ಹುಬ್ಬಳ್ಳಿ: ಸೇನಾ ನೇಮಕಾತಿ ಕುರಿತಂತೆ ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ ಯೋಜನೆಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರದ ಯೋಜನೆ ವಿರುದ್ಧ ಯುವಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಅವರನ್ನು ಯಾರೂ ಪ್ರಚೋದಿಸಿಲ್ಲ. ಕೇಂದ್ರ ಸರ್ಕಾರ ಮೊದಲು ಯೋಜನೆಯನ್ನು ಸ್ಥಗಿತಗೊಳಿಸಬೇಕು. ದೇಶಾದ್ಯಂತ ಯೋಜನೆಯ ಕುರಿತು ಮಾಹಿತಿ ನೀಡಬೇಕು. ಎಲ್ಲರೂ ಒಪ್ಪುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ | ಅಗ್ನಿಪಥ್ ವಿರೋಧವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ, ರಾಜನಾಥ್ ನೇತೃತ್ವದಲ್ಲಿ ಸೇನಾ ಮುಖ್ಯಸ್ಥರ ಸಭೆ
ಹಿಂಸಾತ್ಮಕ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹಿಂಸಾತ್ಮಕ ಪ್ರತಿಭಟನೆಗೆ ಬೆಂಬಲ ಇಲ್ಲ ಎಂದು ಮೊದಲೇ ಹೇಳಿದ್ದೇನೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ಶಾಂತಿ ಬಿಟ್ಟು ಹಿಂಸಾತ್ಮಕ ಕೃತ್ಯಕ್ಕೆ ಮುಂದಾಗಬಾರದು ಎಂದರು.
ಛಲವಾದಿ ನಾರಾಯಣಸ್ವಾಮಿಯ ತಪ್ಪಲ್ಲ
ತಮ್ಮ ವಿರುದ್ಧ ಜಾತಿ ನಿಂದನೆ ಆರೋಪವನ್ನು ಬಿಜೆಪಿ ಎಸ್‌ಸಿ. ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾಡಿರುವ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನನಗೆ ಜಾತಿಗಳ ಬಗ್ಗೆ ತಿಳಿದಿದೆ. ನಾನು ಲಾಯರ್ ಆಗಿದ್ದರಿಂದ ಅರಿತಿದ್ದೇನೆ. ನಾನ್ಯಾಕೆ ಜಾತಿ ನಿಂದನೆ ಮಾಡಲಿ? ಬಿಜೆಪಿಯವರು ಛಲವಾದಿ ನಾರಾಯಣಸ್ವಾಮಿ ಅವರ ತಲೆ ಮೇಲೆ ಹಳೆ ಚಡ್ಡಿ ಹೊರಿಸಿ ಅವಮಾನ ಮಾಡಿದ್ದಾರೆ ಎಂದು ಹೇಳಿದ್ದೆ. ಇದರಲ್ಲಿ ಛಲವಾದಿ ನಾರಾಯಣಸ್ವಾಮಿ ಅವರ ತಪ್ಪೇನೂ ಇಲ್ಲ. ಬಿಜೆಪಿಯವರ ತಪ್ಪು ಎಂದು ಸಮಜಾಯಿಶಿ ನೀಡಿದರು.