Site icon Vistara News

ಮತದಾರರ ಪಟ್ಟಿಯಿಂದ ಮುಸ್ಲಿಂ, ಕ್ರೈಸ್ತರ ಹೆಸರು ಡಿಲಿಟ್‌: ಕಾಂಗ್ರೆಸ್‌ ಗಂಭೀರ ಆರೋಪ, ಆಯೋಗಕ್ಕೆ ದೂರು

siraj sheikh bellary

ಬಳ್ಳಾರಿ: ಮತದಾರರ ಪಟ್ಟಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಹಿಂದುಳಿದ ವರ್ಗಕ್ಕೆ ಸೇರಿದವರ ಹೆಸರನ್ನು ವ್ಯವಸ್ಥಿತವಾಗಿ ಡಿಲಿಟ್ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಸಿರಾಜ್ ಶೇಖ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಭಯದಿಂದಾಗಿ ಕಾಂಗ್ರೆಸ್ ಮತದಾರರನ್ನು ಮತದಾರರ ಪಟ್ಟಿಯಿಂದ ಡಿಲಿಟ್ ಮಾಡುವ ಕೆಲಸ ಮಾಡಿದೆ. ವಿಧಾನಸಭಾ ಚುನಾವಣೆ ಪೂರ್ವದಲ್ಲಿಯೇ ಬೆಂಗಳೂರಿನ ಬಿಬಿಎಂಪಿ ಚುನಾವಣೆ ನಡೆಯುತ್ತಿರುವುದರಿಂದ ಅಲ್ಲಿನ ಎಂಟು ಕ್ಷೇತ್ರದಲ್ಲಿ ಒಂದೊಂದು ಕ್ಷೇತ್ರದಲ್ಲಿ 8 ರಿಂದ 10 ಸಾವಿರ ಕಾಂಗ್ರೆಸ್ ಮತದಾರರನ್ನು ವ್ಯವಸ್ಥಿತವಾಗಿ ಡಿಲಿಟ್ ಮಾಡಿದ್ದಾರೆ ಎಂದು ಆರೋಪಿಸಿದರು.

ಆಯೋಗಕ್ಕೆ ದೂರು ಸಲ್ಲಿಸಲು ನಿರ್ಧಾರ
ರಾಜ್ಯದ 224 ಕ್ಷೇತ್ರದಲ್ಲಿ ಇದೇ ಮಾದರಿಯಲ್ಲಿ ಆಗಿರಬಹುದು ಎಂಬ ಅನುಮಾನವಿದೆ. ಪಕ್ಷದಿಂದ ಕೆಲವರನ್ನು ನೇಮಕ ಮಾಡಿ, ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವ ಮತದಾರರನ್ನು ಗುರುತಿಸುವ ಕೆಲಸ ಮಾಡುತ್ತೇವೆ, ನಂತರದಲ್ಲಿ ಪಟ್ಟಿ ಸಿದ್ಧಪಡಿಸಿ, ರಾಜ್ಯ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದರು.

ಮೂರು ತಿಂಗಳಿಂದ ಮತದಾರರ ಪಟ್ಟಿ ಕೊಟ್ಟಿಲ್ಲ
ವಿಜಯನಗರ ಕ್ಷೇತ್ರದಲ್ಲಿನ ಮತದಾರರ ಪಟ್ಟಿಯನ್ನು ಕೊಡಬೇಕೆಂದು ನಾನೇ ಮಾರ್ಚ್ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದೇನೆ, ಈವರೆಗೆ ಕೊಟ್ಟಿಲ್ಲ. ಮೂರು ತಿಂಗಳ ನಂತರ 24 ಸಾವಿರ ರೂ.ಗಳ ಪಾವತಿಸಿ ಕೊಡುತ್ತೇವೆಂದು ಹೇಳುತ್ತಾರೆ, ಒಬ್ಬ ಮಾಜಿ ಶಾಸಕನ ಪರಿಸ್ಥಿತಿ ಈ ರೀತಿಯಾದರೆ, ಇನ್ನು ಜನಸಾಮಾನ್ಯರು ಮತದಾರರ ಪಟ್ಟಿ ಪಡೆಯುವುದು ಹೇಗೆ ಎಂದು ಪ್ರಶ್ನಿಸಿದರು.

ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಸಮಾವೇಶ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಪಾದಯಾತ್ರೆ ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾಗಲಿದೆ, ರಾಜ್ಯಕ್ಕೆ ಗುಂಡ್ಲು ಪೇಟೆಯಿಂದ ಎಂಟ್ರಿಯಾಗಲಿದೆ, ಯಾವ ದಿನಾಂಕದಂದು ಆಗಮಿಸಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ರಾಜ್ಯದಲ್ಲಿ 21 ದಿನಗಳ ಕಾಲ ಪಾದಯಾತ್ರೆ ಸಂಚರಿಲಿದೆ. ಪ್ರತಿನಿತ್ಯ 25 ಕಿ.ಮೀ. ಕ್ರಮಿಸಲಿದೆ, ಇದೊಂದು ಸರಳ ಪಾದಯಾತ್ರೆಯಾಗಿದ್ದು, 125 ಜನ ರಾಷ್ಟ್ರೀಯ ಮುಖಂಡರು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಬಳ್ಳಾರಿಯಲ್ಲಿ ಮಾತ್ರವೇ ಸಾರ್ವಜನಿಕ ಸಮಾವೇಶ ಏರ್ಪಡಿಸಲಾಗಿದೆ ಎಂದರು.

ಶರಣರದು ಸೂಕ್ಷ್ಮ ವಿಚಾರ
ʻʻಮುರುಘಾ ಶರಣರದು ಸೂಕ್ಷ್ಮ ವಿಚಾರ, ಅದಕ್ಕಾಗಿ ಪ್ರತಿಕ್ರಿಯೆ ನೀಡಿಲ್ಲ, ಈ ಮಠದಿಂದ ಯಾರು ಇಂತಹ ಕೃತ್ಯವನ್ನು ನಿರೀಕ್ಷೆ ಮಾಡಿರಲಿಲ್ಲ, ಎಲ್ಲರಿಗೂ ಅಚ್ಚರಿ ಮೂಡಿಸಿದೆʼʼ ಎಂದ ಅವರು, ಮತಗಳು ತಪ್ಪಿ ಹೋಗುತ್ತವೆ ಎಂಬ ಭಯ ನಮಗಿಲ್ಲ, ಸರಕಾರವೇ ನಿಷ್ಪಕ್ಷಪಾತ ತನಿಖೆಗೆ ಸಿದ್ಧವೆಂದಾಗ, ಪ್ರತಿಭಟಿಸಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಫೀಕ್, ಮೇಯರ್ ರಾಜೇಶ್ವರಿ, ಮುಖಂಡರಾದ ಆಂಜಿನೇಯಲು, ರಮಣ, ಅಲ್ಲಂ ಪ್ರಶಾಂತ್, ಗಾದೆಪ್ಪ, ಮಾರೆಣ್ಣ, ಮಾನಯ್ಯ, ವಿವೇಕ್, ಜಗನ್, ವೆಂಕಟೇಶ್, ಮುಂಡರಗಿ ನಾಗರಾಜ್, ಎರಕಲಸ್ವಾಮಿ, ಬಿ.ಎಂ. ಪಾಟೀಲ್ ಸೇರಿದಂತೆ ಇತರರು ಇದ್ದರು.

Exit mobile version