ಶಿವಮೊಗ್ಗ: ಕಾಂಗ್ರೆಸ್ (Congress) ಆಡಳಿತಕ್ಕೆ ಬಂದ ಬಳಿಕ ಶಿಕಾರಿಪುರದ ಕಾಂಗ್ರೆಸ್ ಪುಡಾರಿಗಳ ಆರ್ಭಟ ಸ್ವಲ್ಪ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (BJP) 28ಕ್ಕೆ 28 ಸ್ಥಾನಗಳನ್ನು ಗೆಲ್ಲಲಿದ್ದು, ಆ ಬಳಿಕ ಕಾಂಗ್ರೆಸ್ ಪಕ್ಷದ ಟೈರ್ ಪಂಕ್ಚರ್ ಆಗಿ, ಪುಡಾರಿಗಳ ಪುಂಗಿ ಊದುವುದು ನಿಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಜಿಲ್ಲೆಯ ಶಿಕಾರಿಪುರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿದ್ದ ನೂತನ ರಾಜ್ಯಾಧ್ಯಕ್ಷರು ಹಾಗೂ ವಿರೋಧಪಕ್ಷ ನಾಯಕರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲವಿದೆ. ಆದರೂ, ರಾಜ್ಯ ಸರ್ಕಾರ ಮಲಗಿದೆ ಎಂದು ಟೀಕಿಸಿದರು.
ಅಧಿವೇಶನದಲ್ಲಿ ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದರು.
ಮುಂದಿನ ಲೋಕಸಭಾ ಚುನಾವಣೆ ದೇಶದ ಭವಿಷ್ಯ ರೂಪಿಸುವಂಥದ್ದು. ಕಾರ್ಯಕರ್ತರು ನಾನೇ ರಾಘಣ್ಣ, ನಾನೇ ಯಡಿಯೂರಪ್ಪ ಎಂದು ಭಾವಿಸಿ ಮನೆಮನೆಗೆ ಭೇಟಿ ಕೊಡಿ. ಈ ಮೂಲಕ ದೊಡ್ಡ ಅಂತರದಲ್ಲಿ ಶಿಕಾರಿಪುರದಲ್ಲಿ ಹಾಗೂ ಇತರ ಕಡೆ ಪಕ್ಷದ ಗೆಲುವಿಗೆ ಸಹಕರಿಸಿ ಎಂದು ಅವರು ಮನವಿ ಮಾಡಿದರು.
ಇದನ್ನೂ ಓದಿ: Ind vs Aus : ಭಾರತ – ಆಸ್ಟ್ರೇಲಿಯಾ ನಾಲ್ಕನೇ ಪಂದ್ಯಕ್ಕೆ ಮಳೆಯ ಅಡಚಣೆ ಇದೆಯೇ?
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಜನತೆಯ ಆಶೀರ್ವಾದದಿಂದ ವಿಜಯೇಂದ್ರ ಮತ್ತು ಅಶೋಕ್ ಅವರು ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿಜೀ ಅವರಿಗೆ ಒಂದು ಕೊಡುಗೆ ಕೊಡಬೇಕಿದೆ ಎಂದು ತಿಳಿಸಿದರು.
300 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇವೆ. ಇದಕ್ಕೆ ಸಂಸದ ರಾಘವೇಂದ್ರರ ವಿಶೇಷ ಪರಿಶ್ರಮ ಕಾರಣ ಎಂದು ವಿವರಿಸಿದರು.
ರೈತ ವಿರೋಧಿ ಸರ್ಕಾರ
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಪಂಪ್‍ಸೆಟ್‍ಗಳಿಗೆ ಬೇಕಾದ ಟ್ರಾನ್ಸ್‌ಫಾರ್ಮರ್‌ಗೆ ಹಣ, ಅದಕ್ಕೆ ಪೂರಕ ಇದ್ದಿಲು, ಮತ್ತಿತರೆ ಎಲ್ಲ ವಸ್ತುಗಳನ್ನು ರೈತರೇ ಕೊಡಬೇಕಾಗಿದ್ದು, ರಾಜ್ಯ ಸರ್ಕಾರವು ರೈತವಿರೋಧಿ ಸರ್ಕಾರ ಎಂದು ಟೀಕಿಸಿದರು.
ರಾಜ್ಯದಾದ್ಯಂತ ಸುತ್ತಾಡಿ ಕಾಂಗ್ರೆಸ್ ಜನವಿರೋಧಿ ನೀತಿಯನ್ನು ತಿಳಿಸುತ್ತೇವೆ. ಜನರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಸುಲಿಗೆ ನೀತಿ ಮುಂದುವರೆಸಿದೆ. ವಿದ್ಯುತ್ ದರವೂ ದ್ವಿಗುಣವಾಗಿದೆ ಎಂದು ತಿಳಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೀಡ್ ಕೊಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: Money Guide: ಈ ಎಲ್ಐಸಿ ಪಾಲಿಸಿಯಿಂದ ನಿರಂತರ ಆದಾಯ; ಏನಿದರ ವೈಶಿಷ್ಟ್ಯ?
ಈ ಸಂದರ್ಭದಲ್ಲಿ ಶಾಸಕ ಅರಗ ಜ್ಞಾನೇಂದ್ರ, ಜಿಲ್ಲಾಧ್ಯಕ್ಷ ಮೇಘರಾಜ್, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಎಂ.ಪಿ. ರೇಣುಕಾಚಾರ್ಯ, ತಾಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್, ಮುಖಂಡ ಗುರುಮೂರ್ತಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.