ಬೆಂಗಳೂರು: ವಿದ್ಯಾರ್ಥಿಗಳ ಸ್ಕೂಲ್ ಬ್ಯಾಗ್‌ನಲ್ಲಿ ಪುಸ್ತಕಗಳು, ನೋಟ್‌ಬುಕ್ ಬಿಟ್ಟು ಬೇರೆ ಇನ್ನೇನು ಇರಲು ಸಾಧ್ಯ? ನಿಮ್ಮ ಊಹೆ ತಪ್ಪು, ಬೆಂಗಳೂರಿನ ಕೆಲವು ಶಾಲೆಗಳ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗಿನಲ್ಲಿ(School Bag) ಕಾಂಡೋಮ್ಸ್, ಗರ್ಭ ನಿರೋಧಕಗಳು, ಲೈಟರ್ಸ್, ಸಿಗರೇಟ್ಸ್, ವೈಟ್ನರ್ ಮತ್ತು ಹಣ ದೊರೆತಿದೆ. ಇನ್ನೂ ಕೆಲವು ಮಕ್ಕಳ ನೀರಿನ ಬಾಟಲಿಯಲ್ಲಿ ಮದ್ಯ ಕೂಡ ಸಿಕ್ಕಿದೆ. ಸ್ಕೂಲ್ ಮಕ್ಕಳ ಬ್ಯಾಗಿನಲ್ಲಿ ದೊರೆತ ಈ ವಸ್ತುಗಳನ್ನ ಕಂಡು ಅಧಿಕಾರಿಗಳೇ ಹೌಹಾರಿದ್ದಾರೆ.
ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ವ್ಯವಸ್ಥಾಪಕ ಮಂಡಳಿಯು (KAMS) ಮಕ್ಕಳ ಬ್ಯಾಗುಗಳಲ್ಲಿ ಮೊಬೈಲ್ ಫೋನುಗಳ ಬಗ್ಗೆ ಪರೀಕ್ಷಿಸುವಂತೆ ಎಲ್ಲ ಶಾಲೆಗಳಿಗೆ ಸೂಚಿಸಿತ್ತು. ಅದರ ಭಾಗವಾಗಿ, ವಿವಿಧ ಶಾಲೆಗಳಲ್ಲಿ ನಡೆಸಿದ ಸ್ಕೂಲ್ ಬ್ಯಾಗ್ ತಪಾಸಣೆ ವೇಳೆ ಸಿಕ್ಕ ವಸ್ತುಗಳಿಂದ ಶಿಕ್ಷಕರು ಅಘಾತಕ್ಕೆ ಒಳಗಾಗಿದ್ದಾರೆ..
ಆಯಾ ಶಾಲೆಗಳು, ನಿರ್ದಿಷ್ಟ ವಿದ್ಯಾರ್ಥಿಗಳ ಪೋಷಕರಿಗೆ ಈ ಕುರಿತು ಮಾಹಿತಿಯನ್ನು ರವಾನಿಸಿವೆ. ಮಕ್ಕಳನ್ನು ಶಾಲೆಯಿಂದ ಡಿಬಾರ್ ಮಾಡುವ ಬದಲು, ಅವರಿಗೆ ಕೌನ್ಸೆಲಿಂಗ್ ಕೊಡಿಸಲು ಶಿಫಾರಸು ಮಾಡಲಾಗಿದೆ. ”ಶಾಲೆಯಲ್ಲೂ ಮಕ್ಕಳಿಗೆ ಕೌನ್ಸೆಲಿಂಗ್ ನೀಡುತ್ತೇವೆ. ಜತೆಗೆ ಪೋಷಕರು ತಮ್ಮ ಮಕ್ಕಳಿಗೆ ಹೊರಗಡೆಯೂ ಕೌನ್ಸೆಲಿಂಗ್ ವ್ಯವಸ್ಥೆ ಮಾಡಬೇಕು,” ಎಂದು ಶಾಲೆಗಳು ಕೋರಿವೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಹತ್ತನೇ ತರಗತಿಯ ಹುಡುಗಿಯ ಬ್ಯಾಗಿನಲ್ಲಿ ಕಾಂಡೋಮ್ ಸಿಕ್ಕ ಶಾಲೆಯ ಪ್ರಿನ್ಸಿಪಾಲ್ ಒಬ್ಬರು, ಈ ಬಗ್ಗೆ ಆ ಹುಡುಗಿಯನ್ನು ಪ್ರಶ್ನಿಸಿದಾಗ, ”ಟ್ಯೂಷನ್‌ಗೆ ಹೋಗುತ್ತಿದ್ದು, ಅಲ್ಲಿರುವ ತನ್ನ ಕ್ಲಾಸ್‌ಮೇಟ್ ಇದಕ್ಕೆ ಹೊಣೆ,” ಎಂದು ನುಣುಚಿಕೊಂಡಿದ್ದಾಳೆಂದು ತಿಳಿಸಿದ್ದಾರೆ. ”ಈಗ ಬೆಂಗಳೂರಿನ ಶೇ.80ರಷ್ಟು ಶಾಲೆಯ ಮಕ್ಕಳ ಬ್ಯಾಗುಗಳನ್ನು ಪರೀಕ್ಷಿಸಲಾಗಿದೆ. ಕೆಲವು ಮಕ್ಕಳ ಬ್ಯಾಗುಗಳಲ್ಲಿ ಐ-ಪಿಲ್, ಇನ್ನೂ ಕೆಲವು ಮಕ್ಕಳ ವಾಟರ್ ಬಾಟಲಿಯಲ್ಲಿ ಮದ್ಯ ದೊರೆತಿದೆ,” ಎಂದು ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ | Bagless Day | ಶಾಲಾ ಮಕ್ಕಳಿಗೆ ಗುಡ್ ನ್ಯೂಸ್; ಡಿಸೆಂಬರ್‌ನಿಂದ ಪ್ರತಿ ಶನಿವಾರ ಬ್ಯಾಗ್‌ಲೆಸ್ ಡೇ