Site icon Vistara News

BBMP Election: ಬಿಬಿಎಂಪಿ ಎಲೆಕ್ಷನ್‌ಗೆ ಸಿದ್ಧತೆ ಆರಂಭಿಸಿದ ಕಾಂಗ್ರೆಸ್‌; ಪೂರ್ವತಯಾರಿ ಸಮಿತಿ ರಚನೆ

BBMP Office

BBMP Prohibits Animal Slaughter, Meat Sale On Ganesh Chaturthi

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್‌ ಸಿದ್ಧತೆ ಆರಂಭಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಬಹುಮತದೊಂದಿಗೆ ಸರ್ಕಾರ ರಚಿಸಿದ ರೀತಿಯಲ್ಲೇ ರಾಜಧಾನಿಯಲ್ಲಿ ಬಿಬಿಎಂಪಿ (BBMP Election) ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್‌ ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿಯಿಂದ ಬಿಬಿಎಂಪಿ ಚುನಾವಣಾ ಪೂರ್ವತಯಾರಿ ಸಮಿತಿ ರಚನೆ ಮಾಡಲಾಗಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಇದರಲ್ಲಿ ಒಟ್ಟು 11 ಮಂದಿ ಸದಸ್ಯರಿದ್ದಾರೆ. ಈ ಸಮಿತಿಯು ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು, ಕಾನೂನಾತ್ಮಕ ಸಾಧಕ ಬಾಧಕಗಳನ್ನು ಪರಾಮರ್ಶಿಸಬೇಕು. ಎಲ್ಲ ವಾರ್ಡ್‌ಗಳಲ್ಲಿ ಯಶಸ್ವಿಯಾಗಿ ಚುನಾವಣೆ ಎದುರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು 15 ದಿನಗಳೊಳಗೆ ಕೂಲಂಕಷ ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೂಚಿಸಿದ್ದಾರೆ.

ಸಮಿತಿಯಲ್ಲಿ ಯಾರಿದ್ದಾರೆ?

1.ರಾಮಲಿಂಗಾರೆಡ್ಡಿ, ಸಚಿವರು (ಅಧ್ಯಕ್ಷ)
2. ದಿನೇಶ್‌ ಗುಂಡೂರಾವ್‌, ಸಚಿವರು
3. ಕೃಷ್ಣಭೈರೇಗೌಡ, ಸಚಿವರು
4. ಡಿ.ಕೆ.ಸುರೇಶ್‌, ಸಂಸದ
5. ಎನ್‌.ಎ. ಹ್ಯಾರಿಸ್, ಶಾಸಕ
6. ಬೈರತಿ ಸುರೇಶ್, ಶಾಸಕ
7. ಪ್ರಿಯಕೃಷ್ಣ, ಶಾಸಕ
8. ಎ.ಎಸ್‌.ಪೊನ್ನಣ್ಣ, ಶಾಸಕ
9. ಪಿ.ಆರ್.ರಮೇಶ್, ಮಾಜಿ ಮಹಾಪೌರರು (ಸಂಚಾಲಕರು)
10. ರಮೇಶ್‌ ಬಾಬು, ಮಾಜಿ ಶಾಸಕ
11. ಜಿ.ಪದ್ಮಾವತಿ ಮಾಜಿ ಮಹಾಪೌರರು

ಇದನ್ನೂ ಓದಿ | Textbook Revision: ಪಠ್ಯದಲ್ಲಿನ ಬಿಜೆಪಿ ಎಡವಟ್ಟುಗಳನ್ನು ನಾವು ತಿದ್ದುತ್ತೇವೆ: ಸಚಿವ ಎಚ್‌ ಸಿ ಮಹದೇವಪ್ಪ

2020ರಲ್ಲೇ ಸದಸ್ಯರ ಅವಧಿ ಮುಗಿದಿತ್ತು!

ಬಿಬಿಎಂಪಿ ಚುನಾಯಿತ ಸದಸ್ಯರ ಅವಧಿ 2020ರ ಸೆಪ್ಟೆಂಬರ್‌ನಲ್ಲೇ ಅಂತ್ಯಗೊಂಡಿತ್ತು. ಆದರೆ, ವಾರ್ಡ್‌ ಮರು ವಿಂಗಡಣೆ, ಮೀಸಲಾತಿ, ವಾರ್ಡ್‌ ಸಂಖ್ಯೆ ಹೆಚ್ಚಳ, ವಿಧಾನಸಭಾ ಚುನಾವಣೆ ಮತ್ತಿತರ ಕಾರಣಗಳಿಂದ ಈ ಹಿಂದಿನ ಬಿಜೆಪಿ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಲೇ ಬಂದಿತ್ತು.

ವಾರ್ಡ್‌ ಮರು ವಿಂಗಡಣೆ ನಂತರ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 198ರಿಂದ 243ಕ್ಕೆ ಏರಿಕೆಯಾಗಿತ್ತು. ಆದರೆ, ಅವೈಜ್ಞಾನಿಕವಾಗಿ ವಾರ್ಡ್‌ ಮರು ವಿಂಗಡಣೆ ಮತ್ತು ಮೀಸಲು ನಿಗದಿ ಮಾಡಲಾಗಿದೆ ಎಂದು ಕಾಂಗ್ರೆಸ್‌ ವಲಯದಿಂದ ಆರೋಪ ಕೇಳಿಬಂದಿತ್ತು, ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಬಳಿಕ ನ್ಯಾಯಾಲಯ ಕೂಡ ಚುನಾವಣೆ ನಡೆಸುವಂತೆ ಮೂರು ನಾಲ್ಕು ಬಾರಿ ಗಡುವು ನೀಡಿತ್ತು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಶೀಘ್ರದಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಸಿದ್ಧತೆ ನಡೆಸುತ್ತಿವೆ.

Exit mobile version