಕದಿಂ­­­­ದ 90 ದಿನಗಳೊಳಗೆ ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿರುತ್ತದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ಕಿಯೋನಿಕ್ಸ್ ಸಂಸ್ಥೆಯು ಇ-ಆಡಳಿತ ಕೇಂದ್ರದ ಸಹಯೋಗದೊಂದಿಗೆ ಆನ್ ಲೈನ್ ನಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸುತ್ತಿದೆ. ಇದಕ್ಕಾಗಿ ವಿಶೇಷವಾದ ವೆಬ್‌ಸೈಟ್‌ ಪ್ರಾರಂಭಿಸಲಾಗಿದೆ. ನೌಕರರು ಇದರಲ್ಲಿ ಮೊದಲಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಯಶಸ್ವಿಯಾಗಿ ಹೆಸರು ನೊಂದಾಯಿಸಿಕೊಂಡವರು, ಮುಂದೆ ಪರೀಕ್ಷೆಯ ಸ್ಲಾಟ್‌ ಅನ್ನು ಬುಕ್‌ ಮಾಡಿಕೊಂಡು ನಿಗದಿತ ದಿನದಂದು ಈ ಪರೀಕ್ಷೆ ಬರೆಯಬಹುದಾಗಿರುತ್ತದೆ. ಆನ್‌ಲೈನ್‌ನಲ್ಲಿ ಮಾತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಕುರಿತು ಮಾತ್ರ ಮಾಹಿತಿ ಪಡೆಯಲು ದೂರವಾಣಿ ಸಂಖ್ಯೆ: 080-43780467/ 080-22209990

Exit mobile version