Site icon Vistara News

Karnataka Congress: ರಾಷ್ಟ್ರಪತಿಯನ್ನು ಸಂಸತ್‌ ಭವನ ಉದ್ಘಾಟನೆಗೆ ಆಹ್ವಾನಿಸದೆ ಮೋದಿ ಅಪಚಾರ: ಕಾಂಗ್ರೆಸ್‌

New Parliament Building

How Is New Parliament Building, Here Is A video

ಬೆಂಗಳೂರು: ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡದಿರುವುದು ಸಂವಿಧಾನ ಹಾಗೂ ರಾಷ್ಟ್ರಪತಿ ಹುದ್ದೆಗೆ ಮಾಡಿರುವ ಅಪಮಾನವಾಗಿದೆ. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಅಪಚಾರ ಎಸಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಟೀಕಿಸಿದೆ.

ಮುರಳೀಧರ ಹಾಲಪ್ಪ

ಈ ಬಗ್ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಪತ್ರಿಕಾ ಹೇಳಿಕೆ ನೀಡಿದ್ದು, ಸಾಂವಿಧಾನಿಕ ಸಂಸ್ಥೆಗಳನ್ನು ಗೌರವಿಸುವುದು ಪ್ರತಿ ಪ್ರಜೆಯ ಕರ್ತವ್ಯ. ಅದು ಪ್ರಧಾನಿಗಳಾಗಿರಲಿ ಅಥವಾ ಜನಸಾಮಾನ್ಯರಾಗಲಿ. ಹೀಗಾಗಿ ರಾಷ್ಟ್ರಪತಿಗಳನ್ನು ಕೇವಲ ಹೆಸರಿಗೆ ಮಾತ್ರ ಮತಬ್ಯಾಂಕ್‌ ರಾಜಕಾರಣಕ್ಕಾಗಿ ಇಟ್ಟುಕೊಳ್ಳುವುದಲ್ಲ, ಅವರಿಗೆ ಗೌರವ ನೀಡಿ ಸಂಸತ್ ಭವನ ಉದ್ಘಾಟನೆಗೆ ಆಹ್ವಾನ ನೀಡಬೇಕು ಎಂದು ಕಾಂಗ್ರೆಸ್ ವತಿಯಿಂದ ಆಗ್ರಹಿಸುತ್ತಿರುವುದಾಗಿ ಹೇಳಿದ್ದಾರೆ.

97 ವರ್ಷಗಳ ಹಿಂದೆ ಹಾಲಿ ಸಂಸತ್ ಭವನವನ್ನು 83 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿತ್ತು. ಜ. 18, 1927ರ ಜನವರಿ 18ರಂದು ಆಗಿನ ವೈಸ್ ರಾಯ್ ಲಾರ್ಡ್ ಇರ್ವಿನ್ ಉದ್ಘಾಟನೆ ಮಾಡಿದ್ದರು. ಆಗ ಸಂಸತ್ತಿನಲ್ಲಿ ಉಭಯ ಸದನಗಳಲ್ಲಿ 790 ಹಾಸನಗಳ ಸಾಮರ್ಥ್ಯವಿತ್ತು. ಕಟ್ಟಡವನ್ನು ಸರ್ ಎಡ್ವಿನ್ ಲುಟಿನ್ಸ್ ಹಾಗೂ ಸರ್ ಅರ್ಬರಕರ್ ಎಂಬುವವರು ವಿನ್ಯಾಸ ಮಾಡಿದ್ದರು. ಇಂದು ಬದಲಾದ ಸನ್ನಿವೇಶದಲ್ಲಿ ಸಂಸತ್ ಸದಸ್ಯರಿಗೆ ಸ್ಥಳದ ಕೊರತೆ ಇದೆ ಎಂದು ನೂತನ ಸಂಸತ್ ನಿರ್ಮಾಣಕ್ಕೆ 2020ರ ಡಿಸೆಂಬರ್‌ 10ರಂದು ಶಂಕುಸ್ಥಾಪನೆ ಮಾಡಿ ನೂತನ ಭವನ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | New Parliament Building: ನೂತನ ಸಂಸತ್‌ ಭವನದ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಿದ ಟಿಎಂಸಿ, ಆಪ್‌; ಕೊಟ್ಟ ಕಾರಣ ಹೀಗಿದೆ

ಶಂಕುಸ್ಥಾಪನೆ ವೇಳೆ ಆಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಯಾವುದೇ ಆಹ್ವಾನ ಇರಲಿಲ್ಲ. ಈ ಭವನಕ್ಕೆ 862 ಕೋಟಿ ವೆಚ್ಚವಾಗಿದ್ದು, ಅದರ ವಿನ್ಯಾಸಕರು ಬಿಮಲ್ ಪಟೇಲ್ ಆಗಿದ್ದಾರೆ. ಇದರಲ್ಲಿ 1272 ಹಾಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಲೋಕಸಭೆಗೆ 888 ಹಾಗೂ ರಾಜ್ಯ ಸಭೆಗೆ 384 ಹಾಸನಗಳನ್ನು ನೀಡಲಾಗಿದೆ. ಈ ನೂತನ ಸಂಸತ್‌ ಭವನದ ಉದ್ಘಾಟನೆ ಮೇ 28ರಂದು ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ ಭವನ ಉದ್ಘಾಟನೆ ಮಾಡಲಿದ್ದಾರೆ. ಆದರೆ, ಕಾರ್ಯಕ್ರಮಕ್ಕೆ ಸ್ಪೀಕರ್ ಓಂ ಬಿರ್ಲಾ ಅವರು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಆಹ್ವಾನ ನೀಡಿದ್ದು, ರಾಷ್ಟ್ರಪತಿಗಳಿಗೆ ಆಹ್ವಾನ ನೀಡಿಲ್ಲ ಎಂದು ಮುರಳೀಧರ ಹಾಲಪ್ಪ ಆರೋಪಿಸಿದ್ದಾರೆ.

ಇದನ್ನೂ ಓದಿ | New Parliament Building : ಸಂಸತ್‌ ಭವನ ನಿರ್ಮಿಸಿದ 60,000 ಕಾರ್ಮಿಕರನ್ನು ಸನ್ಮಾನಿಸಲಿದ್ದಾರೆ ಮೋದಿ

ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪರಿಶಿಷ್ಟ ಸಮುದಾಯದ ಪ್ರತೀಕವಾಗಿದ್ದು, ಈಗಿನ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಪರಿಶಿಷ್ಟ ಪಂಗಡದವರು. ಸಂಸತ್ ಎಂದರೆ ಅದರಲ್ಲಿ ರಾಷ್ಟ್ರಪತಿಗಳು ಒಂದು ಭಾಗವಾಗಿರುತ್ತಾರೆ ಎಂದು ಸಂವಿಧಾನ ಹೇಳುತ್ತದೆ. ರಾಷ್ಟ್ರಪತಿ ಹೊರತಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಇರಲು ಸಾಧ್ಯವಿಲ್ಲ. ಆದರೆ, ದುರಾದೃಷ್ಟವಶಾತ್‌, ಕೇಂದ್ರ ಸರ್ಕಾರ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯದಿಂದ ಬಂದಿರುವ ರಾಷ್ಟ್ರಪತಿಗಳನ್ನು ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಅಪಮಾನ ಮಾಡುತ್ತಿದೆ. ಇದು ಸಂವಿಧಾನಕ್ಕೆ ಮಾಡುವ ಅಪಚಾರ ಹಾಗೂ ರಾಷ್ಟ್ರಪತಿ ಹುದ್ದೆಗೆ ಅಪಮಾನವಾಗಿದೆ ಎಂದು ಕಿಡಿಕಾರಿದ್ದಾರೆ.

Exit mobile version